ಯಡಿಯೂರಪ್ಪನವರದ್ದು ಬಸ್‍ಸ್ಟಾಂಡ್ ಲವ್ ಸ್ಟೋರಿ: ಇಬ್ರಾಹಿಂ ಲೇವಡಿ

Public TV
2 Min Read

ಬೆಂಗಳೂರು: ಸಮ್ಮಿಶ್ರ ಸರ್ಕಾರ ಬೀಳುವ ಭಯ ನಮಗೇ ಇಲ್ಲ. ಏಕೆಂದರೆ ಕಾಂಗ್ರೆಸ್ ಶಿಸ್ತಿನ ಪಕ್ಷವಾಗಿದ್ದು, ಶಾಸಕರನ್ನು ಸೃಷ್ಟಿ ಮಾಡುವ ಪಕ್ಷವಾಗಿದೆ. ಆದರೆ ಬಿಎಸ್ ಯಡಿಯೂರಪ್ಪ ಅವರದ್ದು ಬಸ್ ಸ್ಟಾಂಡ್ ಲವ್ ಆಗಿದ್ದು, ಮದುವೆಯಾದವರನ್ನು ಸೆಳೆಯಲು ಪ್ರಯತ್ನಿಸಿದ್ದಾರೆ ಎಂದು ವಿಧಾನ ಪರಿಷತ್ ಸದಸ್ಯ ಸಿಎಂ ಇಬ್ರಾಹಿಂ ಲೇವಡಿ ಮಾಡಿದ್ದಾರೆ.

ನಗರದಲ್ಲಿ ಮಾಧ್ಯಮಗಳೊಂದಿಗೆ ಮಾತನಾಡಿ ಆಪರೇಷನ್ ಕಮಲದ ಬಗ್ಗೆ ಪ್ರತಿಕ್ರಿಯೆ ನೀಡಿದ ಅವರು, ಕಾಂಗ್ರೆಸ್ ಪಕ್ಷದೊಂದಿಗೆ ಜನರು ಇದ್ದಾರೆ. ನಮ್ಮ ಪಕ್ಷದ ನಾಯಕರಾದ ಮಾಜಿ ಸಿಎಂ ಸಿದ್ದರಾಮಯ್ಯ, ಕೆಪಿಸಿಸಿ ಅಧ್ಯಕ್ಷರಾದ ದಿನೇಶ್ ಗುಂಡೂರಾವ್, ರಾಜ್ಯ ಉಸ್ತುವಾರಿ ವೇಣುಗೋಪಾಲ್ ರಾವ್ ಸೇರಿದಂತೆ ಹಲವು ನಾಯಕರು ಈ ಬಗ್ಗೆ ಸ್ಪಷ್ಟವಾದ ಹೇಳಿಕೆ ನೀಡಿದ್ದಾರೆ. ನಮ್ಮ ಪಕ್ಷ ಶಿಸ್ತಿನ ಪಕ್ಷವಾಗಿದ್ದು, ಸರ್ಕಾರವನ್ನು ಹಾಗೆಯೇ ನಡೆಸಿಕೊಂಡು ಹೋಗುತ್ತಿದ್ದೇವೆ. ಆದರೆ ಮದುವೆ ಮನೆಯಲ್ಲಿ ನಿದ್ದೆ ಕಣ್ಣಲ್ಲಿ ಕೈ ಹಾಕಿದರು ಎನ್ನುವಂತೆ ಬಿಜೆಪಿ ಒದ್ದಾಡುತ್ತಿದೆ ಎಂದು ವ್ಯಂಗ್ಯವಾಡಿದರು.

ಸಮ್ಮಿಶ್ರ ಸರ್ಕಾರ ಉತ್ತಮವಾಗಿ ಆಡಳಿತ ನಡೆಸುತ್ತಿದ್ದು, ಮದುವೆಯಾದ ಪತಿವ್ರತೆಯರನ್ನು ಕರೆದುಕೊಂಡು ಹೋಗಲು ಯಡಿಯೂರಪ್ಪ ಪ್ರಯತ್ನ ಮಾಡುತ್ತಿದ್ದಾರೆ. ಆಮಿಷಗಳನ್ನು ನೀಡುವ ಮೂಲಕ ಬಸ್‍ಸ್ಟಾಂಡ್ ಲವ್ ಮಾಡಲು ಮುಂದಾಗಿದ್ದಾರೆ. ಆದರೆ ಬಸ್‍ಸ್ಟಾಂಡ್ ಬಸವಿಯರು ಮಾತ್ರ ಅವರೊಂದಿಗೆ ಹೋಗುತ್ತಾರೆ. ಸಮ್ಮಿಶ್ರ ಸರ್ಕಾರ ಬಂದು 5 ತಿಂಗಳೂ ಆಗಿಲ್ಲ, ಇಂತ ಸಂದರ್ಭದಲ್ಲಿ ಅವರಿಗೆ ನೋವಾಗುವ ಸಂದರ್ಭ ಬಂದಿದೆ. ಏಕೆಂದರೆ ರಾಜಸ್ಥಾನ, ಮಧ್ಯಪ್ರದೇಶದಲ್ಲಿ ಬಿಜೆಪಿ ಪಕ್ಷ ಸೋಲುಂಡಿದೆ. ಬಿಜೆಪಿಯವರಿಗೆ ಅವರ ಶಾಸಕರ ಮೇಲೆಯೇ ನಂಬಿಕೆಯಿಲ್ಲ ಎಂದು ಆರೋಪಿಸಿದರು.

ಇದೇ ವೇಳೆ ಪ್ರಧಾನಿ ಮೋದಿ ನೇತೃತ್ವದ ಕೇಂದ್ರ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ ಇಬ್ರಾಹಿಂ ಅವರು, ಶ್ರಮಿಕ ವರ್ಗದ ಬಾಯಿಗೆ ಮೋದಿ ಮಣ್ಣು ಹಾಕಿದ್ದಾರೆ. ಎಚ್‍ಎಎಲ್ ಸಂಸ್ಥೆ ಮುಚ್ಚುವ ಹಂತ ತಲುಪಿದೆ. ಆದರೆ ಉದ್ಯಮಿಗಳ ಪರ ಇರುವ ಕೇಂದ್ರ ಡೀಲ್ ಮಾಡಲು ಮುಂದಾಗಿದೆ. ರಾಜ್ಯದಲ್ಲಿ ನಡೆಯುತ್ತಿರುವ ಬೆಳವಣಿಯನ್ನು ರಾಜ್ಯದ ಜನರು ಗಮನಿಸುತ್ತಿದ್ದು, ನಮ್ಮ ಮೇಲೆ ರಾಜ್ಯದ ಜನರ ಅನುಕಂಪ ಮೂಡಿದೆ. ಎಲ್ಲೋ ಕಳೆದುಕೊಂಡು ಇಲ್ಲಿ ಬಂದು ಹುಡುಕುವ ಪ್ರಯತ್ನವನ್ನು ಮೋದಿ ಅವರು ಮಾಡುತ್ತಿದ್ದಾರೆ. ಆದರೆ ರಾಜ್ಯ ಸರ್ಕಾರ ಸುಭದ್ರವಾಗಿದೆ ಎಂದು ಆತ್ಮವಿಶ್ವಾಸ ವ್ಯಕ್ತಪಡಿಸಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *