ಓಮಿಕ್ರಾನ್ ಜೊತೆಗೆ ಡೆಲ್ಟಾ ವೈರಸ್ ಬಗ್ಗೆ ಎಚ್ಚರವಹಿಸಿ: ಸಿಎಂ ಸಭೆಯಲ್ಲಿ ತಜ್ಞರ ಸಲಹೆ

Public TV
3 Min Read

ಬೆಂಗಳೂರು: ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ಅಧ್ಯಕ್ಷತೆಯಲ್ಲಿ ಓಮಿಕ್ರಾನ್ ರೂಪಾಂತರಿ ವೈರಸ್ ರಾಜ್ಯದಲ್ಲಿ ಪತ್ತೆಯಾಗಿರುವ ಹಿನ್ನೆಲೆಯಲ್ಲಿ ಕೈಗೊಳ್ಳಬೇಕಾದ ಕ್ರಮಗಳ ಕುರಿತು ಇಂದು ಮಹತ್ವದ ಸಭೆ ನಡೆಸಲಾಯಿತು. ಪರಿಣತರು ಮತ್ತು ಹಿರಿಯ ಅಧಿಕಾರಿಗಳ ಸಭೆಯಲ್ಲಿ ಒಮಿಕ್ರಾನ್ ಜೊತೆಗೆ ಡೆಲ್ಟಾ ವೈರಸ್ ಸೋಂಕಿನ ಬಗ್ಗೆ ಎಚ್ಚರವಹಿಸಿ ಎಂದು ತಜ್ಞರು ಸಲಹೆ ನೀಡಿದರು.

ಸಭೆಯ ಮುಖ್ಯಾಂಶಗಳು:
ಓಮಿಕ್ರಾನ್ ರೂಪಾಂತರಿ ತಳಿಯ ವೈರಸ್ ನಿಂದ ಎರಡು ಕೋವಿಡ್ ಪ್ರಕರಣಗಳು ರಾಜ್ಯದಲ್ಲಿ ಪತ್ತೆಯಾಗಿದೆ. ಇಡೀ ವಿಶ್ವದಲ್ಲಿ ಸುಮಾರು 400 ಪ್ರಕರಣಗಳು ಈ ವರೆಗೆ ವರದಿಯಾಗಿದೆ. ಅಧಿಕೃತವಾಗಿ ಈ ಪ್ರಕರಣಗಳ ಕುರಿತು ಯಾವುದೇ ಅಧ್ಯಯನ ವರದಿ ಬಂದಿಲ್ಲ. ಆದರೆ ಅನೌಪಚಾರಿಕವಾಗಿ ದೊರೆತ ಮಾಹಿತಿಯ ಪ್ರಕಾರ ಈ ವೈರಸ್ ಸೋಂಕು ಹೆಚ್ಚು ತೀವ್ರ ಪರಿಣಾಮ ಬೀರಿಲ್ಲ. ಸೋಂಕಿತರಿಗೆ mild symptoms ಕಂಡು ಬಂದಿದೆ. ಸಾವಿನ ಪ್ರಕರಣಗಳು ವರದಿಯಾಗಿಲ್ಲ. ಈಗ ವರದಿಯಾಗಿರುವ ಎರಡೂ ಪ್ರಕರಣಗಳ ಪರೀಕ್ಷಾ ವರದಿಯನ್ನು ವಿಶ್ಲೇಷಿಸಿ ಸಲಹೆ ನೀಡುವಂತೆ ತಾಂತ್ರಿಕ ಸಲಹಾ ಸಮಿತಿ ಸದಸ್ಯರಿಗೆ ಬೊಮ್ಮಾಯಿ ತಿಳಿಸಿದರು. ಇದನ್ನೂ ಓದಿ: ಪೋಷಕರು 2 ಡೋಸ್ ಲಸಿಕೆ ಪಡೆಯದಿದ್ದರೆ ಮಕ್ಕಳು ಶಾಲೆಗೆ ಬರುವಂತಿಲ್ಲ: ಅಶೋಕ್

ಭಾರತ ಸರ್ಕಾರಕ್ಕೆ ಪತ್ರ ಬರೆದು, ಎನ್‍ಸಿಬಿಎಸ್ ಪ್ರಯೋಗಾಲಯದ ವಿವರವಾದ ವರದಿ ಒದಗಿಸುವಂತೆ ಮನವಿ ಮಾಡಲಾಗುವುದು. ಇದರೊಂದಿಗೆ ಕಟ್ಟುನಿಟ್ಟಿನ ಮುನ್ನೆಚ್ಚರಿಕೆ ಕ್ರಮಗಳನ್ನು ವಹಿಸುವಂತೆ ಅಧಿಕಾರಿಗಳಿಗೆ ಸೂಚಿಸಲಾಗಿದೆ. ವಿಮಾನ ನಿಲ್ದಾಣದಲ್ಲಿ ಅಂತರರಾಷ್ಟ್ರೀಯ ಪ್ರಯಾಣಿಕರಿಗೆ ಪರೀಕ್ಷೆ ನಡೆಸಿ, ನೆಗೆಟಿವ್ ವರದಿ ಬಂದ ನಂತರವೇ ಹೊರಗೆ ಕಳುಹಿಸಲಾಗುವುದು. ಪ್ರಯಾಣಿಕರ ಅನುಕೂಲಕ್ಕಾಗಿ ಪರೀಕ್ಷಾ ಯಂತ್ರಗಳನ್ನು ಹೆಚ್ಚುವರಿಯಾಗಿ ಅಳವಡಿಸಲಾಗುತ್ತಿದೆ. ಏರ್‌ಲೈನ್ ಸಂಸ್ಥೆಗಳೊಂದಿಗೆ ಮಾತುಕತೆ ನಡೆಸಿ, ಪ್ರಯಾಣಿಕರಿಗೆ ಅರಿವು ಮೂಡಿಸುವಂತೆ ಸೂಚಿಸಲಾಗಿದೆ. ಓಮಿಕ್ರಾನ್ ಜೊತೆಗೆ ಈಗಾಗಲೇ ಕಂಡು ಬಂದಿರುವ ಡೆಲ್ಟಾ ವೈರಸ್ ಸೋಂಕಿನ ಕುರಿತು ಸಹ ಮುನ್ನೆಚ್ಚರಿಕೆ ವಹಿಸುವಂತೆ ಸೂಚಿಸಲಾಗಿದ್ದು, ಸಿನೆಮಾ, ಮಾಲ್ ಗಳಿಗೆ ಭೇಟಿ ನೀಡುವವರಿಗೆ, ಶಾಲೆಗೆ ಹಾಜರಾಗುವ ಮಕ್ಕಳ ಪೋಷಕರಿಗೆ ಲಸಿಕೆ ಪಡೆಯುವುದು ಕಡ್ಡಾಯ ಮಾಡಲಾಗುವುದು. ಸರ್ಕಾರಿ ನೌಕರರಿಗೆ ಲಸಿಕೆ ಪಡೆಯುವುದು ಕಡ್ಡಾಯಗೊಳಿಸಲಾಗುವುದು ಎಂದು ನಿರ್ಧರಿಸಲಾಗಿದೆ.

ನರ್ಸಿಂಗ್, ಅರೆವೈದ್ಯಕೀಯ ತರಬೇತಿ ಸಂಸ್ಥೆಗಳಲ್ಲಿ ಶೇ.100 ರಷ್ಟು ಪರೀಕ್ಷೆ ನಡೆಸುವುದು. 65 ವರ್ಷ ಮೇಲಿನ ವ್ಯಕ್ತಿಗಳು ಹಾಗೂ ಇತರ ಆರೋಗ್ಯ ಸಮಸ್ಯೆ ಇರುವ ವ್ಯಕ್ತಿಗಳಿಗೆ ಸಹ ಪರೀಕ್ಷೆ ನಡೆಸಲಾಗುವುದು. ಶಾಲೆ, ಕಾಲೇಜುಗಳಲ್ಲಿ ಸಭೆ ಸಮಾರಂಭಗಳನ್ನು ನಡೆಸಲು ಅವಕಾಶವಿಲ್ಲ. ಯಾವುದೇ ಸಮ್ಮೇಳನ, ಮದುವೆ ಮತ್ತಿತರ ಕಾರ್ಯಕ್ರಮ, ಸಭೆ ಸಮಾರಂಭಗಳಲ್ಲಿ ಸೇರುವ ಜನರ ಸಂಖ್ಯೆಯನ್ನು 500ಕ್ಕೆ ಸೀಮಿತಗೊಳಿಸಲಾಗುವುದು. ಶಾಲೆಗಳಲ್ಲಿ ಸದ್ಯಕ್ಕೆ ತರಗತಿಗಳನ್ನು ಯಥಾಸ್ಥಿತಿಯಲ್ಲಿ ಮುಂದುವರೆಸಲಾಗುವುದು. ಅದಾಗ್ಯೂ ಶಾಲೆಗಳಲ್ಲಿ ತೀವ್ರ ನಿಗಾ ವಹಿಸಲು ಸೂಚಿಸಲಾಗಿದೆ. ಪರೀಕ್ಷಾ ಸಾಮರ್ಥ್ಯ ಹಾಗೂ ಪರೀಕ್ಷಾ ಪ್ರಮಾಣದ ಗುರಿ ಹೆಚ್ಚಿಸಲಾಗುವುದು. (increased to 1 lakh) ವಿಶೇಷವಾಗಿ ಆರೋಗ್ಯ ಕಾರ್ಯಕರ್ತರ ಪರೀಕ್ಷೆ ಹೆಚ್ಚಿಸಬೇಕೆಂದು ಸೂಚನೆ ನೀಡಲಾಗಿದೆ. ಇದಕ್ಕೆ ಅಗತ್ಯ ಮಾನವ ಸಂಪನ್ಮೂಲ ಒದಗಿಸಲು ತೀರ್ಮಾನಿಸಲಾಯಿತು. ಇದನ್ನೂ ಓದಿ: ಓಮಿಕ್ರಾನ್ ಆತಂಕ- ಮದುವೆ ಸಮಾರಂಭಗಳಲ್ಲಿ 500 ಮಂದಿಗಷ್ಟೇ ಅವಕಾಶ

ಆರೋಗ್ಯ ಇಲಾಖೆ ಚಿಕಿತ್ಸಾ ಸೌಲಭ್ಯ ಒದಗಿಸಲು ಸಿದ್ಧತೆ ನಡೆಸಿಕೊಳ್ಳಬೇಕು. ಆಕ್ಸಿಜನೇಟೆಡ್ ಬೆಡ್ ಗಳನ್ನು ಸಜ್ಜುಗೊಳಿಸಬೇಕು, ಆಕ್ಸಿಜನ್ ಪ್ಲಾಂಟ್‍ಗಳನ್ನು ಸಜ್ಜುಗೊಳಿಸಬೇಕು ಎಂದು ಸೂಚಿಸಲಾಗಿದೆ. ಆಕ್ಸಿಜನ್ ಲಭ್ಯತೆ, ಸಾಗಾಣಿಕೆ, ಪೂರೈಕೆ ಜಾಲವನ್ನು ಜಾಗೃತಗೊಳಿಸಬೇಕು. ಔಷಧಗಳ ಲಭ್ಯತೆ ಖಾತರಿಪಡಿಸಿಕೊಳ್ಳುವಂತೆ ಸೂಚಿಸಲಾಗಿದೆ. ಸಂಪರ್ಕಿತರ ಪತ್ತೆಯ ಪ್ರಮಾಣ ಹೆಚ್ಚಿಸಲು ಸೂಚಿಸಲಾಗಿದೆ. ರಾಜ್ಯಾದ್ಯಂತ ನಿಯಂತ್ರಣ ಕೊಠಡಿ ಪ್ರಾರಂಭಿಸಲು ನಿರ್ಧರಿಸಲಾಯಿತು. ದಕ್ಷಿಣ ಆಫ್ರಿಕಾದಿಂದ ಪ್ರಯಾಣಿಸಿದ ಓಮಿಕ್ರಾನ್ ವೈರಸ್ ಸೋಂಕಿತ ವ್ಯಕ್ತಿಯ ಪರೀಕ್ಷಾ ವರದಿಗಳಲ್ಲಿ ವೈರುಧ್ಯ ಕಂಡು ಬಂದಿರುವ ಕುರಿತು ಕೂಲಂಕಷ ತನಿಖೆ ನಡೆಸುವಂತೆ ಹೈ ಗ್ರೌಂಡ್ ಪೊಲೀಸರಿಗೆ ಸೂಚಿಸಲಾಯಿತು. ಇದನ್ನೂ ಓದಿ: ಸಂಭವನೀಯ ಮೂರನೇ ಅಲೆ ಸಂಬಂಧಿಸಿದ ಚಿಕಿತ್ಸೆಗೆ ಮೆಡಿಕಲ್ ಕಾಲೇಜುಗಳಲ್ಲಿ ಸಿದ್ಧತೆ: ಸುಧಾಕರ್

Share This Article
Leave a Comment

Leave a Reply

Your email address will not be published. Required fields are marked *