ಕೊನೆಕ್ಷಣದಲ್ಲಿ ಸಿದ್ದರಾಮಯ್ಯ ಆಪ್ತನ ಪದಗ್ರಹಣಕ್ಕೆ ಸಿಎಂ ಗೈರು- ಮುನಿಸು ಮುಂದುವರಿಸಿದ್ರಾ ಎಚ್‍ಡಿಕೆ?

Public TV
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಆಪ್ತ ಅಜಯ್ ಸಿಂಗ್ ಪ್ರಮಾಣ ವಚನ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಎಚ್‍ಡಿ ಕುಮಾರಸ್ವಾಮಿ ಗೈರಾಗಿದ್ದಾರೆ.

ಇಂದು ವಿಧಾನಸೌಧದಲ್ಲಿ ದೆಹಲಿ ವಿಶೇಷ ಪ್ರನಿಧಿಯಾಗಿ ಶಾಸಕ ಅಜಯ್ ಸಿಂಗ್ ಅವರು ಅಧಿಕಾರ ಸ್ವೀಕಾರ ಸಮಾರಂಭವಿತ್ತು. ಇಲ್ಲಿ ಕುಮಾರಸ್ವಾಮಿ ಹಾಗೂ ಸಿದ್ದರಾಮಯ್ಯ ಒಟ್ಟೊಟ್ಟಿಗೆ ಕಾಣಿಸಿಕೊಳ್ಳಬೇಕಿತ್ತು. ಆದ್ರೆ ಕೊನೆಯ ಕ್ಷಣದಲ್ಲಿ ದೋಸ್ತಿ ಸರ್ಕಾರದ ಸಿಎಂ ಸಮಾರಂಭದಿಂದ ದೂರ ಉಳಿದಿದ್ದಾರೆ. ಇದರಿಂದ ನಿನ್ನೆಯಷ್ಟೇ ರಾಜೀನಾಮೆ ಕೊಡ್ತೀನಿ ಎಂದು ಕಾಂಗ್ರೆಸ್ ಶಾಸಕರ ವಿರುದ್ಧ ಗುಡುಗಿದ್ದ ಸಿಎಂ ಕುಮಾರಸ್ವಾಮಿ ಅವರ ಮುನಿಸು ಮುಂದುವರಿದಂತೆ ಕಾಣುತ್ತಿದೆ.

ಅಚ್ಚರಿಯೆಂದರೆ ಇಂದು ಸಿಎಂ ಕಚೇರಿಯಿಂದ ಎರಡು ಟಿಪಿ ಹೊರಡಿಸಲಾಗಿತ್ತು. ಮೊದಲ ಟಿಪಿಯಲ್ಲಿ ಮುಖ್ಯಮಂತ್ರಿಗಳು ಕಾರ್ಯಕ್ರಮಕ್ಕೆ ಬರುವ ಸಮಯ ನಿಗದಿಯಾಗಿತ್ತು. ಮತ್ತೆ ದಿಢೀರನೇ ಆ ಟಿಪಿ ಬದಲಾವಣೆ ಮಾಡಿ ಮತ್ತೊಂದು ಟಿಪಿ ಹೊರಡಿಸಿದ್ದಾರೆ. ಆ ಟಿಪಿಯಲ್ಲಿ ಸಿಎಂ ಅವರು ಕೃಷ್ಣಾದಲ್ಲಿ ಕಾರ್ಯಕ್ರಮವನ್ನಿಟ್ಟುಕೊಂಡಿದ್ದಾರೆ ಎನ್ನುವ ಮಾಹಿತಿ ಲಭ್ಯವಾಗಿದೆ.

ಕೃಷ್ಣಾದಲ್ಲಿ ಕಾರ್ಯಕ್ರಮ ಇರುವ ಕಾರಣ ಪದಗ್ರಹಣ ಕಾರ್ಯಕ್ರಮದಲ್ಲಿ ಗೈರಾಗಿದ್ದಾರೆ ಎನ್ನುವ ಕಾರಣ ನೀಡಬಹುದಾದರೂ ಗೈರಿಗೆ ಸಿದ್ದರಾಮಯ್ಯನವರ ಮೇಲಿರುವ ಅಸಮಾಧಾನವೇ ಕಾರಣ ಎನ್ನಲಾಗುತ್ತಿದೆ.

ಒಟ್ಟಿನಲ್ಲಿ ಅಜಯ್ ಸಿಂಗ್ ಅವರ ಪ್ರಮಾಣವಚನ ಕಾರ್ಯಕ್ರಮಕ್ಕೆ ಸಿಎಂ ಅವರ ಗೈರು ಹಾಜರಿ ಹಲವು ಅನುಮಾನಗಳಿಗೆ ಎಡೆಮಾಡಿಕೊಟ್ಟಿದೆ. ಈ ಮೂಲಕ ಸಿಎಂ ಅವರಿಗೆ ಸಿದ್ದರಾಮಯ್ಯ ಅವರ ಮೇಲೆ ಸಿಟ್ಟು, ಮುನಿಸು ಇದ್ಯಾ ಎಂಬ ಪ್ರಶ್ನೆ ಹುಟ್ಟಿಕೊಂಡಿದೆ. ಯಾಕಂದ್ರೆ ಮೊನ್ನೆಯಷ್ಟೇ ಸಿದ್ದರಾಮಯ್ಯ ಅವರ ಬೆಂಬಲಿಗರು, ಸಿದ್ದರಾಮಯ್ಯ ಅವರೇ ನಮ್ಮ ಮುಖ್ಯಮಂತ್ರಿ ಎಂಬ ಹೇಳಿಕೆ ಕೊಟ್ಟಿದ್ದರು. ಅಲ್ಲದೇ ಸರ್ಕಾರದ ಕಾರ್ಯವೈಖರಿ ಬಗ್ಗೆ ಅಸಮಾಧಾನ ವ್ಯಕ್ತಪಡಿಸಿದ್ದರು.

ಇದರಿಂದ ಬೇಸರಗೊಂಡ ಮುಖ್ಯಮಂತ್ರಿ ಕುಮಾರಸ್ವಾಮಿಯವರು, ನನ್ನ ಕಾರ್ಯವೈಖರಿ ಇಷ್ಟವಾಗಿಲ್ಲವೆಂದಲ್ಲಿ ನಾನು ನನ್ನ ಸ್ಥಾನಕ್ಕೆ ರಾಜೀನಾಮೆ ಕೊಡಲು ಸಿದ್ಧನಿದ್ದೇನೆ. ಸಿಎಂ ಕುರ್ಚಿಗೆ ನಾನು ಅಂಟುಕೊಂಡಿಲ್ಲ ಎಂದು ಹೇಳಿದ್ದರು. ಇದೀಗ ಇಂದಿನ ಈ ಕಾರ್ಯಕ್ರಮ ಸಮ್ಮಿಶ್ರ ಸರ್ಕಾರದಲ್ಲಿ ಎಲ್ಲೋ ಒಂದು ಕಡೆ ಎಲ್ಲವೂ ಸರಿ ಇಲ್ಲ ಎನ್ನುವುದು ಮತ್ತೊಮ್ಮೆ ಸಾಬೀತಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *