ರಾಜ್ಯದಲ್ಲಿ ಹೆಚ್ಚು ಹೂಡಿಕೆ ಮಾಡಲು ಜಾಗತಿಕ ಕಂಪನಿಗಳ ಆಸಕ್ತಿ

Public TV
2 Min Read

ದಾವೋಸ್: ವಿಶ್ವ ಆರ್ಥಿಕ ಸಮ್ಮೇಳನದ ಮೂರನೇ ದಿನವಾದ ಗುರುವಾರ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ಅವರ ನೇತೃತ್ವದ ಉನ್ನತ ಮಟ್ಟದ ನಿಯೋಗವು ಹಲವಾರು ಜಾಗತಿಕ ಕಂಪನಿಗಳ ಮುಖ್ಯಸ್ಥರೊಂದಿಗೆ ಮಾತುಕತೆ ನಡೆಸಿತು. ಜೆಮಿನಿ ಕಾರ್ಪೊರೇಷನ್, ಕೋಕಾಕೋಲಾ ಕಂಪನಿ, ಉಬರ್, ಎಸ್‍ಎಪಿ ಲ್ಯಾಬ್ಸ್, ಜನರಲ್ ಎಲೆಕ್ಟ್ರಿಕ್ (ಜಿಇ), ಸ್ವಿಸ್‍ರೆ ಮತ್ತು ಮಿತ್ಸುಬಿಷಿ ಹೆವಿ ಇಂಡಸ್ಟ್ರೀಸ್ ನ ಪ್ರಮುಖರೊಂದಿಗೆ ಕರ್ನಾಟಕದಲ್ಲಿ ಬಂಡವಾಳ ತೊಡಗಿಸುವ ಬಗ್ಗೆ ಚರ್ಚೆ ನಡೆಸಿದರು.

ಕರ್ನಾಟಕದಲ್ಲಿ ಉದ್ದಿಮೆಗಳ ವಿಸ್ತರಣೆ ಯೋಜನೆಗಳ ಬಗ್ಗೆ ಮಾಹಿತಿ ಪಡೆದುಕೊಂಡ ಮುಖ್ಯಮಂತ್ರಿಗಳು, ರಾಜ್ಯದಲ್ಲಿ ಕೈಗಾರಿಕೆಗಳ ಬೆಳವಣಿಗೆಗೆ ತಮ್ಮ ಸರ್ಕಾರ ಸಂಪೂರ್ಣ ಬೆಂಬಲ ನೀಡಲಿದೆ. ಸರ್ಕುಲರ್ ಎಕಾನಮಿ, ಇಂಧನ ಮತ್ತು ಮೊಬಿಲಿಟಿ ಕ್ಷೇತ್ರಕ್ಕೆ ಸಂಬಂಧಿಸಿದ ಕಂಪನಿಗಳ ಪ್ರತಿನಿಧಿಗಳೊಂದಿಗಿನ ತಮ್ಮ ಚರ್ಚೆಯಲ್ಲಿ ಮುಖ್ಯಮಂತ್ರಿಗಳು ಸುಸ್ಥಿರ ಅಭಿವೃದ್ಧಿಗೆ ಒತ್ತು ನೀಡಿದರು.

ಇದೇ ವೇಳೆ ಉಬರ್ ನ ಮುಖ್ಯಕಾರ್ಯನಿರ್ವಹಣಾಧಿಕಾರಿ ಡಾರಾ ಖೋಸ್ರೋವ್ ಶಾಹಿ ಅವರು ಬೆಂಗಳೂರಿನಲ್ಲಿ ತಮ್ಮ ಉದ್ಯಮದ ವಿಸ್ತರಣೆ ಮಾಡಲಾಗುತ್ತದೆ ಮತ್ತು ಇನ್ನೂ ಹೆಚ್ಚಿನ ಬಂಡವಾಳ ಹೂಡಿಕೆ ಮಾಡಲಾಗುವುದು ಎಂದು ಮುಖ್ಯಮಂತ್ರಿಗಳಿಗೆ ಭರವಸೆ ನೀಡಿದರು.

ಜಿಇ ಕಂಪನಿಯ ವಿಲಿಯಂ ಮೊ ಕೊವನ್ ಅವರನ್ನು ಭೇಟಿ ಮಾಡಿದ ಯಡಿಯೂರಪ್ಪ ಅವರು, ಆರೋಗ್ಯ ಕ್ಷೇತ್ರ, ವಿದ್ಯುತ್ ವಿತರಣೆ ಮತ್ತು ಪವನ ವಿದ್ಯುತ್ ಉತ್ಪಾದನೆಗೆ ಸಂಬಂಧಿಸಿದಂತೆ ರೂಪಿಸಿರುವ ಯೋಜನೆಗಳ ಬಗ್ಗೆ ಮಾಹಿತಿ ಪಡೆದರು. ಇದೇ ವೇಳೆ, ಕೋಕಾಕೋಲಾದ ಪ್ರತಿನಿಧಿಗಳು 25 ದಶಲಕ್ಷ ಅಮೆರಿಕನ್ ಡಾಲರ್ ನಷ್ಟು ಬಂಡವಾಳವನ್ನು ಹೂಡಲಾಗುತ್ತದೆ ಮತ್ತು ಇದನ್ನು ಮುಂಬರುವ ದಿನಗಳಲ್ಲಿ 200 ದಶಲಕ್ಷ ಡಾಲರ್ ಗಳಿಗೆ ಹೆಚ್ಚಿಸಲಾಗುತ್ತದೆ. ಈ ಬಂಡವಾಳದಿಂದ ರೈತರಿಗೆ, ಗ್ರಾಮೀಣ ಪ್ರದೇಶದ ಜನರಿಗೆ ಶುದ್ಧ ಕುಡಿಯುವ ನೀರಿನ ಯೋಜನೆಗೆ ವಿನಿಯೋಗ ಮಾಡಲಾಗುತ್ತದೆ ಎಂದು ವಿವರಿಸಿದರು.

ಇದಕ್ಕೂ ಮುನ್ನ ಮುಖ್ಯಮಂತ್ರಿಗಳು ಸ್ಟ್ರಾಟೆಜಿಕ್ ಔಟ್ ಲುಕ್ ಇಂಡಿಯಾ ಫಾರ್ ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಫಾರ್ ಇಂಡಿಯಾ ಎಂಬ ಸಂವಾದದಲ್ಲಿ ಪಾಲ್ಗೊಂಡರು. ಈ ಸಂವಾದದಲ್ಲಿ ಕೇಂದ್ರ ರೈಲ್ವೆ ಮತ್ತು ವಾಣಿಜ್ಯ ಮತ್ತು ಕೈಗಾರಿಕೆ ಸಚಿವ ಪಿಯೂಷ್ ಗೋಯಲ್, ಎಸ್ ಬಿಐ ನ ಅಧ್ಯಕ್ಷ ರಜನೀಶ್ ಕುಮಾರ್ ಸೇರಿದಂತೆ ಮತ್ತಿತರೆ ಪ್ರಮುಖರು ಹಾಜರಿದ್ದರು.

ಯುಎಸ್ ಡಾಲರ್ 5 ಟ್ರಿಲಿಯನ್ ಎಕಾನಮಿ ಗುರಿ ತಲುಪಲು ಭಾರತದ ಎಲ್ಲಾ ರಾಜ್ಯಗಳು ಕೈಜೋಡಿಸುತ್ತಿವೆ. ನಮ್ಮ ರಾಜ್ಯ ಕರ್ನಾಟಕ 250 ಬಿಲಿಯನ್ ಯುಎಸ್ ಡಾಲರ್ ನಷ್ಟು ಜಿಡಿಪಿಯನ್ನು ಹೊಂದಿದ್ದು, ಶೇ.9ರ ಪ್ರಮಾಣದಲ್ಲಿ ಬೆಳೆಯುತ್ತಿದೆ. ಈ ಹಿನ್ನೆಲೆಯಲ್ಲಿ ನಾವು ಇಲ್ಲಿ ವಿಶ್ವ ಆರ್ಥಿಕ ಸಮ್ಮೇಳನದ ಮೂಲಕ ನಮ್ಮ ರಾಜ್ಯಗಳಲ್ಲಿ ಹೂಡಿಕೆ ಮಾಡಲು ಉದ್ಯಮಿಗಳಿಗೆ ಮತ್ತು ವಾಣಿಜ್ಯೋದ್ಯಮಿಗಳಿಗೆ ಮುಕ್ತ ಆಹ್ವಾನ ನೀಡುತ್ತಿದ್ದೇವೆ ಎಂದು ಯಡಿಯೂರಪ್ಪ ತಿಳಿಸಿದರು.

ಯಡಿಯೂರಪ್ಪ ನೇತೃತ್ವದ ನಿಯೋಗದಲ್ಲಿ ಬೃಹತ್ ಮತ್ತು ಮಧ್ಯಮ ಕೈಗಾರಿಕೆಗಳ ಸಚಿವ ಜಗದೀಶ್ ಶೆಟ್ಟರ್, ರಾಜ್ಯ ಸರ್ಕಾರದ ಮುಖ್ಯಕಾರ್ಯದರ್ಶಿ ಟಿ.ಎಂ.ವಿಜಯಭಾಸ್ಕರ್, ಐಟಿ, ಬಿಟಿ ಮತ್ತು ಎಸ್&ಟಿ ಇಲಾಖೆಯ ಹೆಚ್ಚುವರಿ ಮುಖ್ಯಕಾರ್ಯದರ್ಶಿ ಡಾ.ಇ.ವಿ.ರಮಣರೆಡ್ಡಿ, ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆಯ ಪ್ರಧಾನ ಕಾರ್ಯದರ್ಶಿ ಗೌರವ್ ಗುಪ್ತ, ಮುಖ್ಯಮಂತ್ರಿಗಳ ಕಾರ್ಯದರ್ಶಿ ಡಾ.ಎಸ್.ಸೆಲ್ವಕುಮಾರ್, ಕೈಗಾರಿಕಾಭಿವೃದ್ಧಿ ಇಲಾಖೆಯ ಆಯುಕ್ತರಾದ ಗುಂಜನ್ ಕೃಷ್ಣ ಸೇರಿದಂತೆ ರಾಜ್ಯ ಸರ್ಕಾರದ ಉನ್ನತಾಧಿಕಾರಿಗಳು ಇದ್ದರು.

Share This Article
Leave a Comment

Leave a Reply

Your email address will not be published. Required fields are marked *