ಪ್ರವಾಹ ಸಂತ್ರಸ್ತರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣ, ಪ್ರತಿ ಮಂಗಳವಾರ ಕ್ಯಾಬಿನೆಟ್ ಸಭೆ

Public TV
3 Min Read

ಬೆಂಗಳೂರು: ಸಿಎಂ ಬಿಎಸ್ ಯಡಿಯೂರಪ್ಪ ಅವರ ನೇತೃತ್ವದಲ್ಲಿ ನಡೆದ ಇಂದಿನ ಕ್ಯಾಬಿನೆಟ್ ಸಭೆಯಲ್ಲಿ ಪ್ರವಾಹದಿಂದ ಮನೆ ಕಳೆದುಕೊಂಡ ಸಂತ್ರಸ್ತರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಹೊಸ ಮನೆ ನಿರ್ಮಾಣ ಮಾಡಿಕೊಡಲು ನಿರ್ಧರಿಸಲಾಗಿದೆ.

ಕರ್ನಾಟಕದಲ್ಲಿ ಉಂಟಾದ ಪ್ರವಾಹ ಪರಿಹಾರ ಸೇರಿದಂತೆ ರಾಜ್ಯದ ಅಭಿವೃದ್ಧಿ ಕಾರ್ಯಗಳಿಗೆ ಚುರುಕು ಮುಟ್ಟಿಸುವ ಹಿನ್ನೆಲೆಯಲ್ಲಿ ಇಂದಿನ ಸಂಪುಟ ಸಭೆ ಬಹುಮುಖ್ಯವಾಗಿತ್ತು. ಈ ಸಭೆಯಲ್ಲಿ ಸಚಿವರಾದ ಶ್ರೀರಾಮುಲು, ಜೆಸಿ ಮಾಧುಸ್ವಾಮಿ, ಗೋವಿಂದ ಕಾರಜೋಳ, ಸಿಸಿ ಪಾಟೀಲ್, ವಿ ಸೋಮಣ್ಣ, ನಾಗೇಶ್, ಈಶ್ವರಪ್ಪ ಸೇರಿದಂತೆ ಹಲವು ನಾಯಕರು ಭಾಗವಹಿಸಿದ್ದರು. ಸಭೆಯಲ್ಲಿ ಪ್ರವಾಹದಿಂದ ಸಮಸ್ಯೆ ಎದುರಿಸಿದ್ದ ರಾಜ್ಯದ ಜನರಿಗೆ ಪರಿಹಾರ, ಪುನರ್ವಸತಿ ನೀಡುವ ಕಲ್ಪಿಸುವ ಬಗ್ಗೆ ಪ್ರಮುಖ ಚರ್ಚೆ ನಡೆಸಲಾಯಿತು.

ಕ್ಯಾಬಿನೆಟ್ ನಿರ್ಣಯಗಳು:
ಪ್ರವಾಹದಿಂದ ಮನೆ ಕಳೆದುಕೊಂಡವರಿಗೆ 5 ಲಕ್ಷ ರೂ. ವೆಚ್ಚದಲ್ಲಿ ಮನೆ ನಿರ್ಮಾಣಕ್ಕೆ ಒಪ್ಪಿಗೆ ನೀಡಿತು. ಅಲ್ಲದೇ ನೆರೆ ಪೀಡಿತ ಪ್ರದೇಶಗಳ ಕುಟುಂಬಗಳಿಗೆ ತಲಾ 10 ಸಾವಿರ ರೂ. ನೀಡುವ ನಿರ್ಧಾರದಂತೆ ಈಗಾಗಲೇ 1.35 ಲಕ್ಷ ಜನರಿಗೆ ಹಣ ಬಿಡುಗಡೆ ಮಾಡಲಾಯಿತು. ಈ ವೇಳೆ ಪರಿಹಾರ ಪಡೆಯಲು ಮತ್ತೆ ನೋಂದಣಿ ಮಾಡಿಕೊಳ್ಳಲು ಅವಕಾಶ ನೀಡಿ ಅವರಿಗೂ 10 ಸಾವಿರ ರೂ.ಗಳನ್ನು ನೀಡಲು ಒಪ್ಪಿಗೆ ನೀಡಿದರು.

ಕಳೆದ ಕ್ಯಾಬಿನೆಟ್ ಸಭೆಯ ವೇಳೆ ಸಂಪುಟ ವಿಸ್ತರಣೆ ಹಿನ್ನೆಲ್ಲಿ ಉಳಿದುಕೊಂಡಿದ್ದ ಸನ್ನಡತೆಯ ಆಧಾರದಲ್ಲಿ ಕೈದಿಗಳನ್ನು ಬಿಡುಗಡೆ ಮಾಡುವ ಪಟ್ಟಿಗೆ ಇಂದಿನ ಸಭೆಯಲ್ಲಿ ಒಪ್ಪಿಗೆ ನೀಡಲಾಯಿತು. ಸ್ವತಂತ್ರ್ಯ ದಿನದ ಹಿನ್ನೆಲೆಯಲ್ಲಿ ಈ ಬಾರಿ ಬಿಡುಗಡೆಯಾಗಬೇಕಿದ್ದ ಒಬ್ಬ ಮಹಿಳಾ ಕೈದಿ ಸೇರಿ 140 ಜನರ ಬಿಡುಗಡೆಗೆ ರಾಜ್ಯಪಾಲರಿಗೆ ಶಿಫಾರಸ್ಸು ಮಾಡಲು ತೀರ್ಮಾನಿಸಲಾಯಿತು.

ಹೊಸ ಪಿಂಚಣಿ ವ್ಯವಸ್ಥೆ ಅಡಿ ಪಿಂಚಣಿಯನ್ನು ರಾಜ್ಯದ ಪಾಲು ನೀಡುತ್ತ ಮೊತ್ತವನ್ನು ಶೇ.10 ರಿಂದ ಶೇ.14ಕ್ಕೆ ಹೆಚ್ಚಳ ಮಾಡಲು ನಿರ್ಧರಿಸಲಾಗಿದೆ. 2019 ಏಪ್ರಿಲ್ ನಿಂದ ಹೊಸ ಪಿಂಚಣಿ ವ್ಯವಸ್ಥೆ ಅನ್ವಯವಾಗುವಂತೆ ನಿರ್ಣಯ ಕೈಗೊಳ್ಳಲಾಗಿದೆ.

ಮುಂದಿನ ಅವಧಿಯಲ್ಲಿ ಅಭಿವೃದ್ಧಿಯ ವೇಗವನ್ನು ಹೆಚ್ಚಿಸುವ ದೃಷ್ಟಿಯಿಂದ ಪ್ರತಿ ಮಂಗಳವಾರ ಕ್ಯಾಬಿನೆಟ್ ಸಭೆ ನಡೆಸಲು ತೀರ್ಮಾನ ಮಾಡಲಾಯಿತು.

ಬರ ಪ್ರದೇಶಗಳಲ್ಲಿ ಬೋರ್‍ವೆಲ್ ಹಾಗೂ ಇನ್ನಿತರ ಕಾಮಗಾರಿಗಳಿಗೆ ಟೆಂಡರ್ ಪ್ರಕ್ರಿಯೆ ಮುಕ್ತಿಗೆ ಕ್ಯಾಬಿನೆಟ್ ನೀಡಿತು. 5 ಲಕ್ಷ ರೂ.ವರೆಗಿನ ಕಾಮಗಾರಿಗಳಿಗೆ ಟೆಂಡರ್ ಇಲ್ಲದೆಯೇ ಕಾಮಗಾರಿ ಆರಂಭಿಸುವ ಪ್ರಮುಖ ನಿರ್ಧಾರವನ್ನು ಕೈಗೊಳ್ಳಲಾಗಿದೆ.

ಸಂಪುಟ ಉಪಸಮಿತಿ: ಅಂತರ್ ರಾಜ್ಯ ಜಲ ವಿವಾದಗಳ ನಿರ್ವಹಣೆ ಸೇರಿದಂತೆ ಕೇಂದ್ರದ ಜೊತೆ ಜಲ ವಿಚಾರವಾಗಿ ಸಮನ್ವಯ ಸಾಧಿಸಲು ಸಚಿವ ಸಂಪುಟ ಉಪ ಸಮಿತಿ ನೇಮಕ ಮಾಡಲಾಯಿತು. ಸಿಎಂ ಬಿಎಸ್‍ವೈ ನೇತೃತ್ವದಲ್ಲಿ ರಚನೆಯಾದ ಉಪ ಸಮಿತಿಯಲ್ಲಿ ಬಸವರಾಜ ಬೊಮ್ಮಾಯಿ, ಅಶೋಕ್, ಗೋವಿಂದ ಕಾರಜೋಳ ಸಮಿತಿ ಸದಸ್ಯರಾಗಿದ್ದಾರೆ.

ಕೇಂದ್ರಕ್ಕೆ ನಿಯೋಗ: ರಾಜ್ಯದಲ್ಲಿ ಭೂವಿಜ್ಞಾನಿಗಳ ಕೊರತೆ ಹಿನ್ನೆಲೆ ನಿವೃತ್ತ ಭೂ ವಿಜ್ಞಾನಿಗಳನ್ನ ಗುತ್ತಿಗೆ ಆಧಾರದಲ್ಲಿ ಮುಂದುವರಿಸಲು ತೀರ್ಮಾನ ಮಾಡಲಾಗಿದೆ. ನೆರೆಯಿಂದ ಹಾನಿಯಾದ ಕಬ್ಬು, ಕಾಫಿ, ಅಡಿಕೆ ಸೇರಿದಂತೆ ಇನ್ನಿತರ ಬೆಳೆಗಳಿಗೆ ವಿಮಾ ಸೌಲಭ್ಯ ಸೇರಿದಂತೆ ವಿಶೇಷ ಪ್ಯಾಕೇಜ್ ನೀಡಲು ಪ್ರಧಾನಿ ಮಂತ್ರಿಗಳ ಬಳಿ ಜನಪ್ರತಿನಿಧಿಗಳ ನಿಯೋಗ ತೆಗೆದುಕೊಂಡು ಹೋಗಲು ತೀರ್ಮಾನ ಮಾಡಲಾಗಿದೆ.

ಸಂಪುಟ ವಿಸ್ತರಣೆಯಾದ ಬಳಿಕ ನಡೆದ ಮೊದಲ ಸಭೆಗೆ ಆರ್ ಅಶೋಕ್ ತಡವಾಗಿ ಆಗಮಿಸಿದರು. ಸಂಪುಟ ವಿಸ್ತರಣೆ ಆದರೂ ಖಾತೆ ಹಂಚಿಕೆಯಾಗದ(ರಾತ್ರಿ 8 ಗಂಟೆಯ ವೇಳೆಗೆ ಖಾತೆ ಹಂಚಿಕೆ ಅಧಿಕೃತವಾಗಿ ಪ್ರಕಟಗೊಂಡಿತ್ತು) ಹಿನ್ನೆಲೆಯಲ್ಲಿ ನಾಯಕರ ಮುಖದಲ್ಲಿ ಅಸಮಾಧಾನ ಕಂಡು ಬಂತು. ಸಭೆ ಬಳಿಕ ಮಾತನಾಡಿದ ಸಚಿವ ಮಾಧುಸ್ವಾಮಿ, ನೆರೆ ಹಾವಳಿ ಹಿನ್ನೆಲೆ ಸಚಿವರು ಪ್ರವಾಸ ಮಾಡಿದ್ದೆವು. ಇಂದಿನ ಸಭೆಯಲ್ಲಿ ಪ್ರವಾಸ ಮಾಡಿದ್ದ ಸಂದರ್ಭದಲ್ಲಿ ಪಡೆದ ಮಾಹಿತಿಯೊಂದಿಗೆ ವಿಶೇಷ ಪ್ಯಾಕೇಜ್ ನೀಡುವ ಬಗ್ಗೆ ಚರ್ಚೆ ನಡೆಸಲಾಯಿತು. ಹೊಸ ಪಿಂಚಣಿ ಅನ್ವಯ ಶೇ.14 ರಷ್ಟು ನೀಡಲು ಕ್ಯಾಬಿನೆಟ್ ಒಪ್ಪಿಗೆ ನೀಡಿದ್ದು, ಇದರಿಂದ ರಾಜ್ಯ ಸರ್ಕಾರಕ್ಕೆ 250 ಕೋಟಿ ರೂ. ಹೊಣೆಯಾಗುತ್ತದೆ ಎಂದರು.

Share This Article
Leave a Comment

Leave a Reply

Your email address will not be published. Required fields are marked *