ಮಳೆಯಾಗ್ತಿರೋ ಹೊತ್ತಲ್ಲೇ ರಾಜ್ಯದಲ್ಲಿ ಮೋಡ ಬಿತ್ತನೆ- ಇಂದಿನಿಂದ 2 ತಿಂಗಳು ಬಿತ್ತನೆ ಕಾರ್ಯ

Public TV
1 Min Read

ಬೆಂಗಳೂರು: ಬಂಗಾಳಕೊಲ್ಲಿಯಲ್ಲಿ ವಾಯುಭಾರ ಕುಸಿತವಾಗಿರೋ ಕಾರಣ ರಾಜ್ಯದಲ್ಲಿ ನಾಲ್ಕೈದು ದಿನ ಮಳೆ ಆಗಲಿದೆ ಅಂತ ಹವಾಮಾನ ಇಲಾಖೆ ಹೇಳಿದೆ. ಇದನ್ನೇ ಸದುಪಯೋಗಪಡಿಸಿಕೊಳ್ಳಲು ಮುಂದಾಗಿರುವ ಸರ್ಕಾರ, ಮೋಡ ಬಿತ್ತನೆ ಮಾಡ್ತಿದೆ. ಇದಕ್ಕಾಗಿ ಭರ್ಜರಿ ಸಿದ್ಧತೆ ನಡೆದಿದೆ.

ನಿತ್ಯ ಸಂಜೆ ಆಯ್ತು ಅಂದ್ರೆ ವರುಣದೇವನ ಲೀಲೆ ಶುರುವಾಗಿರುತ್ತೆ. ರಾಜ್ಯದ ಹಲವೆಡೆ ಮಳೆರಾಯ ಧೋ ಅಂತಾ ಸುರೀತಿದ್ದಾನೆ. ರಾಜ್ಯದಲ್ಲಿ ಚೆನ್ನಾಗಿ ಮಳೆಯಾಗ್ತಿರೋ ಈ ಹೊತ್ತಲ್ಲಿ ರಾಜ್ಯ ಸರ್ಕಾರ ಮೋಡಬಿತ್ತನೆ ಹೆಸ್ರಲ್ಲಿ ಕೋಟಿ ಕೋಟಿ ಹಣವನ್ನು ನೀರಲ್ಲಿ ಹೋಮ ಮಾಡಲು ಮುಂದಾಗಿದೆ.

 ಇಂದಿನಿಂದ ರಾಜ್ಯದಲ್ಲಿ ಮೋಡಬಿತ್ತನೆಗೆ ರಾಜ್ಯ ಸರ್ಕಾರ ಮುಂದಾಗಿದೆ. ಮಧ್ಯಾಹ್ನ 12 ಗಂಟೆಗೆ ಜಕ್ಕೂರ್ ವಾಯುನೆಲೆಯಿಂದ ಟೇಕ್ ಆಫ್ ಆಗಲಿರುವ ಅಮೆರಿಕದ ವಿಶೇಷ ವಿಮಾನದ ಮೂಲಕ ಮೋಡ ಬಿತ್ತನೆ ಮಾಡಲಾಗುತ್ತದೆ.

ಮೋಡಬಿತ್ತನೆ ಸಲುವಾಗಿಯೇ ಜಿಕೆವಿಕೆ ಅಂಗಳದಲ್ಲಿ ರಡಾರ್ ಹಾಗು ನಿಯಂತ್ರಣ ಕೊಠಡಿಯನ್ನು ಸ್ಥಾಪಿಸಲಾಗಿದೆ. ಮೊದಲು ದಕ್ಷಿಣ ಕರ್ನಾಟಕ ಭಾಗ ಅಂದ್ರೆ ಬೆಂಗಳೂರು, ಕಾವೇರಿ ಜಲಾನಯನ ಪ್ರದೇಶ, ತುಂಗಭದ್ರಾ ಭಾಗಗಳಲ್ಲಿ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಬರೋಬ್ಬರಿ 33 ಕೋಟಿ ರೂ. ವೆಚ್ಚದಲ್ಲಿ ಬೆಂಗಳೂರಿನ ಹೊಯ್ಸಳ ಸಂಸ್ಥೆಗೆ ಮೋಡಬಿತ್ತನೆಯ ಪ್ರಾಜೆಕ್ಟ್ ಸಿಕ್ಕಿದೆ. ಇನ್ನು 2- 3 ದಿನಗಳ ಅಂತರದಲ್ಲಿ ಉತ್ತರ ಕರ್ನಾಟಕ ಭಾಗದಲ್ಲಿಯೂ ಮೋಡಬಿತ್ತನೆ ಕಾರ್ಯ ಆರಂಭವಾಗಲಿದೆ ಎನ್ನಲಾಗಿದೆ.

ಹೇಗೆ ನಡೆಯುತ್ತೆ ಮೋಡ ಬಿತ್ತನೆ?: ಮಳೆ ಮೋಡಗಳ ಮೇಲೆ ನಿಗಾ ಇಡುವ ರಡಾರ್ 360 ಡಿಗ್ರಿ ಸುತ್ತಳತೆಯ 200 ಕಿಲೋಮೀಟರ್ ದೂರದ ಮೋಡಗಳ ಮೇಲೆ ಕೇಂದ್ರೀಕರಿಸಲಾಗುತ್ತೆ. ಮೋಡದ ಸಾಂದ್ರತೆಯ ತೀವ್ರತೆ ಮತ್ತು ಮೋಡ ಚದುರಿವಿಕೆ ಸಾಮಥ್ರ್ಯವನ್ನು ಚಿತ್ರದ ಮೂಲಕ ನಿಯಂತ್ರಣ ಕೊಠಡಿಯ ಕಂಪ್ಯೂಟರ್‍ಗೆ ರಡಾರ್ ರವಾನಿಸುತ್ತೆ. ಅಲ್ಲಿಂದ ವಿಹೆಚ್‍ಪಿ ಸಂಪರ್ಕ ವಾಹಕದ ಮೂಲಕ ಮೋಡ ಬಿತ್ತನೆಯ ಪೈಲಟ್‍ಗೆ ಸಂದೇಶ ರವಾನೆಯಾಗುತ್ತೆ. ತಾಂತ್ರಿಕ ಟೀಮ್‍ನಿಂದ ಗ್ರೀನ್ ಸಿಗ್ನಲ್ ಸಿಕ್ಕಿದ ತಕ್ಷಣ ಮೋಡ ಬಿತ್ತನೆ ಕಾರ್ಯ ಶುರುವಾಗುತ್ತದೆ.

ಒಟ್ಟು ಎರಡು ತಿಂಗಳ ಕಾಲ ಈ ಮೋಡ ಬಿತ್ತನೆ ಕಾರ್ಯ ನಡೆಯಲಿದೆ. ಆದ್ರೆ ಇದುವರೆಗೆ ಮೋಡ ಬಿತ್ತನೆ ಯಶಸ್ವಿಯಾದ ಉದಾಹರಣೆಗಳೇ ಇಲ್ಲ.

 

Share This Article
Leave a Comment

Leave a Reply

Your email address will not be published. Required fields are marked *