ಪುತ್ರನ ಗೆಲುವಿಗಾಗಿ ಕುಕ್ಕೆಗೆ ಮೊರೆ – ಎಚ್‍ಡಿಕೆಯಿಂದ ಸುಬ್ರಹ್ಮಣ್ಯನಿಗೆ ಬಂಗಾರದ ರಥ!

Public TV
2 Min Read

– ಕೊನೆಗೂ ಈಡೇರುತ್ತಾ ಧರಂ ಸಿಂಗ್ ಕಾಲದ ಹರಕೆ

ಬೆಂಗಳೂರು: ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಗೆಲುವಿಗಾಗಿ ಸಿಎಂ ಕುಮಾರಸ್ವಾಮಿ ಇದುವರೆಗೂ ಅಸಾಧ್ಯವಾಗಿಯೇ ಉಳಿದಿರುವ ಕಾಯಕವನ್ನ ಪೂರ್ಣಗೊಳಿಸುವ ಸಾಹಸಕ್ಕೆ ಕೈ ಹಾಕಿದ್ದಾರೆ. ಈ ಮೂಲಕ ಶಾಪ ವಿಮೋಚನೆಗಾಗಿ ಮುಂದಾಗಿದ್ದಾರೆ.

ಹೌದು. ಕುಕ್ಕೆ ಸುಬ್ರಹ್ಮಣ್ಯನಿಗೆ ಬಂಗಾರದ ರಥ ಮಾಡಿಸುವ ಹರಕೆಯನ್ನ ಈಡೇರಿಸಲು ಎಚ್‍ಡಿಕೆ ಮುಂದಾಗಿದ್ದಾರೆ. 15 ವರ್ಷಗಳ ಹಿಂದೆ ಧರಂ ಸಿಂಗ್ ಅವರು ಜೆಡಿಎಸ್-ಕಾಂಗ್ರೆಸ್ ಮೈತ್ರಿ ಸರ್ಕಾರದ ಸಿಎಂ ಆಗಿದ್ದಾಗ ಕುಕ್ಕೆಗೆ ಚಿನ್ನದ ರಥ ಕೊಡಿಸುವುದಾಗಿ ಭರವಸೆ ಕೊಟ್ಟಿದ್ದರು. ಆದರೆ ಅವತ್ತು ಸುಬ್ರಹ್ಮಣ್ಯನಿಗೆ ಕೊಟ್ಟಿದ್ದ ವಾಗ್ದಾನ ಇದುವರೆಗೂ ಪೂರ್ಣಗೊಂಡಿಲ್ಲ. ಯಡಿಯೂರಪ್ಪ ಜೊತೆ ಸೇರಿ ಮೈತ್ರಿ ಸರ್ಕಾರ ರಚಿಸಿ ಸಿಎಂ ಆದರೂ ಕುಮಾರಸ್ವಾಮಿಗೆ ಚಿನ್ನದ ರಥ ಮಾಡಿಸಲು ಆಗಿರಲಿಲ್ಲ. ಒಂದೂವರೆ ದಶಕದಷ್ಟು ಹಳೆಯದಾದ ಹರಕೆಯನ್ನು ಈಡೇರಿಸುವಂತೆ ಇತ್ತೀಚೆಗಷ್ಟೇ ಜ್ಯೋತಿಷಿ ದ್ವಾರಕನಾಥ್ ಸಿಎಂ ಕುಮಾರಸ್ವಾಮಿಗೆ ಹೇಳಿದ್ದರು.

ಹರಕೆ ಈಡೇರಿಸಿಲ್ಲ ಅಂದರೆ ಸುಬ್ರಹ್ಮಣ್ಯನ ಶಾಪ ತಟ್ಟುತ್ತದೆ. ಸಿಎಂ ಸ್ಥಾನದಲ್ಲಿ ಇರುವವರು ಇದನ್ನು ನೆರವೇರಿಸಬೇಕು. ಇಲ್ಲದಿದ್ದರೆ ನೆಮ್ಮದಿಯಾಗಿ ಇರಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ್ದರು. ಈ ಹಿನ್ನೆಲೆಯಲ್ಲಿ ದ್ವಾರಕನಾಥ್‍ರನ್ನು ಮನೆಗೆ ಕರೆಸಿಕೊಂಡು ಸಿಎಂ ಮಾತುಕತೆ ನಡೆಸಿದ್ದಾರೆ.

ಸುಬ್ರಹ್ಮಣ್ಯನಿಗೆ ಇನ್ನೂರು ಕೋಟಿ ರೂಪಾಯಿ ಮೊತ್ತದ ಚಿನ್ನದ ರಥ ಮಾಡಿಸುವಂತೆ ಮುಜರಾಯಿ ಇಲಾಖೆಗೆ ಸೂಚಿಸಿದ್ದಾರೆ. ಒಂದೆಡೆ ಮಂಡ್ಯದಲ್ಲಿ ಪುತ್ರ ನಿಖಿಲ್ ಕುಮಾರಸ್ವಾಮಿ ಊರಲ್ಲಿರುವ ದೇವರಿಗೆಲ್ಲ ಪೂಜೆ ಮಾಡುತ್ತಿದ್ದರೆ, ಇತ್ತ ಕುಮಾರಸ್ವಾಮಿ ಅವರು ಕುಕ್ಕೆಗೆ ಬಂಗಾರದ ರಥ ಕೊಟ್ಟು ಶಾಪ ವಿಮೋಚನೆ ಮೂಲಕ ಮಗನ ಗೆಲುವಿಗಾಗಿ ಪ್ರಾರ್ಥಿಸುತ್ತಿದ್ದಾರೆ.

ಈ ಬಗ್ಗೆ ಪಬ್ಲಿಕ್ ಟಿವಿ ಜೊತೆ ಮಾತನಾಡಿದ ದ್ವಾರಕಾನಾಥ್, 2014ರಲ್ಲಿ ಧರಂ ಸಿಂಗ್ ಕಾಲದಲ್ಲಿ ಸುಬ್ರಹ್ಮಣ್ಯ ದೇವರಿಗೆ ಒಂದು ಬಂಗಾರದ ರಥ ಅರ್ಪಣೆ ಮಾಡಬೇಕೆಂದು ತೀರ್ಮಾನ ಮಾಡಿದ್ದರು. ಅಲ್ಲದೆ ಮುಖ್ಯಮಂತ್ರಿ ಆದ ಮೇಲೆ ಬಂಗಾರದ ರಥ ಮಾಡಿಕೊಡುತ್ತೇನೆ ಎಂದು ಧರಂ ಸಿಂಗ್ ಮಾತು ಕೊಟ್ಟಿದ್ದರು. ಮಾತು ಕೊಟ್ಟ ಬಳಿಕ ಅವರಿಗೆ ಅಧಿಕಾರಿಗಳು ಯಾರೂ ಕೂಡ ಸಹಕಾರ ಕೊಡಲಿಲ್ಲ. ಅಲ್ಲದೆ ಮುಂದಿನ ಸರ್ಕಾರ ಕೂಡ ಅದನ್ನು ಜಾರಿ ಮಾಡಿಲ್ಲ. ಸದ್ಯ ಈ ಬಗ್ಗೆ ಕುಮಾರಸ್ವಾಮಿ ನನ್ನ ಜೊತೆ ಈ ಬಗ್ಗೆ ಮಾತುಕತೆ ನಡೆಸಿ, ಚಾಲನೆ ಕೊಡುವುದಾಗಿ ಭರವಸೆ ನೀಡಿದ್ದಾರೆ ಎಂದು ಅವರು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *