ಅಪಘಾತದಿಂದ ಕೂದಲೆಳೆ ಅಂತರದಲ್ಲಿ ಪಾರಾದ ಅಮಿತಾಬ್ ಬಚ್ಚನ್

Public TV
1 Min Read

ಕೋಲ್ಕತ್ತಾ: ಬಾಲಿವುಡ್ ಬಿಗ್ ಬಿ ಅಮಿತಾಬ್ ಬಚ್ಚನ್ ಅಪಘಾತವೊಂದರಿಂದ ಕೂದಲೆಳೆ ಅಂತರದಲ್ಲಿ ಪಾರಾಗಿದ್ದು, ಘಟನೆ ತಡವಾಗಿ ಬೆಳಕಿಗೆ ಬಂದಿದೆ.

23ನೇ ಕೋಲ್ಕತ್ತಾ ಅಂತರಾಷ್ಟ್ರೀಯ ಚಲಚಚಿತ್ರೋತ್ಸವದ ಉದ್ಘಾಟನೆಗಾಗಿ ರಾಜ್ಯ ಸರ್ಕಾರದ ಆಹ್ವಾನದ ಮೇರೆಗೆ ಅಮಿತಾಬ್ ಬಚ್ಚನ್ ನಗರಕ್ಕೆ ಭೇಟಿ ನೀಡಿದ್ದರು. ಅವರು ಶನಿವಾರ ಬೆಳಗ್ಗೆ ಏರ್‍ಪೋರ್ಟ್‍ಗೆ ಹೋಗುವ ವೇಳೆ ಈ ಅಪಘಾತ ಸಂಭವಿಸಿತ್ತು. ಕೋಲ್ಕತ್ತಾ ನಗರದಲ್ಲಿ ಅಮಿತಾಬ್ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರಿನ ಹಿಂಬದಿ ಟೈರ್ ಕಳಚಿಕೊಂಡಿತ್ತು.

ಅಪಘಾತ ನಡೆದ ಬಳಿಕ ರಾಜ್ಯ ಸರ್ಕಾರ ಕಾರನ್ನು ಒದಗಿಸಿದ್ದ ಟ್ರಾವೆಲ್ ಏಜೆನ್ಸಿಯವರಿಗೆ ಶೋಕಾಸ್ ನೋಟಿಸ್ ನೀಡಿದೆ ಎಂದು ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

ಆಗಿದ್ದು ಏನು?: ಶನಿವಾರ ಬೆಳಗ್ಗೆ ಬಚ್ಚನ್ ಅವರು ಮುಂಬೈಗೆ ತೆರಳಲು ವಿಮಾನ ನಿಲ್ದಾಣಕ್ಕೆ ಹೋಗುತ್ತಿದ್ದರು. ಈ ವೇಳೆ ಇಲ್ಲಿನ ಡಫರಿನ್ ರಸ್ತೆಯಲ್ಲಿ ಅಮಿತಾಬ್ ಅವರು ಪ್ರಯಾಣಿಸುತ್ತಿದ್ದ ಮರ್ಸಿಡಿಸ್ ಕಾರಿನ ಎಡಭಾಗದ ಹಿಂಬದಿ ಟೈರ್ ಕಾರಿನಿಂದ ಬೇರ್ಪಟ್ಟಿತ್ತು ಎಂದು ಕಾರ್ಯದರ್ಶಿ ಕಚೇರಿಯ ಅಧಿಕಾರಿಯೊಬ್ಬರು ಸ್ಪಷ್ಟಪಡಿಸಿದ್ದಾರೆ.

ಟ್ರಾವೆಲ್ ಏಜೆನ್ಸಿಯೊಂದು ಕಾರನ್ನು ಒದಗಿಸಿತ್ತು. ಘಟನೆ ಬಗ್ಗೆ ವಿವರಿಸಲು ಶೋಕಾಸ್ ನೋಟಿಸ್ ನೀಡಿದ್ದೇವೆ ಎಂದು ಹೇಳಿದ್ದಾರೆ. ಅಲ್ಲದೆ ಬಚ್ಚನ್ ಅವರಿಗಾಗಿ ಪ್ರಯಾಣದ ವ್ಯವಸ್ಥೆ ಮಾಡಲು ಏಜೆನ್ಸಿಗೆ ಭಾರೀ ಮೊತ್ತದ ಹಣ ನೀಡಲಾಗಿತ್ತು ಎಂದು ಅವರು ತಿಳಿಸಿದ್ದಾರೆ.

ವಾಹನದ ಸರ್ಟಿಫಿಕೇಟ್ ಆಫ್ ಫಿಟ್‍ನೆಸ್ ಅವಧಿ ತುಂಬಾ ಸಮಯದ ಹಿಂದೆಯೇ ಮುಗಿದಿತ್ತು. ಆದರೂ ಅದನ್ನ ಬಳಸಲಾಗ್ತಿತ್ತು ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ ಎಂದಿದ್ದಾರೆ. ಏಜೆನ್ಸಿಯಿಂದ ಏನಾದರೂ ತಪ್ಪಾಗಿದ್ದಲ್ಲಿ ಅವರ ವಿರುದ್ಧ ಸೂಕ್ತ ಕ್ರಮ ಕೈಗೊಳ್ಳಲಾಗುತ್ತದೆ ಎಂದು ಕಚೇರಿ ಮೂಲಗಳು ತಿಳಿಸಿವೆ.

ಅಮಿತಾಬ್ ಬಚ್ಚನ್ ಅವರ ಜೊತೆ ಹಿರಿಯ ಸಚಿವರೊಬ್ಬರು ಕಾರಿನಲ್ಲಿ ಇದ್ದರು ಎಂದು ವರದಿಯಾಗಿದೆ. ಘಟನೆಯ ನಂತರ ಬಚ್ಚನ್ ಅವರನ್ನು ಮರ್ಸಿಡಿಸ್ ಕಾರಿನ ಹಿಂದೆಯೇ ಬರುತ್ತಿದ್ದ ಸಚಿವರ ಕಾರಿನಲ್ಲಿ ಏರ್‍ಪೋರ್ಟ್‍ಗೆ ಕರೆದೊಯ್ಯಲಾಯಿತು ಎಂದು ಕೋಲ್ಕತ್ತಾ ಟ್ರಾಫಿಕ್ ಪೊಲೀಸ್‍ನ ಹಿರಿಯ ಅಧಿಕಾರಿಯೊಬ್ಬರು ಹೇಳಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *