ಅಂಬಿ ಮಾಡಲು ಸಾಧ್ಯವಾಗದ ಜಿಲ್ಲೆಯ ಅಭಿವೃದ್ಧಿಗೆ ನಾನು ಚಾಲನೆ ನೀಡಿದ್ದೇನೆ: ಸಿಎಂ ಎಚ್‍ಡಿಕೆ

Public TV
3 Min Read

– ಆತ್ಮೀಯರ ನಡುವೆ ಬಿರುಕು ಮೂಡಿಸಲು ಕೆಲವರು ಪ್ರಯತ್ನಿಸುತ್ತಿದ್ದಾರೆ

ಮಂಡ್ಯ: ಜಿಲ್ಲೆಯ ಜನರ ಋಣದ ಭಾರ ನನ್ನ ಮೇಲಿದ್ದು, ಆ ಋಣವನ್ನು ತೀರಿಸುವ ಕಾರ್ಯ ನನ್ನ ಮೇಲಿದೆ. ಅಭಿವೃದ್ಧಿಯ ವಿಚಾರಕ್ಕೆ ಜಿಲ್ಲೆಗೆ ದೊಡ್ಡ ಅನಾಯ್ಯವಾಗಿದ್ದು, ಅಂಬರೀಶ್ ಅವರ ಕಾಲದಲ್ಲಿ ಮಾಡಲು ಸಾಧ್ಯವಾಗದ ಕಾರ್ಯಗಳಿಗೆ ನಾನು ಚಾಲನೆ ಕೊಟ್ಟಿದ್ದೇನೆ ಎಂದು ಸಿಎಂ ಕುಮಾರಸ್ವಾಮಿ ಹೇಳಿದ್ದಾರೆ.

ಮಂಡ್ಯ ಅಭಿವೃದ್ಧಿ ಯೋಜನೆಗಳ ಚಾಲನೆ ನೀಡುವ ಸಂಬಂಧ ಇಂದು ನಗರದಲ್ಲಿ ಏರ್ಪಡಿಸಲಾಗಿದ್ದ ಕಾರ್ಯಕ್ರಮ ಉದ್ದೇಶಿಸಿ ಸಿಎಂ ಕುಮಾರಸ್ವಾಮಿ ಅವರು ಮಾತನಾಡಿದರು. ಅಂಬರೀಶ್ ಹಾಗೂ ನಾನು ಆತ್ಮೀಯ ಸ್ನೇಹಿತರು. ಅವರು ನಿಧನ ಹೊಂದಿದ್ದ ಸಂದರ್ಭದಲ್ಲಿ ಅವರಿಗೆ ನೀಡಿದ ಗೌರವ ಇಡೀ ಜಿಲ್ಲೆಗೆ ನೀಡಿದ ಗೌರವ. ಇದನ್ನು ಅಂಬರೀಶ್ ಅಭಿಮಾನಿಗಳು ಅರ್ಥ ಮಾಡಿಕೊಳ್ಳಬೇಕು. ಅಂದು ಮಂಡ್ಯ ಜಿಲ್ಲೆಗೆ ಅಂಬರೀಶ್ ಅವರ ಪಾರ್ಥಿವ ಶರೀರವನ್ನು ಕರೆತರುವುದು ಬೇಡ ಎಂದವರು ಇಂದು ಈ ಮಣ್ಣಿನ ಬಗ್ಗೆ ಪ್ರೀತಿ ತೋರಿಸುತ್ತಿದ್ದಾರೆ. ಅಂಬರೀಶ್ ಅವರಿಂದ ಮಾಡಲಾಗದ ಅಭಿವೃದ್ಧಿ ಕಾರ್ಯಗಳನ್ನು ನಾನು ಮಾಡುತ್ತಿದ್ದು, ನಿಮ್ಮ ಋಣವನ್ನು ತೀರಿಸುವ ಕಾರ್ಯವನ್ನು ಮಾಡಿದ್ದೇನೆ ಎಂದರು.

ನನ್ನ ಕುಟುಂಬವನ್ನು ಇಂದು ಬೀದಿಗೆ ಎಳೆದಿದ್ದಾರೆ. ನಾನು ಎಂದಾದರೂ ನನ್ನ ಮಗನನ್ನು ರಾಜಕೀಯಕ್ಕೆ ಕರೆತರುವ ಬಗ್ಗೆ ಮಾತನಾಡಿದ್ದೇನಾ ಎಂದು ಪ್ರಶ್ನಿಸಿದರು. ಅಲ್ಲದೇ ಜಿಲ್ಲೆಯ ಅಭಿವೃದ್ಧಿ ನನ್ನ ಜೀವನದ ಗುರಿಯಾಗಿದ್ದು, ಕಳೆದ ಚುನಾವಣೆಯಲ್ಲಿ 7 ಸ್ಥಾನಗಳಲ್ಲಿ ನಮ್ಮನ್ನು ಗೆದ್ದು ತಂದಿದ್ದೀರಿ. ನಿಮ್ಮ ಆಶೀರ್ವಾದದಿಂದ ಈ ಜಾಗದಲ್ಲಿ ನಿಂತಿದ್ದೇನೆ. ನನ್ನ ಕೊನೆಯ ಉಸಿರು ಇರುವವರೆಗೂ ಇದನ್ನು ಮರೆಯಲ್ಲ. ಕೇವಲ ಮಂಡ್ಯ ಜಿಲ್ಲೆಗಾಗಿ ಕಾರ್ಯಕ್ರಮ ಮಾಡುತ್ತೇನೆ ಎಂದು ಸಣ್ಣತನದ ಮಾತನಾಡುತ್ತಾರೆ. ಆದರೆ ಬೇರೆ ಬೇರೆ ಜಿಲ್ಲೆಗಳಿಗೆ ಯಾವ ಕೊಡುಗೆ ನೀಡಿದ್ದೇನೆ ನನಗೆ ಗೊತ್ತಿದೆ ಎಂದು ಅಭಿವೃದ್ಧಿ ಕಾರ್ಯಕ್ರಮಗಳನ್ನು ಪ್ರಸ್ತಾಪಿಸಿ ತಮ್ಮ ವಿರುದ್ಧದ ಟೀಕೆಗಳಿಗೆ ಉತ್ತರಿಸಿದರು.

ಬದುಕಿರುವುದೇ ನಿಮಗಾಗಿ: ಮತ್ತೆ ತಮ್ಮ ಬದುಕಿನ ಕುರಿತು ಪ್ರಸ್ತಾಪ ಮಾಡಿದ ಸಿಎಂ ಎಚ್‍ಡಿಕೆ ನಾನು ಬದುಕಿರುವುದು ನಿಮಗಾಗಿ, ನಾಡಿನ ಜನತೆಗಾಗಿ ಎಂದರು. ಅಲ್ಲದೇ ರೈತರ ಸಾಲಮನ್ನಾ ವಿಚಾರದಲ್ಲಿ ನಾನು ಎಂದು ಸುಳ್ಳು ಹೇಳಿಲ್ಲ. ನಿನ್ನೆ ಬೆಳಗ್ಗೆ ಹತ್ತು ಗಂಟೆವರೆಗೂ 6 ಲಕ್ಷದ 40 ಸಾವಿರ ರೈತ ಕುಟುಂಬಗಳಿಗೆ 4 ಸಾವಿರದ 103 ಕೋಟಿ ರೂ. ಹಣ ಬಿಡುಗಡೆ ಮಾಡಿದ್ದೇನೆ. ರಾಜ್ಯ ಸರ್ಕಾರದ ಖಜಾನೆಯಲ್ಲಿ ಇನ್ನೂ 6 ಸಾವಿರ ದುಡ್ಡು ಇಟ್ಟಿದ್ದೇನೆ. ಕೇಂದ್ರ ಪ್ರಧಾನಿ ರೀತಿ ನಾನು ಮಾತನಾಡಲ್ಲ ಎಂದು ಕಿಡಿಕಾರಿದರು.

ರೈತರ ಸಾಲಮನ್ನಾ ಮಾಡಿದರೆ ಮಾತ್ರ ರೈತರು ಆರಾಮವಾಗಿ ಇರುತ್ತಾರೆ ಎಂಬ ಭ್ರಮೆ ನನಗಿಲ್ಲ. ಸಮಗ್ರ ಅಭಿವೃದ್ಧಿಗಾಗಿ ನಾನು ದುಡಿಯುತ್ತೇನೆ. ಗಿರವಿ ಇಟ್ಟಿರುವ ಒಡವೆಗಳನ್ನ ಬಿಡಿಸಿಕೊಡುವ ನಿಟ್ಟಿನಲ್ಲಿ ಹೊಸ ಯೋಜನೆ ಜಾರಿಗೆ ತರಲು ನಿರ್ಧರಿಸಲಾಗಿದೆ. ಯೋಜನೆ ಮುಗಿಯುವವರೆಗೂ ಯಾವುದೇ ಮಾನಸಿಕ ಹಿಂಸೆ ಕೊಟ್ಟರೂ ಅಧಿಕಾರದಲ್ಲಿ ಇರುತ್ತೇನೆ. ಆದರೆ ಜಿಲ್ಲೆಯ ಟಿಕೆಟ್ ವಿಚಾರದಲ್ಲಿ ಈ ವೇದಿಕೆಯಲ್ಲಿ ಪ್ರಸ್ತಾಪ ಮಾಡಲ್ಲ. ಅದಕ್ಕೆ ರಾಜಕೀಯ ವೇದಿಕೆ ಇದೆ. ಆಗ ಮಾತನಾಡುತ್ತೇನೆ ಎಂದರು.

ಜಿಲ್ಲೆಯ ಜನ ಹಣ ಪಡೆದು ಮೋಸ ಹೋಗುವುದಿಲ್ಲ. ಯಾವುದೇ ಆಮಿಷಗಳಿಗೆ ಒಳಗಾಗಲ್ಲ. ಇದೇ ರೀತಿ ನಿಮ್ಮ ಬೆಂಬಲ ನಮಗೆ ನೀಡಿ ಯಾವುದೇ ಕಾರಣಕ್ಕೂ ಅನುಕಂಪದ ಮಾತುಗಳಿಗೆ ಮರುಳಾಗಬೇಡಿ. ನಿಜವಾಗಿ ಕೆಲಸ ಮಾಡುವವರಿಗೆ ಅವಕಾಶ ಮಾಡಿಕೊಡಿ ಎಂದು ಪರೋಕ್ಷವಾಗಿ ಸುಮಲತಾ ಅಂಬರೀಶ್ ಅವರಿಗೆ ಟಾಂಗ್ ಕೊಟ್ಟರು.

ಕನ್ನಡಿಗ ಮತ್ತೊಮ್ಮೆ ಪ್ರಧಾನಿ: ರಾಜ್ಯದಲ್ಲಿ 20 ಸ್ಥಾನಗಳಿಗೆ ಹೆಚ್ಚು ಸ್ಥಾನ ಪಡೆದುಕೊಂಡರೆ ದೆಹಲಿಯಲ್ಲಿ ಮತ್ತೊಮ್ಮೆ ಕನ್ನಡಿಗರೊಬ್ಬರು ಪ್ರಧಾನಿಯಾಗ ಬಹುದು ಎಂದು ಹೇಳಿದ ಕುಮಾರಸ್ವಾಮಿ ಅವರು ಪರೋಕ್ಷವಾಗಿ ಎಚ್‍ಡಿಡಿ ಮತ್ತೊಮ್ಮೆ ಪ್ರಧಾನಿ ಆಗುವ ವಿಚಾರವನ್ನು ಬಿಚ್ಚಿಟ್ಟರು. ಅಲ್ಲದೇ ದೇವೇಗೌಡರು ಪ್ರಧಾನಿ ಆಗಿದ್ದಾಗ ಒಂದೇ ಒಂದು ಯೋಧರ ಕುಟುಂಬ ಅನಾಥರಾಗುವ ಘಟನೆ ನಡೆಯಲಿಲ್ಲ. ರೈತರ ಸಾಲಮನ್ನಾ ಮಾಡುವುದು ಪಾಪದ ಕೆಲಸ ಎನ್ನುವ ಪ್ರಧಾನಿಗೆ ಸರಿಯಾದ ಉತ್ತರ ಕೊಡಿ ಎಂದರು.

ಗುರು ಪತ್ನಿಗೆ ನಾಳೆಯೇ ಉದ್ಯೋಗ: ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದ ಹುತಾತ್ಮ ಗುರು ಪತ್ನಿ ಕಲಾವತಿಯರಿಗೆ ಸಂತ್ವಾನ ಹೇಳಿದ ಸಿಎಂ ಕುಮಾರಸ್ವಾಮಿ ಅವರು, ಕಲಾವತಿಯವರು ಗೌರವಯುತವಾಗಿ ಬದುಕು ನಡೆಸಲು ಕೆಲಸ ನೀಡುವ ಆಶ್ವಾಸನೆ ನೀಡಿದ್ದೆ. ಅದರಂತೆ ಅವರಿಗೆ ಬೆಂಗಳೂರಿಗೆ ಬರಲು ಹೇಳಿದ್ದೇನೆ. ನಾಳೆಯೇ ಕೆಲಸ ನೀಡಲಾಗುತ್ತದೆ ಎಂದು ಘೋಷಣೆ ಮಾಡಿದರು.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv

Share This Article
Leave a Comment

Leave a Reply

Your email address will not be published. Required fields are marked *