ಸಿಎಂ 15 ದಿನದಲ್ಲಿ ಉಡುಪಿಗೆ ಬರದಿದ್ದರೆ ವಿಧಾನಸೌಧಕ್ಕೆ ಮುತ್ತಿಗೆ

Public TV
1 Min Read

ಉಡುಪಿ: ಮುಖ್ಯಮಂತ್ರಿ ಕುಮಾರಸ್ವಾಮಿಯವರು ಸದ್ಯ ರಾಮನಗರ ಪ್ರವಾಸ ಕೈಗೊಂಡಿರುವುದರ ವಿರುದ್ಧ ಕರಾವಳಿಯಲ್ಲಿ ಆಕ್ರೋಶ ವ್ಯಕ್ತವಾಗಿದ್ದು, ಸಿಎಂ ಎಚ್‍ಡಿಕೆ ರಾಮನಗರಕ್ಕೆ ಮಾತ್ರ ಸೀಮಿತವಾಗಬಾರದು ಎಂದು ಮೀನುಗಾರಿಕಾ ಮಹಾಮಂಡಲ ಅಧ್ಯಕ್ಷ ಯಶ್ ಪಾಲ್ ಸುವರ್ಣ ಅಸಮಾಧಾನ ವ್ಯಕ್ತಪಡಿಸಿದ್ದಾರೆ.

ನಗರದಲ್ಲಿ ಇಂದು ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಹಾಸನ, ಮಂಡ್ಯವನ್ನು ಮಾತ್ರ ಗಮನದಲ್ಲಿಟ್ಟುಕೊಂಡು ಕುಮಾರಸ್ವಾಮಿ ರಾಜ್ಯಭಾರ ಮಾಡಬಾರದು. ಎಚ್.ಡಿ ಕುಮಾರಸ್ವಾಮಿ ತನ್ನ ರಾಜಧರ್ಮವನ್ನು ಅನುಸರಿಸಲಿ ಎಂದು ಹೇಳಿದ್ದಾರೆ.

ಕರಾವಳಿ ಜಿಲ್ಲೆಗಳಲ್ಲೂ ತೆಂಗು, ಅಡಿಕೆ ಬೆಳೆಯುತ್ತಾರೆ. ಕರಾವಳಿಯ ಮೀನುಗಾರರಿಗೆ ಕುಮಾರಸ್ವಾಮಿ ಸಿಎಂ ಎಂದು ಅನ್ನಿಸುತ್ತಿಲ್ಲ. ನಮ್ಮ ಯಾವ ಬೇಡಿಕೆಯನ್ನೂ ಸಿಎಂ ಈಡೇರಿಸಿಲ್ಲ. ಬಜೆಟ್ ನಲ್ಲಿ ಉಡುಪಿ ಜಿಲ್ಲೆಯ ಹೆಸರೇ ಪ್ರಸ್ತಾಪ ಮಾಡಿಲ್ಲ. ಇದೆಲ್ಲ ನಮಗೆ ನೋವು ತಂದಿದೆ. ಕಳೆದ ಎರಡು ತಿಂಗಳಿಂದ ಉಡುಪಿಯಲ್ಲಿ ಭಾರೀ ಮಳೆಯಾಗುತ್ತಿದೆ. ಸಮುದ್ರ ಕೊರೆತ ಶುರುವಾಗಿದೆ. ತಗ್ಗು ಪ್ರದೇಶದ ಮನೆಗಳು ಬಿದ್ದಿದೆ. ಮರಗಳು ಬಿದ್ದು ಲಕ್ಷಾಂತರ ರುಪಾಯಿ ಹಾನಿಯಾಗಿದೆ. ಇಷ್ಟೆಲ್ಲ ಆದ್ರೂ ಜಿಲ್ಲೆಗೊಂದು ಉಸ್ತುವಾರಿ ಸಚಿವರ ನೇಮಕವಾಗಿಲ್ಲ ಎಂದು ದೂರಿದರು.

ಇದೇ ವೇಳೆ ಸಿಎಂ ಕುಮಾರಸ್ವಾಮಿ ಅವರು 15 ದಿನಗಳಲ್ಲಿ ಸಿಎಂ ಉಡುಪಿಗೆ ಬರದಿದ್ದರೆ ಬೆಂಗಳೂರಿನಲ್ಲಿ ಎಲ್ಲಾ ಶಾಸಕರ ನೇತೃತ್ವದಲ್ಲಿ ಪ್ರತಿಭಟನೆ ನಡೆಸಿ ವಿಧಾನಸೌಧಕ್ಕೆ ಮುತ್ತಿಗೆ ಹಾಕುವುದಾಗಿ ಎಚ್ಚರಿಕೆ ನೀಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *