1 ಲಕ್ಷದವರೆಗಿನ ಚಾಲ್ತಿ ಸಾಲಮನ್ನಾ, ಅನ್ನಭಾಗ್ಯ ಅಕ್ಕಿ ಯಥಾಸ್ಥಿತಿ -ತೈಲ, ವಿದ್ಯುತ್ ಸೆಸ್ ಇಳಿಕೆ ಇಲ್ಲ

Public TV
2 Min Read

ಬೆಂಗಳೂರು: ಬಜೆಟ್ ಹಾಗೂ ಸಾಲಮನ್ನಾ ವಿಚಾರವಾಗಿ ದೋಸ್ತಿಗಳು, ಸ್ವಪಕ್ಷೀಯರು, ಪ್ರತಿಪಕ್ಷ ಹಾಗೂ ರೈತಾಪಿ ವರ್ಗದ ಮನವಿ ಮತ್ತು ಒತ್ತಡಕ್ಕೆ ಸಿಎಂ ಕುಮಾರಸ್ವಾಮಿ ಕೊನೆಗೂ ಮಣಿದಿದ್ದು ಅನ್ನ ಭಾಗ್ಯದ ಅಡಿಯಲ್ಲಿ 7 ಕೆಜಿ ಅಕ್ಕಿ ನೀಡಲಾಗುವುದು ಎಂದು ಹೇಳಿದ್ದಾರೆ.

ಸಂಪೂರ್ಣ ಸಾಲಮನ್ನಾ ಆಗದಿದ್ದರೂ ಇದೀಗ ಸಹಕಾರಿ ಸಂಘಗಳಲ್ಲಿನ 1 ಲಕ್ಷ ರೂಪಾಯಿವರೆಗಿನ `ಚಾಲ್ತಿ ಸಾಲ’ವನ್ನು ಮನ್ನಾ ಮಾಡೋದಾಗಿ ಘೋಷಿಸಿದ್ದಾರೆ. ಈ ಮೂಲಕ, ರೈತರ ಹೊರೆ ಇಳಿಸಿದ್ದಾರೆ. ಆದರೆ, ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಏರಿಕೆಯನ್ನ ಸಮರ್ಥಿಸಿಕೊಂಡಿದ್ದಾರೆ.

ಸಾಲಮನ್ನಾಗೆ ಸಂಬಂಧಿಸಿದಂತೆ ಈಗಾಗಲೇ ಎಲ್ಲಾ ಬ್ಯಾಂಕುಗಳ ಅಧ್ಯಕ್ಷರು, ಅಧಿಕಾರಿಗಳ ಜೊತೆ ಚರ್ಚೆ ಮಾಡಿದ್ದೇನೆ. ಬೆಳಗಾವಿ ವಿಭಾಗದ 9,500 ಕೋಟಿ ರೂ ಸಾಲ ಮನ್ನಾ ಮಾಡಲಾಗಿದೆ. ಬೆಂಗಳೂರು ವಿಭಾಗಕ್ಕೆ 6,300 ಕೋಟಿ ಸಾಲಮನ್ನಾ, ಮೈಸೂರು ವಿಭಾಗದ 6,760 ಕೋಟಿ ರೂ ಸಾಲಮನ್ನಾ, ಕಲಬುರ್ಗಿ 5,563 ಕೋಟಿ ರೂ ಸಾಲಮನ್ನಾ ಮಾಡಲಾಗಿದೆ ಎಂದು ತಿಳಿಸಿದರು.

ಬೆಳೆ ಸಾಲ ಇರುವುದು 48 ಸಾವಿರದ 90 ಕೋಟಿ. ಅದಕ್ಕಾಗಿ ಸುಸ್ತಿ ಸಾಲವನ್ನು ಮನ್ನಾ ಮಾಡಿದ್ದೇನೆ. ಎಲ್ಲಾ ಖಾಸಗಿ ಬ್ಯಾಂಕುಗಳಲ್ಲಿ ರೈತರ 41 ಸಾವಿರ ಕೋಟಿ ಸಾಲವಿದೆ. ಒಟ್ಟು 21,000 ಕೋಟಿ ರೂಪಾಯಿ ಅನುಕೂಲವಾಗುತ್ತದೆ. ಕೇಂದ್ರ ಸರ್ಕಾರದಿಂದ 4 ವರ್ಷಗಳಲ್ಲಿ ಕರ್ನಾಟಕಕ್ಕೆ ಹಣ ಬಂದಿಲ್ಲ. ಬೆಂಬಲ ಬೆಲೆಯಡಿ ಕರ್ನಾಟಕಕ್ಕೆ ಹಣ ನೀಡಿಲ್ಲ ಎಂದು ವಿಷಾದ ವ್ಯಕ್ತಪಡಿಸಿದರು.

ರೈತರ 43 ಲಕ್ಷದ 56 ಸಾವಿರ ಖಾತೆಗಳಿವೆ. ಎಲ್ಲಾ ರೈತರ ಬೆಳೆಸಾಲ 48 ಸಾವಿರ ಕೋಟಿ. ಸುಸ್ತಿ ಸಾಲಮನ್ನಾದ ಘೋಷಣೆ ಮಾಡಿದ್ದೇನೆ. ಸುಸ್ತಿ ಸಾಲಕ್ಕೆ 22,900 ಕೋಟಿ ರೂಪಾಯಿ, ಪ್ರೋತ್ಸಾಹ ಧನ ಸೇರಿ 29 ಸಾವಿರ ಕೋಟಿ ಹೊರೆ ಬೀಳಲಿದೆ ಎಂದು ತಿಳಿಸಿದರು.

ಪೆಟ್ರೋಲ್ ಹಾಗೂ ಡೀಸೆಲ್ ಮೇಲಿನ ಸೆಸ್ ಏರಿಕೆಯನ್ನ ಸಮರ್ಥಿಸಿಕೊಂಡ ಅವರು, ಯಡಿಯೂರಪ್ಪ ಸಾಲಮನ್ನಾ ಮಾಡಲು ವ್ಯಾಟ್ ಏರಿಸಿದ್ರು. ಜಿಎಸ್‍ಟಿ ಬಂದ್ಮೇಲೆ ರಾಜ್ಯ ತೆರಿಗೆ ಸಂಗ್ರಹಕ್ಕೆ ಆದಾಯ ಇಲ್ಲದೆ ಸೆಸ್ ಏರಿಕೆ ಮಾಡಿದ್ದೇವೆ. ಇದೇನು ದೊಡ್ಡ ಅಪರಾಧವಲ್ಲವೆಂದು ಪ್ರತಿಪಕ್ಷಗಳಿಗೆ ತಿರುಗೇಟು ನೀಡಿದರು.

ಬಜೆಟ್ ವಿಚಾರದ ಚರ್ಚೆಗೂ ಮುನ್ನ ಮಾತನಾಡಿದ ಸಿಎಂ ಅವರು ನಮ್ಮ ಬಜೆಟ್ ಬಗ್ಗೆ ವ್ಯಂಗ್ಯ ಮಾಡಲಾಗಿತ್ತು, ಇದು ದೊಡ್ಡ ಮಟ್ಟದ ಟೀಕೆಗಳ ಬಜೆಟ್, ಅಪ್ಪ ಮಕ್ಕಳ ಬಜೆಟ್, ಅಣ್ಣತಮ್ಮಂದಿರ ಬಜೆಟ್ ಎಂದು ಪ್ರತಿಪಕ್ಷದವರು ಟೀಕೆ ಮಾಡಿದ್ದೀರಿ, ಅಲ್ಲದೇ ಈ ಬಜೆಟ್ ಅನ್ನು ರಾಮನಗರ, ಮಂಡ್ಯ, ಹಾಸನಕ್ಕೆ ಸೀಮಿತ ಬಜೆಟ್ ಅಂತಾಲೂ ಟೀಕೆ ಮಾಡಿದ್ದೀರ ಈ ಎಲ್ಲಾ ಟೀಕೆಗಳನ್ನು ನಾನು ಸೂಕ್ಷ್ಮವಾಗಿ ಗಮನಿಸುತ್ತಾ ಬಂದಿದ್ದೇನೆ ಬಜೆಟ್ ಬಗ್ಗೆ ಏನೇ ಟೀಕೆ ಬಂದರೂ ನಮ್ಮದು ರೈತ ಪರ ಸರ್ಕಾರ ಅಂತ ಟೀಕಾಕಾರರ ಬಾಯಿ ಮುಚ್ಚಿಸೋ ಯತ್ನ ಮಾಡಿದ್ರು.

ಸಿಎಂ ಉತ್ತರಕ್ಕೆ ತೃಪ್ತಿಯಾಗದ ಬಿಜೆಪಿ ನಾಯಕರು ಮಧ್ಯೆ ಮಧ್ಯೆ ತಗಾದೆ ಪ್ರಶ್ನಿಸುತ್ತಿದ್ದರು. ಕೊನೆಗೆ ಸಭಾತ್ಯಾಗ ಮಾಡಿದರು. ಇವತ್ತಿಗೆ ಅಂತ್ಯವಾಗಬೇಕಿದ್ದ ಬಜೆಟ್ ಅಧಿವೇಶನವನ್ನ ನಾಳೆ ಒಂದು ದಿನದ ಮಟ್ಟಿಗೆ ವಿಸ್ತರಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *