ವರ್ಷದ ಮೊದ್ಲ ಅಮಾವಾಸ್ಯೆ ಜೊತೆಗೆ ಶನಿವಾರ – ಚಿಕ್ಕಮಗ್ಳೂರಲ್ಲಿ ಸಿಎಂ ಶತ್ರುಸಂಹಾರ ಯಾಗ

Public TV
2 Min Read

– ತಿರುಪತಿಯಲ್ಲಿ ಬಿಎಸ್‍ವೈ ಪೂಜೆ

ಚಿಕ್ಕಮಗಳೂರು: ಇಂದು ವರ್ಷದ ಮೊದಲ ಅಮಾವಾಸ್ಯೆ. ಹಿಂದೂ ಪಂಚಾಂಗದ ಪ್ರಕಾರ ಯುಗಾದಿ ಬಳಿಕದ ಪ್ರಪ್ರಥಮ ಅಮಾವಾಸ್ಯೆ. ಒಂದೆಡೆ ಪ್ರಚಂಡ ಮಾರುತವಾದ್ರೆ, ಮತ್ತೊಂದೆಡೆ ಕರ್ನಾಟಕ ರಾಜಕೀಯದಲ್ಲಿ ಮತ್ತೆ ಅಸ್ಥಿರತೆಯ ಭೀತಿ ಎದುರಾಗಿದೆ. ಯಾಕಂದ್ರೆ ಲೋಕಸಭಾ ಫಲಿತಾಂಶಕ್ಕೆ ಕೇವಲ 19 ದಿನವಷ್ಟೇ ಉಳಿದಿದೆ.

ಇಂತಹ ಹೊತ್ತಲ್ಲಿ ಈಗ ಮುಖ್ಯಮಂತ್ರಿ ಎಚ್ ಡಿ ಕುಮಾರಸ್ವಾಮಿ ಹಾಗೂ ಮಾಜಿ ಸಿಎಂ ಬಿಎಸ್ ಯಡಿಯೂರಪ್ಪ ಅವರಿಗೆ ಅಧಿಕಾರ ಹಾಗೂ ಇಬ್ಬರಿಗೂ ಅವರ ಮಕ್ಕಳದ್ದೇ ಚಿಂತೆಯಾಗಿದೆ. ತಮ್ಮ ಮಕ್ಕಳು ಗೆಲ್ಲುತ್ತಾರಾ ಇಲ್ವಾ ಅನ್ನೋ ಟೆನ್ಷನ್ ಆರಂಭವಾಗಿದೆ ಎನ್ನಲಾಗಿದೆ.

ತಮ್ಮ ರಾಜಕೀಯ ವಾರಸುದಾರ ನಿಖಿಲ್ ಗೆಲ್ಲುತ್ತಾರಾ ಇಲ್ವಾ ಅನ್ನೋ ಚಿಂತೆ ಎಚ್‍ಡಿಕೆಗೆ ಕ್ಷಣಕ್ಷಣವೂ ಕಾಡುತ್ತಿದೆ. ಅದರ ಜೊತೆಗೆ ಕಾಂಗ್ರೆಸ್ ಜೊತೆ ಸೇರಿಕೊಂಡು ಹುಟ್ಟುಹಾಕಿದ್ದ ಸಮ್ಮಿಶ್ರ ಸರ್ಕಾರ ಮೇ 23ರ ಬಳಿಕವೂ ಜೀವಂತವಾಗಿ ಉಸಿರಾಡುತ್ತಾ..? ಪದೇ ಪದೇ ಅಲುಗಾಡುತ್ತಿರುವ ಸಿಎಂ ಕುರ್ಚಿ ಪರ್ಮೆನೆಂಟ್ ಆಗಿ ಉರುಳುತ್ತಾ ಅನ್ನೋ ಆತಂಕದಲ್ಲಿ ಕುಮಾರಸ್ವಾಮಿ ಇದ್ದಾರೆ ಎಂಬುದಾಗಿ ಅವರ ಆಪ್ತ ಮೂಲಗಳಿಂದ ತಿಳಿದುಬಂದಿದೆ.

ಇತ್ತ ಶಿವಮೊಗ್ಗದಲ್ಲಿ ಬಿಎಸ್‍ವೈಗೆ ಸುಪುತ್ರ ರಾಘವೇಂದ್ರ ಗೆಲ್ತಾನಾ ಅನ್ನೋ ಆತಂಕವಾದ್ರೆ, ಮತ್ತೊಂದೆಡೆ 54 ಗಂಟೆಯಷ್ಟೇ ಕೈಗೆ ದಕ್ಕಿದ್ದ ಸಿಎಂ ಕುರ್ಚಿ ಲೋಕಸಭಾ ಫಲಿತಾಂಶ ಬಳಿಕ ಮತ್ತೆ ಸಿಗುತ್ತಾ ಅನ್ನೋದು ಬಿಜೆಪಿ ರಾಜ್ಯಾಧ್ಯಕ್ಷ ಯಡಿಯೂರಪ್ಪರನ್ನ ಕಾಡುತ್ತಿದೆ. ಪುತ್ರರ ರಾಜಕೀಯ ಭವಿಷ್ಯ ಮತ್ತು ಸಿಎಂ ಪಟ್ಟದ ಚಿಂತೆಯಲ್ಲಿರುವ ಸಿಎಂ ಮತ್ತು ಮಾಜಿ ಸಿಎಂ ಶನಿವಾರದ ಅಮಾವಾಸ್ಯೆಯಂದು ದೇವರ ಮೊರೆ ಹೋಗಿದ್ದಾರೆ.

ಉಡುಪಿ ಜಿಲ್ಲೆಯ ಕಾಪುವಿನಲ್ಲಿ ಐದು ದಿನಗಳ ಪ್ರಕೃತಿ ಚಿಕಿತ್ಸೆ ಬಳಿಕ ಕುಮಾರಸ್ವಾಮಿ ಮತ್ತು ದೇವೇಗೌಡರು ಯಜ್ಞ ಯಾಗಾದಿಗಳಲ್ಲಿ ಬ್ಯುಸಿ ಆಗಿದ್ದಾರೆ. ಶುಕ್ರವಾರ ಚಿಕ್ಕಮಗಳೂರು ಜಿಲ್ಲೆಯ ಕೊಪ್ಪ ತಾಲೂಕಿನ ಕುಡ್ನಳ್ಳಿಯ ಉಮಾ ಮಹೇಶ್ವರಿ ದೇವಸ್ಥಾನದಲ್ಲಿ ಸತತ 5 ಗಂಟೆ ಪೂಜೆಯಲ್ಲಿ ಕೈಗೊಂಡಿದ್ದಾರೆ. ಸಂಜೆ ಐದೂವರೆಯಿಂದ ಶುರುವಾಗಿದ್ದ ಪೂಜೆ ರಾತ್ರಿ ಹತ್ತೂವರೆಗೆ ಮುಗೀತು.

ಬಳಿಕ ತಲವಾನೆಯ ಗುಡ್ಡೇತೋಟ ರೆಸಾರ್ಟ್ ನಲ್ಲಿ ಸಿಎಂ ಉಳಿದುಕೊಂಡರು. ಇಂದು ಬೆಳಗ್ಗೆ 6 ಗಂಟೆಯಿಂದಲೇ ಗಣಪತಿ ಹೋಮ, ರುದ್ರಯಾಗ ಆರಂಭವಾಗಿದೆ. ಸಿಎಂ, ಮಾಜಿ ಪ್ರಧಾನಿ ಪೂಜೆ ಹಿನ್ನೆಲೆಯಲ್ಲಿ ದೇವಸ್ಥಾನ ಸುತ್ತಮುತ್ತ 200 ಮೀಟರ್ ದೂರದವರೆಗೂ ಕಟ್ಟೆಚ್ಚರ ವಹಿಸಲಾಗಿದ್ದು, ಪೊಲೀಸ್ ಬಿಗಿಭದ್ರತೆ ಕೈಗೊಳ್ಳಲಾಗಿದೆ. ಇನ್ನು ಯಡಿಯೂರಪ್ಪ ಅವರು ಬೆಳಗ್ಗೆ 6.30ಕ್ಕೆ ತಿರುಪತಿಯಲ್ಲಿ ಪೂಜೆ ನೆರವೇರಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *