ದಾವೋಸ್‍ಗೆ ತೆರಳಿದ ಸಿಎಂ ಬಸವರಾಜ ಬೊಮ್ಮಾಯಿ

Public TV
2 Min Read

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿಯವರು ತಮ್ಮ ಪತ್ನಿ ಹಾಗೂ ಸಚಿವ ಮುರುಗೇಶ್ ನಿರಾಣಿ ಸೇರಿದಂತೆ 8 ಮಂದಿ ಜೊತೆ ಇಂದು ದಾವೋಸ್‍ಗೆ ತೆರಳಿದ್ದಾರೆ.

ಹೌದು. ದಾವೋಸ್ ನಲ್ಲಿ ವಿಶ್ವ ಆರ್ಥಿಕ ಶೃಂಗ ಸಭೆ ಇದೆ. ಈ ಶೃಂಗಸಭೆಯಲ್ಲಿ ಸಿಎಂ ಅವರು ಭಾರತವನ್ನು ಪ್ರತಿನಿಧಿಸಲಿದ್ದಾರೆ. ಹೀಗಾಗಿ ಸಿಎಂ ಬೊಮ್ಮಾಯಿ ದಾವೋಸ್ ಪ್ರವಾಸಕ್ಕೆ ತೆರಳಿದ್ದಾರೆ. ಈ ಮೂಲಕ ಬೊಮ್ಮಾಯಿ ಅವರು ಎರಡನೇ ಬಾರಿಗೆ ದಾವೋಸ್ ಶೃಂಗ ಸಭೆಯಲ್ಲಿ ಭಾಗವಹಿಸುತ್ತಿದ್ದಾರೆ. ಈ ಹಿಂದೆ ಜಲಸಂಪನ್ಮೂಲ ಖಾತೆ ಸಚಿವರಾಗಿದ್ದಾಗ ದಾವೋಸ್‍ಗೆ ತೆರಳಿದ್ದರು. ಸಿಎಂ ಆದ ಬಳಿಕ ಇದೀಗ ಎರಡನೇ ಬಾರಿಗೆ ದಾವೋಸ್ ಗೆ ಪ್ರಯಾಣ ಮಾಡಿದ್ದಾರೆ.

ಈಗಾಗಲೇ ಬೆಂಗಳೂರಿನಿಂದ ವಿಮಾನದ ಮೂಲಕ ಪ್ರಯಾಣ ಬೆಳೆಸಿರುವ ಸಿಎಂ, ಇಂದು ಮಧ್ಯಾಹ್ನ 12.45 ಕ್ಕೆ ದುಬೈಗೆ ತಲುಪಲಿದ್ದಾರೆ. ದುಬೈನಿಂದ ಮಧ್ಯಾಹ್ನ 3.35 ಕ್ಕೆ ಸ್ವಿಟ್ಜರ್ಲೆಂಡ್ ನ ಜ್ಯೂರಿಚ್ ಗೆ ಹೋಗಿ ರಾತ್ರಿ 8.20 ರಿಂದ ಜ್ಯೂರಿಚ್ ನಿಂದ ದಾವೋಸ್ ರಸ್ತೆ ಮಾರ್ಗದ ಮೂಲಕ ಪ್ರಯಾಣ ಮಾಡಲಿದ್ದಾರೆ. ರಾತ್ರಿ 12ಕ್ಕೆ ಸಿಎಂ ನೇತೃತ್ವದ ನಿಯೋಗ ದಾವೋಸ್ ತಲುಪಲಿದೆ. ಇದನ್ನೂ ಓದಿ: ತುಂಗಭದ್ರಾ ಡ್ಯಾಂನ ಹಿನ್ನೀರಿನಲ್ಲಿ ಬೆಳೆದ ಬೆಳೆ ನೀರು ಪಾಲು – ರೈತ ಕಣ್ಣೀರು

ದಾವೋಸ್‍ಗೆ ತೆರಳುವ ಮುನ್ನ ಮಾಧ್ಯಮಗಳ ಜೊತೆ ಮಾತನಾಡಿದ ಅವರು, ನಾವು ಇವತ್ತು ದಾವೋಸ್ ಗೆ ಹೋಗುತ್ತಿದ್ದೇವೆ. ನಾಳೆಯಿಂದ ಸೆಷನ್ ಆರಂಭವಾಗಲಿದೆ. ನಾಳೆ, ನಾಡಿದ್ದು ಎರಡು ಸೆಷನ್ ಗಳಲ್ಲಿ ಭಾಗವಹಿಸುತ್ತೇವೆ. ವಿಶ್ವದ ಪ್ರಖ್ಯಾತ ಕೈಗಾರಿಕೋದ್ಯಮದ ಉದ್ಯಮಿಗಳ ಭೇಟಿ ಮಾಡುತ್ತೇವೆ. ಅಲ್ಲಿನ ಕಾರ್ಯಕ್ರಮಗಳನ್ನು ಮಾಧ್ಯಮಗಳಿಗೆ ನಿರಂತರವಾಗಿ ತಲುಪಿಸುತ್ತೇವೆ. ಕೆಲವು ರಾಷ್ಟ್ರೀಯ ಮಾಧ್ಯಮಗಳೂ ಬಂದಿರುತ್ತವೆ ಎಂದರು.

ಭಾರತಕ್ಕೆ ಎಫ್‍ಡಿಐ ಬಹಳಷ್ಟು ಬಂದಿದೆ. ಅದರಲ್ಲಿ ಕರ್ನಾಟಕ ನಂಬರ್ ಒನ್ ಸ್ಥಾನದಲ್ಲಿದೆ. ಕಳೆದ ನಾಲ್ಕು ಆರ್ಥಿಕ ತ್ರೈಮಾಸಿಕಗಳಲ್ಲಿ ರಾಜ್ಯಕ್ಕೆ ಹೆಚ್ಚು ಎಫ್‍ಡಿಐ ಹರಿದು ಬಂದಿದೆ. ಹೀಗಾಗಿ ನಮಗೆ ಉತ್ಸಾಹ ಇದೆ. ಇನ್ನೂ ಹಲವು ಉದ್ಯಮಿಗಳು ರಾಜ್ಯದಲ್ಲಿ ಬಂಡವಾಳ ಹೂಡಲು ಮುಂದೆ ಬಂದಿದ್ದಾರೆ. ನವೆಂಬರ್ ನಲ್ಲಿ ಜಾಗತಿಕ ಬಂಡವಾಳ ಹೂಡಿಕೆ ಸಮಾವೇಶ ಇದೆ. ಈ ಬಾರಿ ಕೈಗಾರಿಕೆಗಳ ಸ್ಥಾಪನೆಗೆ ಎಲ್ಲ ರೀತಿಯ ಕ್ರಮಗಳನ್ನು ಕೈಗೊಳ್ತೇವೆ. ಅನೇಕ ಒಡಂಬಡಿಕೆಗಳಿಗೆ ಒಪ್ಪಂದ ಮಾಡಿಕೊಳ್ಳುತ್ತೇವೆ ಎಂದು ಹೇಳಿದರು.

PETROL

ಇದೇ ವೇಳೆ ಕೇಂದ್ರದಿಂದ ಪೆಟ್ರೋಲ್, ಡೀಸೆಲ್ ಇಳಿಕೆ ವಿಚಾರಕ್ಕೆ ಸಂಬಂಧಿಸಿದಂತೆ ರಾಜ್ಯದಲ್ಲೂ ಇಳಿಕೆ ಮಾಡ್ತೀರಾ ಎಂಬ ಪ್ರಶ್ನೆಗೆ ಉತ್ತರಿಸಿದ ಸಿಎಂ, ಕೇಂದ್ರದಿಂದ ನಿನ್ನೆ ರಾತ್ರಿ ದರ ಇಳಿಕೆ ಆಗಿದೆ. ರಾಜ್ಯದಲ್ಲೂ ಈ ಬಗ್ಗೆ ಪರಿಶೀಲನೆ ಮಾಡುತ್ತೇವೆ ಎಂದು ತಿಳಿಸಿದರು.

ಸಿಎಂ ಜೊತೆ ಧರ್ಮಪತ್ನಿ ಚೆನ್ನಮ್ಮ, ಮುರುಗೇಶ್ ನಿರಾಣಿ ಮತ್ತು ನಿರಾಣಿ ಪತ್ನಿ, ನಿರಾಣಿ ಪಿಎ ಶರಣಬಸಪ್ಪ, ಸಿಎಂ ಪ್ರಧಾನ ಕಾರ್ಯದರ್ಶಿ ಮಂಜುನಾಥ್ ಪ್ರಸಾದ್ ಮತ್ತು ಅವರ ಪಿಎ, ಸಿಎಂ ಒಎಸ್‍ಡಿ ರೋಹನ್ ಬಿರಾದಾರ್ ಹೀಗೆ ಒಟ್ಟು ಮಂದಿ ದಾವೋಸ್‍ಗೆ ಪ್ರಯಾಣ ಬೆಳೆಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *