ಬೆಂಗಳೂರು: ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಮುಖ್ಯಮಂತ್ರಿಗಳು ಕೊನೆಯ ಪ್ರಯತ್ನಕ್ಕೆ ಮುಂದಾದಂತೆ ಕಾಣುತ್ತಿದೆ. ಇಂದು ಬೆಳಗ್ಗೆ 11 ಗಂಟೆಗೆ ಸಂಪುಟ ಸಭೆ ಕರೆದಿರುವ ಮುಖ್ಯಮಂತ್ರಿಗಳು, ಎರಡೂ ಪಕ್ಷಗಳ ಸಚಿವರೊಂದಿಗೆ ಸರ್ಕಾರದ ಅಳಿವು-ಉಳಿವಿನ ಬಗ್ಗೆ ಚರ್ಚಿಸಲಿದ್ದಾರೆ. ಈಗಾಗಲೇ ಅಲ್ಪಮತಕ್ಕೆ ಕುಸಿದಿರುವ ಮೈತ್ರಿ ಸರ್ಕಾರಕ್ಕೆ ಅತೃಪ್ತ ಶಾಸಕರು ಶಾಕ್ ಮೇಲೆ ಶಾಕ್ ನೀಡುತ್ತಿದ್ದಾರೆ. ಈ ಎಲ್ಲ ಬೆಳವಣಿಗೆಗಳ ನಡುವೆಯೂ ಬುಧವಾರ ಹೊಸಕೋಟೆಯ ಎಂಟಿಬಿ ನಾಗರಾಜ್ ಮತ್ತು ಚಿಕ್ಕಬಳ್ಳಾಪುರದ ಕೆ.ಸುಧಾಕರ್ ತಮ್ಮ ಶಾಸಕ ಸ್ಥಾನಕ್ಕೆ ರಾಜೀನಾಮೆ ನೀಡಿ ರಾಜ್ಯಪಾಲರನ್ನು ಭೇಟಿಯಾದರು.
ಈಗಾಗಲೇ 15 ಶಾಸಕರು ರಾಜೀನಾಮೆ ನೀಡಿದ್ದಾರೆ. ಇತ್ತ ಪಕ್ಷೇತರ ಶಾಸಕರಿಬ್ಬರು ಮೈತ್ರಿಗೆ ನೀಡಿದ ಬೆಂಬಲ ವಾಪಸ್ ಪಡೆದು ಬಿಜೆಪಿ ಮನೆ ಸೇರಿಕೊಂಡಿದ್ದಾರೆ. ಇಂದು ಸಹ ಕೆಲ ಶಾಸಕರು ರಾಜೀನಾಮೆ ನೀಡುವ ಸಾಧ್ಯತೆಗಳಿವೆ. ಇತ್ತ ಬಿಜೆಪಿ ಪಕ್ಷೇತರ ಶಾಸಕರಿಬ್ಬರ ಬೆಂಬಲದೊಂದಿಗೆ ಸರ್ಕಾರ ರಚಿಸುವ ಉತ್ಸಾಹದಲ್ಲಿದೆ. ಹಾಗಾದ್ರೆ ದೋಸ್ತಿ ನಾಯಕರ ಮುಂದಿರುವ ಆಯ್ಕೆಗಳು ಹೀಗಿವೆ.
‘ದೋಸ್ತಿ’ಗಳ ಮುಂದಿರುವ ಆಯ್ಕೆಗಳು:
1. ಮೈತ್ರಿ ಸರ್ಕಾರ ಉಳಿಸಿಕೊಳ್ಳಲು ಜೆಡಿಎಸ್ ಎಲ್ಲ ತ್ಯಾಗಕ್ಕೂ ಸಿದ್ಧವಾಗಿ, ಸಿದ್ದರಾಮಯ್ಯ ಅವರಿಗೆ ಸಿಎಂ ಸ್ಥಾನವನ್ನು ಬಿಟ್ಟುಕೊಡಬಹುದು. ರಾಜೀನಾಮೆ ನೀಡಿದ ಬಹುತೇಕ ಶಾಸಕರೆಲ್ಲರೂ ಸಿದ್ದರಾಮಯ್ಯನವರ ಆಪ್ತ ವಲಯದಲ್ಲಿ ಗುರುತಿಸಿಕೊಂಡಿದ್ದಾರೆ. ಸಿದ್ದರಾಮಯ್ಯರಿಗೆ ಸಿಎಂ ಪಟ್ಟ ಕಟ್ಟಿದ್ರೆ ಅತೃಪ್ತರೆಲ್ಲರೂ ರಾಜೀನಾಮೆ ಹಿಂಪಡೆಯುವ ಸಾಧ್ಯತೆ ಹೆಚ್ಚು ಎಂದು ದಳಪತಿಗಳ ಲೆಕ್ಕಾಚಾರವಾಗಿದೆ.
2. ಆಗಿದ್ದು ಆಗಲಿ ಎಂದು ರಾಜ್ಯಪಾಲರು ಮಧ್ಯಪ್ರವೇಶಿಸುವರೆಗೂ ಸರ್ಕಾರ ನಡೆಸುವುದು. ನಂತರ ಬಹುಮತ ಸಾಬೀತಿಗೆ ಮುಂದಾಹಬಹುದು ಅಥವಾ ರಾಜೀನಾಮೆ ನೀಡಿ ಹೆಚ್ಚಿನ ಮುಖಭಂಗವನ್ನು ಸಿಎಂ ತಪ್ಪಿಸಿಕೊಳ್ಳಬಹುದು.
3. ಇಂದು ಕರೆದಿರುವ ಸಂಪುಟ ಸಭೆಯಲ್ಲಿ ಸಿಎಂ ಸರ್ಕಾರದ ಬಗ್ಗೆ ನಿರ್ಧಾರ ತೆಗೆದುಕೊಳ್ಳಲಿದ್ದಾರೆ ಎನ್ನಲಾಗುತ್ತಿದೆ. ನಾಳೆಯಿಂದ ಆರಂಭವಾಗೋ ಅಧಿವೇಶನದಲ್ಲಿ ಯಡಿಯೂರಪ್ಪ ಅವರ ರೀತಿಯಲ್ಲಿ ವಿದಾಯದ ಭಾಷಣ ಮಾಡಿ, ಬಹುಮತ ಸಾಬೀತಿಗೆ ಮುನ್ನವೇ ವಿಧಾನಸೌಧದಿಂದ ಹೊರ ಬರಬಹುದು. ತಮ್ಮ ವಿದಾಯದ ಭಾಷಣದಲ್ಲಿ ಆಪರೇಷನ್ ಕಮಲದ ಬಗ್ಗೆ ಪ್ರಸ್ತಾಪಿಸಿ, ಬಿಜೆಪಿ ನಾಯಕರ ವಿರುದ್ಧ ಕಿಡಿಕಾರಬಹುದು.