ಸಿಎಂ ಗ್ರಾಮ ವಾಸ್ತವ್ಯ- ಅವಸರದ ಅಭಿವೃದ್ಧಿಯಲ್ಲಿ ರಾಯಚೂರಿನ ಕರೇಗುಡ್ಡ

Public TV
2 Min Read

ರಾಯಚೂರು: ಸಿಎಂ ಅವರು ಗ್ರಾಮ ವಾಸ್ತವ್ಯ ಮಾಡಲಿರುವ ರಾಯಚೂರಿನ ಕರೇಗುಡ್ಡ ಈಗ ಅವಸರದ ಅಭಿವೃದ್ದಿಯಲ್ಲಿದೆ. ನಾಡಿನ ಮುಖ್ಯಮಂತ್ರಿ ಆಗಮನದ ಹಿನ್ನೆಲೆಯಲ್ಲಿ ಶರವೇಗದಲ್ಲಿ ಸಿದ್ಧತೆಗಳು ನಡೆದಿದೆ. ಇಲ್ಲಿನ ಸರ್ಕಾರಿ ಶಾಲೆ ಸುಣ್ಣಬಣ್ಣವನ್ನ ಕಂಡು ಕಂಗೊಳಿಸುತ್ತಿದೆ.

ಗ್ರಾಮದ ನೀರಿನ ಸಮಸ್ಯೆ ಬಗೆಹರಿಯಿತು. ಯಾರೂ ಕಿವಿಗೆ ಹಾಕಿಕೊಳ್ಳದ ರಸ್ತೆಯ ಸಮಸ್ಯೆಯೂ ತೀರಿತು. ವಿದ್ಯುತ್ ಸಮಸ್ಯೆಯಂತೂ ಇಲ್ಲವೇ ಇಲ್ಲ. ಗ್ರಾಮ ಎಂದೂ ಕಾಣದ ಚರಂಡಿಯೂ ನಿರ್ಮಾಣವಾಯ್ತು. ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯಂತೂ ಹೊಳೆಯುತ್ತಿದೆ. ಇದು ರಾಜ್ಯದ ಮುಖ್ಯಮಂತ್ರಿಗಳ ಗ್ರಾಮವಾಸ್ತವ್ಯಕ್ಕೆ ಸಜ್ಜಾಗಿರೋ ರಾಯಚೂರಿನ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮ.

ಸಿಎಂ ಆಗಮನ ಹಿನ್ನೆಲೆಯಲ್ಲಿ ಲಕ್ಷಾಂತರ ರೂಪಾಯಿ ಖರ್ಚು ಮಾಡಿ ಗ್ರಾಮದ ಚಿತ್ರಣವನ್ನೇ ಬದಲಿಸಲಾಗಿದೆ. ಸುಮಾರು 22 ಎಕರೆ ಜಾಗದಲ್ಲಿ ಮುಖ್ಯಮಂತ್ರಿ ಜನ ಸಂಪರ್ಕ ಸಭೆಗೆ ವೇದಿಕೆ ಸಜ್ಜಾಗಿದೆ. ಸಾರ್ವಜನಿಕರಿಗೆ ಊಟದ ವ್ಯವಸ್ಥೆ, ವಿಐಪಿಗಳಿಗೆ ಪ್ರತ್ಯೇಕ ವ್ಯವಸ್ಥೆ, ವೇದಿಕೆ ಕೆಳಗೆ ಮನವಿ ಕೊಡಲು ಬರುವವರಿಗೆ ಯಾವುದೇ ತೊಂದರೆಯಾಗದಂತೆ ಒಟ್ಟು 14 ಕೌಂಟರ್ ತೆರೆಯಲಾಗಿದೆ. ಅಂಗವಿಕಲರಿಗೆ ಪ್ರತ್ಯೇಕ ವ್ಯವಸ್ಥೆ ಮಾಡಲಾಗಿದೆ. ಸಿಎಂ ವಾಸ್ತವ್ಯ ಮಾಡಲಿರುವ ಶಾಲೆಗೆ ಸುಣ್ಣ ಬಣ್ಣ ಬಳಿದು ಸಕಲ ವ್ಯವಸ್ಥೆಯನ್ನೂ ಕಲ್ಪಿಸಲಾಗಿದೆ.

ಮಂಗಳವಾರ ರಾತ್ರಿ 8.45ಕ್ಕೆ ಬೆಂಗಳೂರಿನಿಂದ ಉದ್ಯಾನ ಎಕ್ಸ್‍ಪ್ರೆಸ್‍ನಲ್ಲಿ ಹೊರಟಿರೋ ಸಿಎಂ ಇಂದು ಬೆಳಗ್ಗೆ ರಾಯಚೂರು ತಲುಪಿದ್ದಾರೆ. 8 ಗಂಟೆಗೆ ರಸ್ತೆಯ ಮೂಲಕ ಮಾನ್ವಿ ತಾಲೂಕಿನ ಕರೇಗುಡ್ಡ ಗ್ರಾಮಕ್ಕೆ ಆಗಮಿಸಲಿದ್ದಾರೆ. ಬೆಳಗ್ಗೆ 10ರಿಂದ ಸಂಜೆ 6 ಗಂಟೆವರೆಗೆ ಜನತಾದರ್ಶನದಲ್ಲಿ ಜನರ ಕುಂದು ಕೊರತೆಗಳನ್ನು ಆಲಿಸಲಿದ್ದಾರೆ. ಸಂಜೆ 6.30ರಿಂದ 8.30 ಗಂಟೆವರೆಗೆ ರೈತರೊಂದಿಗೆ ಮಾತನಾಡಲಿದ್ದು, ಬಳಿಕ ಸಾಂಸ್ಕೃತಿಕ ಕಾರ್ಯಕ್ರಮ ನಡೆಯಲಿದೆ. ನಂತರ ಮಕ್ಕಳೊಂದಿಗೆ ಊಟ ಮಾಡಿ, ಶಾಲೆಯಲ್ಲಿ ವಾಸ್ತವ್ಯ ಹೂಡಲಿದ್ದಾರೆ. ನಾಳೆ ಬೆಳಗ್ಗೆ 5 ಗಂಟೆಗೆ ಹೆಲಿಕಾಪ್ಟರ್ ಮೂಲಕ ಬೀದರ್‍ನ ಉಜಿಳಾಂಬ ಗ್ರಾಮಕ್ಕೆ ತೆರಳಲಿದ್ದಾರೆ ಎಂದು ಜಿಲ್ಲಾ ಉಸ್ತುವಾರಿ ಸಚಿವ ವೆಂಕಟರಾವ್ ನಾಡಗೌಡ ತಿಳಿಸಿದ್ದಾರೆ.

ರಾಯಚೂರಿನಲ್ಲಿ ಮುಖ್ಯಮಂತ್ರಿಗಳಿಗೆ ಪ್ರತಿಭಟನೆ ಬಿಸಿ ತಾಗೋ ಸಾಧ್ಯತೆ ಇದೆ. ದೇವದುರ್ಗ ಶಾಸಕ ಶಿವನಗೌಡ ನಾಯಕ್ ಪಾದಯಾತ್ರೆ ಮೂಲಕ ಕರೇಗುಡ್ಡಕ್ಕೆ ಬಂದು ಹೋರಾಟ ನಡೆಸಲು ಸಜ್ಜಾಗಿದ್ದಾರೆ. ಒಟ್ಟಿನಲ್ಲಿ ಸಿಎಂ ಗ್ರಾಮ ವಾಸ್ತವ್ಯಕ್ಕೆ ಒಂದೆಡೆ ಸಿದ್ಧತೆ ನಡೆದಿದ್ದರೆ, ಮತ್ತೊಂದೆಡೆ ಸಮಸ್ಯೆಗಳನ್ನು ಮುಂದಿಟ್ಟು ಹೋರಾಟ ನಡೆಸಲು ವಿವಿಧ ಸಂಘಟನೆಗಳು ಹಾಗೂ ಬಿಜೆಪಿ ಸಿದ್ಧವಾಗಿದೆ.

Share This Article
Leave a Comment

Leave a Reply

Your email address will not be published. Required fields are marked *