ತಂದೆಯವರೇ ಪಿಎಂ ಸ್ಥಾನ ಬಿಟ್ಟು ಬಂದಿರುವಾಗ ಮಗನಾಗಿ ನಾನು ಸಿಎಂ ಸ್ಥಾನ ಬಿಡಲು ಹಿಂದೇಟು ಹಾಕ್ತೀನಾ: ಎಚ್‍ಡಿಕೆ

Public TV
5 Min Read

– ಮತ್ತೆ ರಾಜೀನಾಮೆ ಪ್ರಸ್ತಾಪ ಮಾಡಿದ ಸಿಎಂ
– ಕಾಂಗ್ರೆಸ್‍ನವರು ಒತ್ತಡ ತಂದು ಕೆಲಸ ಮಾಡಿಸಿಕೊಂಡಿದ್ದಾರೆ
– ಜನರಿಗೆ ನಾನು ಏನು ಅಂತ ಗೊತ್ತಿದ್ದರೂ ಬೈತಾರೆ
– ಉಸಿರಾಟಕ್ಕೂ ಸಮಯವಿಲ್ಲದೆ ಕೆಲಸ ಮಾಡುತ್ತಿದ್ದೇನೆ

ಬೆಂಗಳೂರು: ಜನರಿಗೆ ಮೋಸ ಮಾಡಿ ನಾನು ಏನು ಸಾಧನೆ ಮಾಡಲಿ? ಸಿಎಂ ಸ್ಥಾನ ಬಿಡಲು ನನಗೆ ಕಷ್ಟ ಏನಿಲ್ಲ ಎಂದು ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಹೇಳಿದ್ದಾರೆ.

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಅವರು, ಅಧಿಕಾರದಲ್ಲಿ ಶಾಶ್ವತವಾಗಿ ಇರೋದಕ್ಕೆ ಆಗುತ್ತಾ? 16 ಸೀಟು ಪಡೆದು ನನ್ನ ತಂದೆಯವರು ಪ್ರಧಾನಿಯಾಗಿದ್ದರು. ಬಳಿಕ ಸುಲಭವಾಗಿ ತಂದೆ ಸ್ಥಾನವನ್ನು ಬಿಟ್ಟು ಬಂದಿದ್ದಾರೆ. ಅಂತವರ ಮಗನಾಗಿ ಸಿಎಂ ಸ್ಥಾನ ಬಿಡಲು ನಾನು ಹಿಂದೇಟು ಹಾಕುತ್ತೇನಾ ಎಂದು ಪ್ರಶ್ನಿಸಿದರು. ಇದನ್ನು ಓದಿ: ಮೈತ್ರಿ ಸರ್ಕಾರದ Chemistry – Physics ಸರಿಯಾಗಿದೆ, ಇನ್ನೇನಿದ್ರೂ Mathematics ಮಾತ್ರ ಆಗ್ಬೇಕು: ಸಿದ್ದರಾಮಯ್ಯ

ಅರಮನೆ ಮೈದಾನದಲ್ಲಿ ನಡೆದ ಜೆಡಿಎಸ್ ಸಮಾವೇಶದಲ್ಲಿ ಮಾತನಾಡಿದ ಸಿಎಂ, ಬೆಂಗಳೂರಿನಲ್ಲಿ 12 ವರ್ಷಗಳಿಂದ ನಿಂತಿದ್ದ ಕೆಲಸವನ್ನು ನಾನು ಪ್ರಾರಂಭ ಮಾಡಿದ್ದೇನೆ. ಎಷ್ಟು ದಿನ ಇಂತಹ ಮಾತು ನಾನು ಸಹಿಸಿಕೊಳ್ಳಲಿ. ಔಟರ್ ರಿಂಗ್ ರೋಡ್‍ಗೆ ಚಾಲನೆ ಕೊಟ್ಟಿದ್ದೇನೆ. ಭೂಸ್ವಾಧೀನಕ್ಕೆ 4,500 ಕೋಟಿ ರೂ. ನೀಡಿರುವೆ. ಇದು ನಾನು ಬೆಂಗಳೂರಿಗೆ ನೀಡಿದ ಕೊಡುಗೆ. ಸ್ವಲ್ಪ ಸಮಯದ ಹಿಂದೆ ನಡೆದಿದ್ದ ಕ್ಯಾಬಿನೇಟ್ ಸಭೆಯಲ್ಲಿ ಬೆಂಗಳೂರು ಕ್ರೀಯಾ ಯೋಜನೆಗೆ 8 ಸಾವಿರ ಕೋಟಿ ರೂ. ಕೊಟ್ಟು ಬಂದಿದ್ದೇನೆ ಎಂದು ತಿಳಿಸಿದರು.

ಸರ್ಕಾರದಲ್ಲಿ ಕೆಲಸವಾಗಿಲ್ಲ ಅಂತ ಪಾಪ ಯಾರೋ ಒಬ್ಬರು ಹೇಳಿದ್ದಾರೆ. ಸಮ್ಮಿಶ್ರ ಸರ್ಕಾರದಲ್ಲಿ 1 ಲಕ್ಷ ಕೋಟಿ ರೂ. ಯೋಜನೆ ಕೊಟ್ಟಿರುವುದು ಅವರಿಗೆ ಗೊತ್ತಿಲ್ಲವೆಂದು ಅನಿಸುತ್ತದೆ ಎಂದು ಸಿಎಂ ಶಾಸಕ ಎಸ್.ಟಿ.ಸೋಮಶೇಖರ್ ಹೆಸರನ್ನು ಹೇಳದೇ ಅವರಿಗೆ ಟಾಂಗ್ ಕೊಟ್ಟಿದ್ದಾರೆ.

ನಾವು 10 ವರ್ಷ ಯಾವುದೇ ಅಧಿಕಾರ ಇಲ್ಲದೇ ಇದ್ದರೂ ನಮ್ಮ ಪಕ್ಷವನ್ನು ಬೆಳೆಸಿದ್ದೀರಿ. ಲಕ್ಷಾಂತರ ಜನರು ಪಕ್ಷ ಉಳಿಸಿದ್ದಾರೆ ಎಂದು ಕಾರ್ಯಕರ್ತರನ್ನು ಪ್ರೇರೆಪಿಸಿದ ಸಿಎಂ, ಜೆಪಿ ಭವನದ ಸಭೆಯಲ್ಲಿ ನಾನು ಕಣ್ಣೀರು ಹಾಕಿದೆ. ಇವತ್ತು ನನ್ನ ಮನಸ್ಸಿನಲ್ಲಿ ನೋವಿದೆ. ನೋವು ಮರೆತು ಜನರಿಗೆ ಅನುಕೂಲ ಮಾಡಲು ಶ್ರಮ ಹಾಕುತ್ತಿದ್ದೇನೆ. ಇದನ್ನು ಯಾರು ಮರೆಯಬೇಡಿ ಎಂದು ಹೇಳಿದರು. ಇದನ್ನು ಓದಿ: ಮಹಾರಾಷ್ಟ್ರಕ್ಕೆ 4 ಸಾವಿರ ಕೋಟಿ, ರಾಜ್ಯಕ್ಕೆ 900 ಕೋಟಿ ರೂ. ಬರ ಪರಿಹಾರ- ಕೇಂದ್ರದ ನಿರ್ಧಾರಕ್ಕೆ ಸಿಎಂ ಕಿಡಿ

ಸಮ್ಮಿಶ್ರ ಸರ್ಕಾರದಲ್ಲಿ ನಾನು ಎಷ್ಟು ಕಷ್ಟ ಅನುಭವಿಸುತ್ತಿದ್ದೇನೆ ಎನ್ನುವುದು ನನಗೆ ಗೊತ್ತು. ರೈತರ ಸಾಲಮನ್ನಾ ಮಾಡುವ ಚಾಲೆಂಜ್ ತಗೊಂಡರೂ ಜನರು ನನ್ನನ್ನು ನಂಬುತ್ತಿಲ್ಲ. ಆದರೆ ಪ್ರಧಾನಿ ನರೇಂದ್ರ ಮೋದಿ ಅವರು ರೈತರ ಸಾಲಮನ್ನಾ ಮಾಡುವ ಆಸೆ ತೊರಿಸಿ, ಕೈಬಿಟ್ಟರು. ನಾನು ನೀಡಿದ ಭರವಸೆಯಂತೆ ಜನವರಿ 25ರ ಒಳಗೆ 2 ಲಕ್ಷ ರೈತರ ಖಾತೆಗೆ ಸಾಲಮನ್ನಾ ಹಣ ಹಾಕಿದ್ದೇನೆ ಎಂದು ಪ್ರಧಾನಿ ಮೋದಿ ಅವರಿಗೆ ಟಾಂಗ್ ಕೊಟ್ಟರು.

ಮಾಜಿ ಸಿಎಂ ಸಿದ್ದರಾಮಯ್ಯ ಘೋಷಣೆ ಮಾಡಿದ ಸಾಲಮನ್ನಾದ 3,800 ಸಾವಿರ ಕೋಟಿ ರೂ. ಬಿಡುಗಡೆ ಮಾಡಿದ್ದೇನೆ. ಸಹಕಾರಿ, ರಾಷ್ಟ್ರೀಯ ಬ್ಯಾಂಕ್ ಸಾಲಮನ್ನಾಗೆ 900 ಕೋಟಿ ರೂ. ಇಟ್ಟಿದ್ದೇನೆ. 2019ರ ಬಜೆಟ್‍ನಲ್ಲಿ 13 ಸಾವಿರ ಕೋಟಿ ರೂ. ಸಾಲಮನ್ನಾಗೆ ಕೊಡುತ್ತಿದ್ದೇನೆ. ಜೊತೆಗೆ ಮುಂದಿನ ಬಜೆಟ್‍ನಲ್ಲೇ ಸಂಪೂರ್ಣ ಸಾಲಮನ್ನಾ ಹಣ ಬಿಡುಗಡೆ ಮಾಡುತ್ತೇನೆ ಎಂದು ಹೇಳಿದರು.

ಈ ಬಜೆಟ್‍ನಲ್ಲಿ 44 ಲಕ್ಷ ರೈತರಿಗೆ ಸಾಲಮನ್ನಾ ಪತ್ರ ಮನೆಗೆ ಕಳುಹಿಸುತ್ತೇನೆ. ನನ್ನನ್ನು ದ್ವೇಷಿಸಬೇಡಿ. ನನ್ನನ್ನು ಮರೆಯಬೇಡಿ. ನನ್ನ ಮೇಲೆ ಕನಿಕರ ಇಲ್ಲವೇ ಎಂದು ಸಿಎಂ ಕಾರ್ಯಕರ್ತರಲ್ಲಿ ಕೇಳಿಕೊಂಡರು. ಇದನ್ನು ಓದಿ: ಕಾಂಗ್ರೆಸ್‍ನವರು ಬಾಯಿಗೆ ಬಂದಂತೆ ಮಾತನಾಡುತ್ತಿದ್ದಾರೆ – ಸಿದ್ದರಾಮಯ್ಯ ವಿರುದ್ಧ ದೇವೇಗೌಡ ಕಿಡಿ

ಸರ್ಕಾರಕ್ಕೆ ನಿತ್ಯವೂ ಗಡುವು ನೀಡುತ್ತಿದ್ದಾರೆ. ಸಂಕ್ರಾಂತಿ, ರಾಜ್ಯೋತ್ಸವಕ್ಕೆ ಡೆಡ್ ಲೈನ್ ಕೊಟ್ಟರು. ಈಗ ಫೆಬ್ರವರಿ 6 ಅವಿಶ್ವಾಸ ನಿರ್ಣಯ ಅಂತಿದ್ದಾರೆ. ಹೀಗೆ ಸುದ್ದಿ ಬಂದರೆ ನಾನು ಹೇಗೆ ಉತ್ತಮ ಸರ್ಕಾರ ಕೊಡಲು ಸಾಧ್ಯ ಎಂದು ಅಸಮಾಧಾನವನ್ನು ಹೊರಹಾಕಿದರು.

ಎಚ್.ಡಿ.ದೇವೇಗೌಡ ಅವರ ವಿರುದ್ಧವಾಗಿ 2006ರಲ್ಲಿ ನಾನು ಸರ್ಕಾರ ಮಾಡಿಬಿಟ್ಟೆ. ಆಗ ನಿಗಮ-ಮಂಡಳಿ ಮಾಡಿರಲಿಲ್ಲ. ಈಗ ಕಾಂಗ್ರೆಸ್‍ನವರು ನನ್ನ ಮೇಲೆ ಒತ್ತಡ ತಂದು ಕೆಲಸ ಮಾಡಿಸಿಕೊಂಡಿದ್ದಾರೆ. 2006ರಲ್ಲಿ ಆಗಿರುವ ತಪ್ಪನ್ನು ಮತ್ತೆ ಮಾಡಲ್ಲ. ಆದಷ್ಟು ಬೇಗ ನಿಗಮ-ಮಂಡಳಿ ನೇಮಕ ಮಾಡುತ್ತೇವೆ ಎಂದು ತಿಳಿಸಿದರು.

ರೈತರ ಅಭಿವೃದ್ಧಿ ನಿಟ್ಟಿನಲ್ಲಿ ದಿನದ 24 ಗಂಟೆಗಳ ಕಾಲ ಚಿಂತನೆ ಮಾಡುತ್ತೇನೆ. ಆಟೋ ಚಾಲಕರನ್ನು ವಿಧಾನಸೌಧದಕ್ಕೆ ಕರೆಸಿ ಕಷ್ಟ ಕೇಳಿದ ಮೊದಲ ಸಿಎಂ ನಾನು. ಮುಖ್ಯಮಂತ್ರಿ ಸ್ಥಾನದಲ್ಲಿ ಅಂಟಿಕೊಂಡು ನಾನು ಕೆಲಸ ಮಾಡುತ್ತಿಲ್ಲ. ಬಜೆಟ್‍ನಲ್ಲಿ ಎಲ್ಲಾ ವಿಷಯ ತಿಳಿಸುತ್ತೇನೆ. ಜನರಿಗೆ ನಾನು ಏನು ಅಂತ ಗೊತ್ತಿದ್ದರೂ ಬೈತಾರೆ. ಮಹಿಳೆಯರು ಮದ್ಯಪಾನ ನಿಷೇಧ ಮಾಡಿ ಅಂತ ಪ್ರತಿಭಟನೆ ಮಾಡುತ್ತಿದ್ದಾರೆ. 2006ರಲ್ಲಿ ಸಾರಾಯಿ ನಿಷೇಧ ಮಾಡಿದ್ದು ಇದೇ ಕುಮಾರಸ್ವಾಮಿ ಇದು ನೆನಪಿರಲಿ ಎಂದು ಹೇಳಿದರು.

ಸಂವಿಧಾನ ಶಿಲ್ಪಿ ಬಿ.ಆರ್.ಅಂಬೇಡ್ಕರ್ ಜಾರಿ ಮಾಡಿದ ಅಂಶವನ್ನು ಇಂದಿನ ಕೇಂದ್ರ ಸರ್ಕಾರ ಒಂದೊಂದಾಗಿ ಮೊಟಕುಗೊಳಿಸುತ್ತಿದೆ. ಯಾವುದೇ ಯೋಜನೆ ಜಾರಿಗೆ ತರಬೇಕಾದರೆ ನಾವು ಕೇಂದ್ರದ ಬಳಿ ಭಿಕ್ಷೆ ಬೇಡಬೇಕಾಗಿದೆ. ಬರ ಪರಿಹಾರದ ಮೊತ್ತ 900 ಕೋಟಿ ರೂ. ಮಾತ್ರ ಕೊಟ್ಟಿದ್ದಾರೆ ಎಂದು ಪ್ರಧಾನಿ ಮೋದಿ ವಿರುದ್ಧ ಕಿಡಿಕಾರಿದರು.

ಬರ ಅಧ್ಯಯನದ ನೆಪದಲ್ಲಿ ಅಧಿಕಾರಿಗಳನ್ನು ಬೈದು ಡ್ರಾಮಾ ಮಾಡಿದ್ದಾರೆ. 16 ಜನ ಸಂಸದರನ್ನು ರಾಜ್ಯದ ಜನ ಕೊಟ್ಟಿದ್ದಾರೆ. ಹೋಗಿ ಪ್ರಧಾನಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿ, ರಾಜ್ಯಕ್ಕೆ ಹೆಚ್ಚು ಅನುದಾನ ಬಿಡುಗಡೆ ಮಾಡುವಂತೆ ಕೇಳಿ ಎಂದು ರಾಜ್ಯ ಬಿಜೆಪಿ ನಾಯಕರಿಗೆ ತಿರುಗೇಟು ನೀಡಿದರು.

ಪ್ರಧಾನಿ ಮೋದಿ ಬಳಿ ಬರ ಪರಿಹಾರ ಹಣ ಕೇಳುವ ತಾಕತ್ತು ರಾಜ್ಯ ಬಿಜೆಪಿ ಸಂಸದರಿಗೆ ಇಲ್ಲ. ಈ ಸರ್ಕಾರದ ಬಗ್ಗೆ ಮಾತನಾಡುತ್ತಾರೆ. ಬಿಜೆಪಿ ರಾಜ್ಯಾಧ್ಯಕ್ಷ ಬಿ.ಎಸ್.ಯಡಿಯೂರಪ್ಪ ಅವರಂತಹ ಡೋಂಗಿ ರಾಜಕಾರಣ ನಾನು ಮಾಡಿಲ್ಲ. ಸಭೆ ಹೆಸರಲ್ಲಿ ರೆಸಾರ್ಟಿನಲ್ಲಿ ಸಂಕ್ರಾಂತಿ ಮಾಡಿದರು. ಆಗ ಜನರ ಕಷ್ಟ ಅರ್ಥ ಆಗಿಲ್ವಾ? ನಿಮಗೆ ಜನರ ಹಾಗೂ ರೈತರ ಬಗ್ಗೆ ಕಾಳಜಿ ಇದೆಯಾ ಎಂದು ಗುಡುಗಿದರು.

ನರೇಗಾದ ಹಣವನ್ನು ಕೇಂದ್ರ ಸರ್ಕಾರ ನೀಡಿಲ್ಲ. ಹೀಗಿದ್ದರೂ ಬಿ.ಎಸ್.ಯಡಿಯೂರಪ್ಪ ಅವರು ಕೆಲಸ ಆಗಿಲ್ಲ ಅಂತಾರೆ. ರಾಜ್ಯದ ಜನತೆ ಸರ್ಕಾರದ ಖಜಾನೆ ಸುಭದ್ರವಾಗಿಡಲು ತೆರಿಗೆ ಕೊಡುತ್ತಿದ್ದಾರೆ. ನನ್ನ ಸರ್ಕಾರದಲ್ಲಿ ಹಣದ ಕೊರತೆ ಇಲ್ಲ. ನಾನು ಸಾಲಮನ್ನಾಗೆ ಮಾತ್ರ ಸೀಮಿತವಾಗಿಲ್ಲ ಎಂದು ಗರಂ ಆದರು.

ನಾನು ನಾಡಿನ ಜನತೆಗೆ ದ್ರೋಹ ಮಾಡಿದರೆ ಒಂದು ಕ್ಷಣ ಈ ಸ್ಥಾನದಲ್ಲಿ ಇರುವುದಿಲ್ಲ. ಪ್ರಧಾನಿ ಸ್ಥಾನ ಬಿಟ್ಟವರಿಗೆ ಸಿಎಂ ಸ್ಥಾನ ಬಿಡುವುದು ಕಷ್ಟವಲ್ಲ. ನಾನು ರಾಜೀನಾಮೆ ಕೊಡುತ್ತೇನೆ ಅಂತ ಹೇಳಿದ್ದು ನಿಜ. ಸರ್ಕಾರದ ಅಭಿವೃದ್ಧಿ ಕುರಿತು ಚರ್ಚೆ ಮಾಡದೆ ಕೆಲವರು ಮಾತನಾಡುತ್ತಿದ್ದಾರೆ ಎಂದು ಹೇಳಿದರು.

https://www.youtube.com/watch?v=VaviJv8_o-k

ಮೈತ್ರಿ ಸರ್ಕಾರದಲ್ಲಿ ಹಲವಾರು ಯೋಜನೆ ತರುತ್ತಿದ್ದೇವೆ. ಜನರು ನನ್ನ ಮೇಲೆ ಅನುಮಾನ ಪಡಬೇಡಿ. ಉಸಿರಾಟಕ್ಕೂ ಸಮಯವಿಲ್ಲದೆ ಕೆಲಸ ಮಾಡುತ್ತಿದ್ದೇನೆ. ನಾನು ನಿಮ್ಮ ಜೊತೆ ಮಾತನಾಡದೇ ಇರಬಹುದು. ಆದರೆ ನಿಮ್ಮ ಮನವಿಗೆ ನಾನು ಸ್ಪಂದನೆ ನೀಡದೆ ಉಳಿದಿಲ್ಲ. ಮುಂದಿನ ಲೋಕಸಭೆಯಲ್ಲಿ ಜೆಡಿಎಸ್‍ಗೆ 10 ಸ್ಥಾನಕೊಟ್ಟರೆ ಭಾರತ ಭೂಪಟದಲ್ಲಿ ಕರ್ನಾಟಕದ ಶಕ್ತಿ ಬೆಳಗುತ್ತದೆ ಎಂದು ಹೇಳಿದರು.

ಯಾವುದೇ ಅಸೂಯೆ ಇಲ್ಲದೆ ದೇವೇಗೌಡರನ್ನು ದೆಹಲಿಗೆ ಕಳಿಹಿಸಿ. ನನ್ನ ನಿಮ್ಮ ಸಂಬಂಧವನ್ನು ಅನುಮಾನದಿಂದ ನೋಡಬೇಡಿ. ನಾನು ನಿಮ್ಮ ಮನೆಯ ಮಗ. ನನ್ನ ಬೆಳೆಸಿದವರು ನೀವು. ನಿಮ್ಮ ಮನೆ ಮಗನನ್ನು ಸಂಶಯದಲ್ಲಿ ನೋಡಬೇಡಿ ಎಂದು ಮನವಿ ಮಾಡಿಕೊಂಡರು.

https://www.youtube.com/watch?v=-cppbuB8d_U

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *