ಮೈಸೂರು: ನಮ್ಮನ್ನ (ಜೆಡಿಎಸ್) ಕಂಡರೆ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಭಯ ಉಂಟಾಗಿದೆ. ಹೀಗಾಗಿ ನನ್ನ ವಿರುದ್ಧ ಮಾತನಾಡಿದ್ದಾರೆ ಎಂದು ಸಿಎಂ ಕುಮಾರಸ್ವಾಮಿ ಕುಟುಕಿದ್ದಾರೆ.
ಲೋಕಸಭಾ ಚುನಾವಣೆ ಹಿನ್ನೆಲೆಯಲ್ಲಿ ನಗರದಲ್ಲಿ ಜೆಡಿಎಸ್ ಕಾರ್ಯಕರ್ತರ ಸಭೆ ನಡೆಸಲಾಗಿತ್ತು. ಈ ಸಭೆಗೂ ಮುನ್ನ ಮಾಧ್ಯಮಗಳ ಜೊತೆಗೆ ಮಾತನಾಡಿದ ಸಿಎಂ, ಕ್ಲರ್ಕ್ ಅಂತ ಕರೆದಿದ್ದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಕಿಡಿಕಾರಿದರು. ನಾನು ಕ್ಲರ್ಕ್ ಎಂದು ನರೇಂದ್ರ ಮೋದಿ ಅವರಿಗೆ ಹೇಳಿದ್ಯಾರು? ನಾನು ಹೇಳಿದ್ದೇನಾ? ಮೋದಿ ಅವರು ಗೌರವಯುತ ಸ್ಥಾನದಲ್ಲಿದ್ದು, ಹೀಗೆ ಮಾತನಾಡುವುದು ಸರಿಯಲ್ಲ. ಪ್ರಧಾನಿಯಾಗಿ ಇಂತಹ ಕೀಳುಮಟ್ಟದ ಹೇಳಿಕೆ ನೀಡಿರುವುದು ಸರಿಯಲ್ಲ. ಇದರಿಂದ ಅವರ ವ್ಯಕ್ತಿತ್ವಕ್ಕೆ ಧಕ್ಕೆಯಾಗುತ್ತದೆ ಎಂದು ತಿರುಗೇಟು ನೀಡಿದರು.
ಲೋಕಸಭಾ ಚುನಾವಣೆಗೆ ಸಿದ್ಧತೆ ವಿಚಾರವಾಗಿ ಪ್ರತಿಕ್ರಿಯೆ ನೀಡಿ, ಅಭ್ಯರ್ಥಿಗಳ ಆಯ್ಕೆಯಲ್ಲಿ ಕಾರ್ಯಕರ್ತರ ಅಭಿಪ್ರಾಯ ಕೇಳಬೇಕಾಗುತ್ತದೆ. ಮೈಸೂರು ಕ್ಷೇತ್ರದಿಂದ ಜೆಡಿಎಸ್ ಅಭ್ಯರ್ಥಿಯನ್ನೇ ಕಣಕ್ಕೆ ಇಳಿಸಬೇಕು ಅಂತ ಕಾರ್ಯಕರ್ತರು ಒತ್ತಾಯಿಸುತ್ತಿದ್ದಾರೆ. ಆದರೆ ಸೀಟ್ ಹಂಚಿಕೆ ಕುರಿತು ಜೆಡಿಎಸ್ ಹಾಗೂ ಕಾಂಗ್ರೆಸ್ ವರಿಷ್ಠರು ತೀರ್ಮಾನ ತೆಗೆದುಕೊಂಡಿಲ್ಲ. ಸದ್ಯದಲ್ಲಿಯೇ ಎರಡೂ ಪಕ್ಷದವರು ಸಭೆ ಕರೆದು ಅಂತಿ ತೀರ್ಮಾನ ಕೈಗೊಳ್ಳಲಾಗುತ್ತದೆ ಎಂದು ಹೇಳಿದರು.
ಪ್ರಧಾನಿ ನರೇಂದ್ರ ಮೋದಿ ಹೇಳಿದ್ದೇನು?:
ದೆಹಲಿಯ ರಾಮಲೀಲಾ ಮೈದಾನದಲ್ಲಿ ಬಿಜೆಪಿ ಸಮಾವೇಶದ ಕೊನೆಯ ದಿನದ ಕಾರ್ಯಕ್ರಮದ ವೇಳೆ ಮಾತನಾಡಿದ್ದ ಪ್ರಧಾನಿ ನರೇಂದ್ರ ಮೋದಿ ಅವರು, ಕಾಂಗ್ರೆಸ್ ಶಮನ ಮಾಡಲು ಪ್ರಾದೇಶಿಕ ಪಕ್ಷಗಳು ಹುಟ್ಟಿಕೊಂಡಿವೆ. ತೆಲಂಗಾಣದಲ್ಲಿ ಟಿಡಿಪಿಯೊಂದಿಗೆ ಮಾಡಿಕೊಂಡಿದ್ದ ಕಾಂಗ್ರೆಸ್ ಮೈತ್ರಿ ವಿಫಲವಾಯ್ತು. ಕರ್ನಾಟಕದಲ್ಲಿ ಜೆಡಿಎಸ್ ಗೆ ಬೆಂಬಲ ಸೂಚಿಸಿ ಕಾಂಗ್ರೆಸ್ ಸರ್ಕಾರ ರಚನೆ ಮಾಡಿದೆ. ಆದರೆ ಸಿಎಂ ಕುಮಾರಸ್ವಾಮಿ ಅವರನ್ನು ಕಾಂಗ್ರೆಸ್ ಕ್ಲರ್ಕ್ ನಂತೆ ನಡೆಸಿಕೊಳ್ಳುತ್ತಿದೆ ಎಂದು ನನಗೆ ಅನ್ನಿಸುತ್ತದೆ ಎಂದು ಹೇಳಿದ್ದರು.
ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv, ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv