ಎಲ್ಲಾ ಸಿನಿಮಾದವರು ಈಗ ರಾಜ್ಯದ ಜನತೆಯ ಬಗ್ಗೆ ಬಂದಿದ್ದಾರೆ, ಬರಲಿ ಬಿಡಿ ಸಂತೋಷ: ಸಿಎಂ ಎಚ್‍ಡಿಕೆ

Public TV
1 Min Read

ಚಿಕ್ಕಮಗಳೂರು: ಮಂಡ್ಯ ಲೋಕಸಭಾ ಕ್ಷೇತ್ರದಿಂದ ಸುಮಲತಾ ಅವರು ಸ್ಪರ್ಧೆ ಮಾಡುವುದನ್ನು ಖಚಿತ ಪಡಿಸುತ್ತಿದಂತೆ ಇತ್ತ ಸಿಎಂ ಕುಮಾರಸ್ವಾಮಿ ಅವರು ಸುಮಲತಾ ಅವರಿಗೆ ಪರೋಕ್ಷವಾಗಿ ಟಾಂಗ್ ನೀಡಿದ್ದಾರೆ.

ಜಿಲ್ಲೆಯ ಶೃಂಗೇರಿಯ ಶಾರದಂಬೆಯ ದರ್ಶನಕ್ಕೆ ಆಗಮಿಸಿದ್ದ ಸಿಎಂ ಕುಮಾರಸ್ವಾಮಿ ಅವರು ಮಾಧ್ಯಮಗಳೊಂದಿಗೆ ಮಾತನಾಡಿದರು. ಚುನಾವಣೆ ಎಂಬ ಯುದ್ಧ ಗೆಲ್ಲಲು ಶಾರದಾಂಬೆಯ ಆರ್ಶೀವಾದ ಬೇಕು. ಇಂದು ತಾಯಿ ಸನ್ನಿದಿಗೆ ಕೇವಲ ನಿಖಿಲ್ ಒಬ್ಬರಿಗಾಗಿ ಬಂದಿಲ್ಲ. 28 ಕ್ಷೇತ್ರದ ಜೆಡಿಎಸ್, ಕಾಂಗ್ರೆಸ್ ಮೈತ್ರಿಯ ಎಲ್ಲಾ ಅಭ್ಯರ್ಥಿಗಳ ಗೆಲುವಿಗಾಗಿ ಬಂದಿದ್ದೇನೆ ಎಂದರು.

ನಮ್ಮ ಕುಟುಂಬದ ದೇವಿಯ ಮೇಲೆ ನಂಬಿಕೆಯನ್ನು ಹೊಂದ್ದಿದ್ದು, ಈ ಹಿನ್ನಲೆಯಲ್ಲಿ ಶೃಂಗೇರಿ ತಾಯಿಯ ಆರ್ಶೀವಾದ ಪಡೆಯಲು ಬಂದಿದ್ದೇನೆ. ಜಿಲ್ಲೆಯಲ್ಲಿ ಪ್ರಮೋದ್ ಮಧ್ವರಾಜ್ ಬೇರೆಯವರಲ್ಲ, ಅವರು ನಮ್ಮವರೇ ಕುಳಿತು ಈ ಬಗ್ಗೆ ತೀರ್ಮಾನ ಮಾಡುತ್ತೇವೆ ಎಂದರು. ಇದೇ ವೇಳೆ ಸುಮಲತಾ ಲೋಕಸಭಾ ಚುನಾವಣೆ ಸ್ಪರ್ಧೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಸುಮಲತಾ ಅವರ ಸ್ಪರ್ಧೆಯ ಬಗ್ಗೆ ತಲೆಕೆಡಿಸಿಕೊಳ್ಳುವ ಅವಶ್ಯಕತೆ ಇಲ್ಲ. ಎಲ್ಲಾ ಸಿನಿಮಾದವರು ಈಗ ರಾಜ್ಯದ ಜನತೆಯ ಬಗ್ಗೆ ಬಂದಿದ್ದಾರೆ. ಬರಲಿ ಬಿಡಿ ಸಂತೋಷ. ಮಂಡ್ಯ ಜಿಲ್ಲೆಯ ಜನರ ಪರವಾಗಿ ಏನೇನು ಮಾಡುತ್ತಾರೆ ನೋಡೋಣ ಎಂದು ಟಾಂಗ್ ನೀಡಿದರು.

ಇತ್ತ ಮಂಡ್ಯ ಲೋಕಸಭಾ ಚುನಾವಣೆಯಲ್ಲಿ ಸ್ಪರ್ಧಿಸುವ ಕುರಿತು ಅಧಿಕೃತವಾಗಿ ಘೋಷಣೆ ಮಾಡಿದ ಸುಮಲತಾ ಅವರು, ಪಕ್ಷೇತರ ಅಭ್ಯರ್ಥಿಯಾಗಿ ಸ್ಪರ್ಧಿಸುತ್ತೇನೆ. ವೈಯಕ್ತಿಕವಾಗಿ ಯಾರಿಗೂ ನೋಯಿಸುವಂತಹ ಮಾತುಗಳನ್ನು ಹೇಳುವುದು ಬೇಡ ಎಂದು ಮನವಿ ಮಾಡಿಕೊಂಡರು. ಅಲ್ಲದೇ ರಾಜಕಾರಣ ಇರಬಹುದು ಅಥವಾ ಚುನಾವಣೆ ಇರಬಹುದು. ಜನಕ್ಕೆ ಏನೇನು ಒಳ್ಳೆಯದನ್ನು ಮಾಡಬೇಕು ಎಂಬುದರ ಬಗ್ಗೆ ಮಾತಾಡೋಣ. ಅದನ್ನು ಬಿಟ್ಟು ವೈಯಕ್ತಿಕವಾಗಿ ನೋವು ಕೊಡುವಂತಹ ಮಾತುಗಳು ಬೇಕಾಗಿಯೇ ಇಲ್ಲ. ಯುವಕರಿಗೆ ಮಾರ್ಗದರ್ಶನವಾಗಿ ನಿಂತುಕೊಳ್ಳಬೇಕಾದ ಜವಾಬ್ದಾರಿ ನಮ್ಮ ಮೇಲಿದೆ ಅಂದ್ರು.

Share This Article
Leave a Comment

Leave a Reply

Your email address will not be published. Required fields are marked *