ಯಾರಿಗೆ ಅಂಟು ರೋಗ ಇದೆ ಎಂದು ಜನ ತೀರ್ಮಾನ ಮಾಡ್ತಾರೆ: ಸಿದ್ದರಾಮಯ್ಯಗೆ ಬೊಮ್ಮಾಯಿ ತಿರುಗೇಟು

Public TV
3 Min Read

ಹಾಸನ: ಸಿದ್ದರಾಮಯ್ಯ ಅವರ ಸರ್ಕಾರವಿದ್ದಾಗ ಆಗಿರುವ ಹಗರಣಗಳ ದಾಖಲೆ ಬಿಡುಗಡೆ ಮಾಡುತ್ತಿದ್ದು, ಸತ್ಯ ಏನೆಂಬುದು ತಿಳಿಯಲಿದೆ. ಆಗ ಯಾರಿಗೆ ಅಂಟು ರೋಗ ಇದೆ ಎಂದು ಜನ ತೀರ್ಮಾನ ಮಾಡ್ತಾರೆ ಎಂದು ಸಿದ್ದರಾಮಯ್ಯ (Siddaramaiah) ಹೇಳಿಕೆಗೆ ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ (Basavaraj Bommai) ತಿರುಗೇಟು ನೀಡಿದರು.

ಹಾಸನ (Hassan) ಜಿಲ್ಲೆಯ ಬೇಲೂರು ತಾಲೂಕಿನ ಮಾಯಗೊಂಡನಹಳ್ಳಿ ಹೆಲಿಪ್ಯಾಡ್‍ನಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸಿದ್ದರಾಮಯ್ಯ ಅವರು ಸತ್ಯವನ್ನು ಎದುರಿಸುವ ಕೆಲಸವನ್ನು ಮಾಡಲಿ. ಅದು ಬಿಟ್ಟು ನಮ್ಮ ಕಾಲದಲ್ಲಿ ಈ ರೀತಿ ಆಗಿಲ್ಲ, ನಮ್ಮ ಕಾಲದಲ್ಲಿ ಆಗಿದ್ರೆ, ಈ ರೀತಿ ಮಾತನಾಡುವುದು ಜವಾಬ್ದಾರಿ ಕೆಲಸ ಅಲ್ಲ. ನಾವೇನು ಹೇಳಿದ್ದೇವು ಅದಕ್ಕೆ ದಾಖಲೆಯನ್ನು ಕೊಡುತ್ತಿದ್ದೇವೆ. ಅವರು ಅದನ್ನು ಎದುರಿಸಲಿ ಅಷ್ಟೇ ಎಂದು ಸವಾಲು ಹಾಕಿದರು.

ಮಂಗಳೂರಿನಲ್ಲಿ (Mangaluru) ನಡೆದ ಕುಕ್ಕರ್ ಬಾಂಬ್ ಬ್ಲಾಸ್ಟ್ ಬಗ್ಗೆ ಪ್ರತಿಕ್ರಿಯಿಸಿದ ಅವರು, ಕೆಲವು ಸ್ಲೀಪರ್ ಸೆಲ್‍ಗಳು ಕರ್ನಾಟಕದಲ್ಲಿ ಹಿಂದೆ ಇದ್ದ ಸಂದರ್ಭದಲ್ಲಿ ನಾನು ಹೋಂ ಮಿನಿಸ್ಟರ್ ಆಗಿದ್ದೆ. ಸುಮಾರು 18 ಜನ ಸ್ಲೀಪರ್ ಸೆಲ್‍ಗಳನ್ನು ತಿಹಾರ್ ಜೈಲಿಗೆ ಕಳುಹಿಸಿದ್ದೇನೆ. ಪಕ್ಕದ ರಾಜ್ಯ ಮತ್ತು ಅಂತಾರಾಷ್ಟ್ರೀಯ ಗಡಿಯಲ್ಲಿ ಹಲವಾರು ಜನ ಟ್ರೈನಿಂಗ್ ತಗಳೋದು, ಬರೋದು ನಿರಂತರವಾಗಿ ನಡೆಯುತ್ತಿರುವ ಒಂದು ಪ್ರಕ್ರಿಯೆ ಆಗಿದೆ. ವಿಶೇಷವಾಗಿ ನರೇಂದ್ರ ಮೋದಿ ಅವರು ಬಂದ ಮೇಲೆ ಎಲ್ಲೂ ಕೂಡ ಅವಕಾಶ ಕೊಟ್ಟಿಲ್ಲ. ಹಿಂದೆ ನಾವೆಲ್ಲ ನೋಡಿದ್ದೇವೆ, ಬೆಂಗಳೂರು, ಮುಂಬೈನಲ್ಲಿ ಬ್ಲಾಸ್ಟ್ ಆಗಿತ್ತು ಅನ್ನೋದನ್ನ, ಹೀಗೆ ಆಗಿರುತ್ತಿರುವುದನ್ನು ನಿಲ್ಲಿಸಿದ್ದೇವೆ. ಆದರೂ ಕೂಡ ಕೆಲವು ಕಡೆ ಇದೆ ಎಂದು ಹೇಳಿದರು.

ವಿಶೇಷವಾಗಿ ಕರಾವಳಿ ಪ್ರದೇಶದಲ್ಲಿ ಅವರು ಆ್ಯಕ್ಟಿವ್ ಆಗಿರುವುದನ್ನು ಗಮನಿಸಿ ಶಿರಸಿ, ಭಟ್ಕಳ, ಮಂಗಳೂರು ಭಾಗದಿಂದ ನಾವು ಸುಮಾರು ಜನರನ್ನು ಹಿಡಿದು ಸ್ಲೀಪರ್ ಸೆಲ್‍ಗಳನ್ನು ತಿಹಾರ್ ಜೈಲಿಗೆ ಕಳುಹಿಸಿದ್ದೇವೆ. ನಾನು ಹಿಂದೆ ಗೃಹಸಚಿವ ಆಗಿದ್ದಾಗ ಎಲ್ಲಾ ದಕ್ಷಿಣ ಭಾರತದ ಡಿಜಿಗಳಿಗೆ ಕರೆ ಕೊಟ್ಟಿದ್ದೆ. ಬಹಳಷ್ಟು ಜನ ಕೃತ್ಯವನ್ನು ಮಾಡಿ ಬಾರ್ಡರ್ ಕ್ರಾಸ್ ಮಾಡಿ ಅಲ್ಲಿಗೆ ಹೋಗ್ತಿದ್ದಾರೆ, ಅಲ್ಲಿಯವರು ಇಲ್ಲಿ ಬರ್ತಿದ್ದಾರೆ. ಬಾರ್ಡರ್‌ಗಳು ಬಹಳ ಪ್ರೆಜರ್ ಇರೋದ್ರಿಂದ ಕೇರಳದಲ್ಲಿ ಮಾಡಿ ಇಲ್ಲಿ ಬರ್ತಾರೆ, ಇಲ್ಲಿ ಮಾಡಿ ಅಲ್ಲಿಗೆ ಹೋಗ್ತಾರೆ ಎಂದರು.

ಈಗ ದಕ್ಷಿಣದ ಭಾರತದ ಎಲ್ಲಾ ರಾಜ್ಯಗಳು ಒಗ್ಗಟ್ಟಾಗಿ ಒಂದು ಗುಪ್ತಚರ ಮಾಹಿತಿ ಶೇರ್ ಮಾಡಬೇಕು. ಅಲ್ಲಿರುವಂತಹ ಆ್ಯಂಟಿ ಟೆರರಿಸ್ಟ್ ಆ್ಯಕ್ಟಿವಿಟಿಸ್‍ಗಳನ್ನು ಶೇರ್ ಮಾಡಿ, ಪ್ರಯತ್ನ ಪಟ್ಟರೆ ಬಹಳಷ್ಟು ನಿಯಂತ್ರಣ ಮಾಡಲು ಸಾಧ್ಯ. ಇದರ ಬಗ್ಗೆ ಮುಂದಿನ ದಿನಗಳಲ್ಲಿ ಬೇರೆ ರಾಜ್ಯದ ಮುಖ್ಯಮಂತ್ರಿಗಳಿಗೆ ಪತ್ರವನ್ನು ಬರೆಯಲಿದ್ದೇನೆ ಎಂದು ತಿಳಿಸಿದರು. ಇದನ್ನೂ ಓದಿ: ಹಿಂದೂಗಳನ್ನ ನಾಶ ಮಾಡುವ ಪ್ರಯತ್ನ ನಡೆಯುತ್ತಿದೆ: ಕಲ್ಲಡ್ಕ ಪ್ರಭಾಕರ್

ಮತ್ತೊಮ್ಮೆ ಗುಪ್ತಚರ ಇಲಾಖೆ ವೈಫಲ್ಯ ಎಂಬ ಸಿದ್ದರಾಮಯ್ಯ ಹೇಳಿಕೆಗೆ ತಿರುಗೇಟು ನೀಡಿದ ಅವರು, ಗುಪ್ತಚರ ವೈಫಲ್ಯ ಎಂಬ ಪ್ರಶ್ನೆ ಇಲ್ಲ ಇಲ್ಲಿ. ಎಲ್ಲಾ ಕಾಲದಲ್ಲೂ ಈ ಘಟನೆಗಳು ನಡೆದಿವೆ. ಅವರು ಇಲ್ಲಿನ ಸ್ಥಳೀಯರಿಗಿಂತ, ಅಂತಾರಾಷ್ಟ್ರೀಯ ಮಟ್ಟದಲ್ಲಿ ಮೋಡಿವೇಟೆಡ್ ಆಗಿರುವಂತಹವರು. ಇಲ್ಲಿಗೆ ಬಹಳಷ್ಟು ಬಾಂಗ್ಲಾದೇಶಿಗರು ಬಂದಿದ್ದಾರೆ. ಅವರನ್ನು ನಾವು ಗುರುತಿಸಿ ಸಾಕಷ್ಟು ಜನರನ್ನು ಬಾರ್ಡರ್‍ಗೆ ಬಿಟ್ಟು ಬಂದಿದ್ದೀವೆ. ಆದರೂ ಈ ರೀತಿ ಹತ್ತು ಹಲವಾರು ಕಾರಣಗಳಿವೆ. ಅದು ಸಿದ್ದರಾಮಯ್ಯ ಅವರಿಗೆ ಗೊತ್ತಿದೆ, ರಾಜಕಾರಣಕ್ಕಾಗಿ ಈ ರೀತಿ ಹೇಳಿಕೆ ನೀಡುತ್ತಿದ್ದಾರೆ ಎಂದು ಕಿಡಿಕಾರಿದರು.

ವೋಟರ್ ಐಡಿ ಬಗ್ಗೆ ರಾಜ್ಯ ಚುನಾವಣಾ ಆಯೋಗಕ್ಕೆ ಕಾಂಗ್ರೆಸ್ ದೂರು ನೀಡಿರುವ ಕುರಿತು ಮಾತನಾಡಿದ ಅವರು, ಕಾಂಗ್ರೆಸ್‍ನವರು ದೂರು ಕೊಡಲಿ, ಚುನಾವಣಾ ಆಯೋಗ ನೋಡಿಕೊಳ್ಳುತ್ತದೆ ಎಂದರು. ಇದನ್ನೂ ಓದಿ: ಅಭಿವೃದ್ಧಿ ಕೆಲಸ ಮಾಡಿದ್ದರೆ ಟಿಫಿನ್ ಬಾಕ್ಸ್ ಹಂಚುವ ಅವಶ್ಯಕತೆ ಇರುತ್ತಿರಲಿಲ್ಲ: ಲಕ್ಷ್ಮೀ ಹೆಬ್ಬಾಳ್ಕರ್‌ಗೆ ಸಂಜಯ್ ಪಾಟೀಲ್ ಟಾಂಗ್

Live Tv
[brid partner=56869869 player=32851 video=960834 autoplay=true]

Share This Article
Leave a Comment

Leave a Reply

Your email address will not be published. Required fields are marked *