ಕಾಂಗ್ರೆಸ್ಸಿನಲ್ಲೇ ಇಬ್ಭಾಗ – ಸಿದ್ದರಾಮಯ್ಯ ಸ್ವಾಗತಿಸಿದ ಕೂಡಲೇ ಟ್ವೀಟ್ ಡಿಲೀಟ್

Public TV
2 Min Read

ಬೆಂಗಳೂರು: ಫೋನ್ ಕದ್ದಾಲಿಕೆ ಪ್ರಕರಣವನ್ನು ಮುಖ್ಯಮಂತ್ರಿ ಯಡಿಯೂರಪ್ಪ ಅವರು ಸಿಬಿಐ ತನಿಖೆಗೆ ವಹಿಸಿದ ವಿಚಾರ ಈಗ ಕಾಂಗ್ರೆಸ್ಸಿನಲ್ಲೇ ಭಿನ್ನಾಭಿಪ್ರಾಯಕ್ಕೆ ಕಾರಣವಾಗಿದೆ. ಯಡಿಯೂರಪ್ಪನವರ ನಿರ್ಧಾರವನ್ನು ಕಾಂಗ್ರೆಸ್ ಟೀಕಿಸಿದ್ದರೆ ಮಾಜಿ ಸಿಎಂ ಸಿದ್ದರಾಮಯ್ಯನವರು ಸ್ವಾಗತಿಸಿದ್ದಾರೆ.

“ಫೋನ್ ಕದ್ದಾಲಿಕೆ ಹಗರಣದ ತನಿಖೆಯನ್ನು ಸಿಬಿಐಗೆ ಒಪ್ಪಿಸಿರುವ ಮುಖ್ಯಮಂತ್ರಿ ಬಿ.ಎಸ್.ಯಡಿಯೂರಪ್ಪ ನಿರ್ಧಾರ ಸ್ವಾಗತಾರ್ಹ. ಆದರೆ ಬಿಜೆಪಿ ಸಿಬಿಐಯನ್ನು ಕೈಗೊಂಬೆ ಮಾಡಿಕೊಂಡು ರಾಜಕೀಯ ಸೇಡಿಗಾಗಿ ದುರ್ಬಳಕೆ ಮಾಡಿಕೊಳ್ಳುತ್ತಾ ಬಂದಿರುವುದನ್ನು ದೇಶ ಕಂಡಿದೆ. ಇಂತಹ ದುಷ್ಟ ಆಲೋಚನೆ ಬಿಜೆಪಿ ನಾಯಕರಿಗಿಲ್ಲ ಎಂದು ನಂಬಿದ್ದೇನೆ” ಎಂದು ಸಿದ್ದರಾಮಯ್ಯ ಟ್ವೀಟ್‍ನಲ್ಲಿ ತಿಳಿಸಿದ್ದಾರೆ.

ಇದೇ ವಿಚಾರದ ಬಗ್ಗೆ ಕಾಂಗ್ರೆಸ್, “ಬಿ.ಎಸ್.ಯಡಿಯೂರಪ್ಪ ಅವರೇ, ತಾನು ಕಳ್ಳ ಪರರ ನಂಬ ಎಂಬಂತೆ ನಿಮ್ಮ ವರ್ತನೆ. ಆಪರೇಷನ್ ಕಮಲ ಮುಖೇನ ಸರ್ಕಾರ ಬೀಳಿಸಿ, ಹಿಂಬಾಗಿಲ ಅನೈತಿಕ ಸಿಎಂ ಆಗಿರುವ ತಾವು ಭೂಗತ ಪಾತಕಿಗಳ ರೀತಿ ವರ್ತಿಸುತ್ತಿದ್ದೀರಿ. ಮೋದಿ ಆಳ್ವಿಕೆಯಲ್ಲಿ ಸಿಬಿಐ ಬಿಜೆಪಿಯ ಮುಂಚೂಣಿ ಘಟಕವಾಗಿ ಕೆಲಸ ಮಾಡುತ್ತಿದೆ. ಫೋನ್ ಕದ್ದಾಲಿಕೆ ಎಂಬುದೊಂದು ಸುಳ್ಳು, ದ್ವೇಷ ರಾಜಕಾರಣದ ಸಂಚು” ಎಂದು ಹೇಳಿ ಟ್ವೀಟ್ ಮಾಡಿತ್ತು.

ಯಾವಾಗ ಸಿದ್ದರಾಮಯ್ಯನವರ ಖಾತೆಯಿಂದ ಯಡಿಯೂರಪ್ಪನವರ ನಿರ್ಧಾರ ಸ್ವಾಗತಾರ್ಹ ಎಂದು ಪ್ರಕಟವಾಯ್ತೋ ಕೂಡಲೇ ಕಾಂಗ್ರೆಸ್ ಈ ಹಿಂದೆ ಮಾಡಿದ್ದ ಟ್ವೀಟ್ ಡಿಲೀಟ್ ಮಾಡಿದೆ.

ಮತ್ತೊಂದು ಟ್ವೀಟ್‍ನಲ್ಲಿ “ತುಘಲಕ್ ನರೇಂದ್ರಮೋದಿ, ನಾಲಾಯಕ್ ಯಡಿಯೂರಪ್ಪ ರಾಜ್ಯಕ್ಕೆ ದ್ರೋಹವೆಸಗಿದ್ದಾರೆ. ಮಧ್ಯಂತರ 5000 ಕೋಟಿ ನೀಡದೆ, ರಾಷ್ಟ್ರೀಯ ವಿಪತ್ತೆಂದು ಘೋಷಿಸದೆ, 1 ಲಕ್ಷ ಕೋಟಿ ನಷ್ಟವಾದರೂ ಹಣ ಒದಗಿಸದೆ, ಜಬಾಬ್ದಾರಿ ಮತ್ತು ಕರ್ತವ್ಯ ನಿರ್ವಹಿಸದೆ ಕೇಂದ್ರ ಕಣ್ಣುಚ್ಚಿದೆ. ನೆರೆ ಪರಿಹಾರವು ರಾಜ್ಯದ ಹಕ್ಕು, ರಾಜ್ಯದ ಹಕ್ಕನ್ನು ಪಡೆಯಲಾಗದ ಹೇಡಿಯೇ ಸಿಎಂ? ಎಂದು ಪ್ರಶ್ನೆ ಮಾಡಿದೆ.

ಕ್ಯಾಬಿನೆಟ್ ರಚಿಸಲು ತೆರಳಿದ್ದ ಯಡಿಯೂರಪ್ಪನವರ ಜೊತೆ ಅಮಿತ್ ಶಾ ಫೋನ್ ಕದ್ದಾಲಿಕೆಯ ವಿಚಾರದ ಬಗ್ಗೆ ಬಹಳ ಗಂಭೀರವಾಗಿ ಚರ್ಚೆ ನಡೆಸಿದ್ದರು. ರಾಜ್ಯ ಸರ್ಕಾರ ಈ ಪ್ರಕರಣವನ್ನು ಸಿಐಡಿ ಅಥವಾ ವಿಶೇಷ ತನಿಖಾ ತಂಡಕ್ಕೆ ನೀಡಲು ಮುಂದಾಗಿತ್ತು. ಆದರೆ ಅಮಿತ್ ಶಾ ಸೂಚನೆಯಂತೆ ಯಡಿಯೂರಪ್ಪ ಈಗ ಈ ಪ್ರಕರಣವನ್ನು ಸಿಬಿಐ ವಹಿಸಲು ಆದೇಶಿಸಿದ್ದಾರೆ ಎನ್ನಲಾಗುತ್ತಿದೆ.

 

ಫೋನ್ ಟ್ಯಾಪಿಂಗ್ ವಿಚಾರ ಬಂದಾಗ ಸಿದ್ದರಾಮಯ್ಯನವರೇ ಈ ಬಗ್ಗೆ ತನಿಖೆ ನಡೆಸಬೇಕೆಂದು ಆಗ್ರಹಿಸಿದ್ದರು. ಆದರೆ ಡಿಕೆ ಶಿವಕುಮಾರ್ ಅವರು ಫೋನ್ ಕದ್ದಾಲಿಕೆ ನಡೆದಿಲ್ಲ ಎಂದು ಹೇಳಿ ಕುಮಾರಸ್ವಾಮಿ ಅವರ ಹೇಳಿಕೆಯನ್ನು ಬೆಂಬಲಿಸಿದ್ದರು.

Share This Article
Leave a Comment

Leave a Reply

Your email address will not be published. Required fields are marked *