ಬೆಂಗಳೂರು: ಸೋಮವಾರ ಸಂಜೆಯವರೆಗೆ ಎಲ್ಲ ಮುಗಿಯುವ ಭರವಸೆ ಇದೆ. ಈಗಲಾದರೂ ಸಿಎಂ ತಕ್ಷಣ ರಾಜೀನಾಮೆ ಕೊಡಲಿ. ಹಾಗೆಯೇ ಹೊಸ ಸರ್ಕಾರ ರಚನೆಗೆ ಅವಕಾಶ ಮಾಡಿ ಕೊಡಲಿ ಎಂದು ಬಿಜೆಪಿ ರಾಜ್ಯಾಧ್ಯಕ್ಷ ಬಿಎಸ್ ಯಡಿಯೂರಪ್ಪ ಹೇಳಿದ್ದಾರೆ.
ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಎಲ್ಲರ ಗಮನ ನಾಳೆ ಸುಪ್ರೀಂಕೋರ್ಟ್ ಏನು ತೀರ್ಪು ಕೊಡಬಹುದು ಎನ್ನುವುದರ ಮೇಲಿದೆ. 15 ಮಂದಿ ಅತೃಪ್ತ ಶಾಸಕರು ವಿಧಾನಸಭೆಗೆ ಹೋಗೋದು ಬಿಡೋದು ಅವರ ಬಿಟ್ಟ ವಿಚಾರವಾಗಿದೆ. ಅವರನ್ನು ಯಾರೂ ಬಲವಂತ ಮಾಡಬಾರದು ಎಂದು ಈಗಾಗಲೇ ಸುಪ್ರೀಂಕೋರ್ಟ್ ಹೇಳಿದೆ. ಹೀಗಾಗಿ ಅವರ ಮೇಲೆ ವಿಪ್ ಜಾರಿ ಮಾಡಿದರೆ ಯಾವುದೇ ಪರಿಣಾಮ ಆಗಲ್ಲ ಎಂದು ಅವರು ತಿಳಿಸಿದರು.
ಅನಗತ್ಯ ವಿಳಂಬ ಮಾಡಿಕೊಂಡು ಅಭಿವೃದ್ಧಿ ಕಾರ್ಯಗಳಿಗೆ ಧಕ್ಕೆ ಮಾಡುವ ಕೆಲಸವನ್ನು ಮೈತ್ರಿ ಸರ್ಕಾರ ಮಾಡುತ್ತಿದೆ. ನಾಳೆ ವಿಶ್ವಾಸ ಮತ ಯಾಚನೆ ಮಾಡುವುದಾಗಿ ಸ್ಪೀಕರ್ ಮತ್ತು ಸಿಎಂ ಕೊಟ್ಟಿದ್ದಾರೆ. ಇನ್ನು ಯಾವುದೇ ಕಾರಣಕ್ಕೂ ವಿಳಂಬ ಮಾಡಬಾರದು. ವಿಳಂಬ ಮಾಡಿದರೆ ಅದು ಪ್ರಜಾತಂತ್ರಕ್ಕೆ ದ್ರೋಹ ಮಾಡಿದಂತಾಗುತ್ತದೆ. ನಾವು ನಾಳೆಯವರೆಗೆ ಕಾದು ನೋಡುತ್ತೇವೆ ಎಂದು ಬಿಎಸ್‍ವೈ ತಿಳಿಸಿದ್ದಾರೆ.