34 ವರ್ಷಗಳ ಬಳಿಕ ಸಹಪಾಠಿಗಳ ಪುನರ್ ಮಿಲನ – ಸವಿನೆನಪುಗಳ ಮೆಲುಕು!

Public TV
2 Min Read

ಅಲ್ಲಿ ಸೇರಿದ್ದವರೆಲ್ಲಾ ಸುಮಾರು 55 ವರ್ಷ ವಯಸ್ಸಿನ ಆಸುಪಾಸಿನವರು.. ಪರಸ್ಪರ ಪರಿಚಯವಿಲ್ಲ.. ಅವರ್ಯಾರು ?ಇವರ್ಯಾರು? ಅಂತ ಮುಖ ಮುಖ ನೋಡಿ ಗುರುತು ಹಿಡಿಯುವ ಪ್ರಯತ್ನ..ಗುರುತು ಹಿಡಿಯುತ್ತಿದ್ದಂತೆ ಒಂದು ಆಲಿಂಗನ.. ಗೊತ್ತಾಗದ್ದಿದ್ದರೆ ಮಿಳಿ ಮಿಳಿ ಕಣ್ಣು ಬಿಟ್ಟು ಸ್ವಲ್ಪ ಹೊತ್ತು ನೋಡಿ ಪರಿಚಯ ಮಾಡಿಕೊಂಡು ಹರಟೆ ಆರಂಭ.. ಇದು ನಡೆದದ್ದು ಕಳೆದ ಭಾನುವಾರ ಪುತ್ತೂರಿನ ಸಂತ ಫಿಲೋಮಿನಾ ಕಾಲೇಜಿನ ಸ್ಪಂದನ ಸಭಾಂಗಣದಲ್ಲಿ.. ಹಳೆ ವಿದ್ಯಾರ್ಥಿಗಳ ಪುನರ್ ಮಿಲನದಲ್ಲಿ..

ಹೌದು ಅವರೆಲ್ಲಾ 34 ವರ್ಷಗಳ ಸುದೀರ್ಘ ಅವಧಿಯ ಬಳಿಕ ಅಲ್ಲಿ ಸೇರಿದ್ದರು.. ಕಾಲೇಜಿನ 1991ರ BSc ವಿದ್ಯಾರ್ಥಿಗಳ ಪುನರ್ ಸಮಾಗಮವದು. ಸಹಪಾಠಿ ಹಿರಿಯ ಪತ್ರಕರ್ತ, ಪ್ರಸ್ತುತ ಕರ್ನಾಟಕ ಮಾಹಿತಿ ಆಯೋಗದ ರಾಜ್ಯ ಮಾಹಿತಿ ಆಯುಕ್ತ ಬದ್ರುದ್ದೀನ್.ಕೆ ಅವರು ಈ ಹುದ್ದೆಗೆ ನೇಮಕವಾದ ವಿಷಯವೇ ಈ ಪುನರ್ ಮಿಲನಕ್ಕೆ ನಾಂದಿ ಆಯಿತು . ಹಾಗೆ ಆರಂಭವಾದ ಸಹಪಾಠಿಗಳ ಹುಡುಕಾಟ ಮೂರು ದಶಕಗಳ ಬಳಿಕ ಪುನರ್ ಮಿಲನಕ್ಕೆ ವೇದಿಕೆ ಆಯಿತು ಎಂದು ಹೇಳಿದರು ಈ ತಂಡದ ವಿದ್ಯಾರ್ಥಿನಿ ಪ್ರಸ್ತುತ ಮಂಗಳೂರಿನ ಪದವಿ ಕಾಲೇಜಿನ ಪ್ರೊಫೆಸರ್ ಡಾ.ಕೃಷಪ್ರಭಾ ..

ಬದ್ರುದ್ದೀನ್ ವಿಷಯದಲ್ಲಿ ಜುಲೈ 4ರಂದು ಪರಸ್ಪರ ಮಾತನಾಡಿದರು.. ಉಳಿದವರನ್ನು ಸೇರಿಸುವ ಸಲುವಾಗಿ ಚರ್ಚಿಸಿ ಸಿಗದವರ ಹುಡುಕಾಟ ನಡೆಯಿತು.. ವಾಟ್ಸಪ್‌ ಗ್ರೂಪ್ ರಚನೆ ಆಯಿತು.. 20 ದಿನದಲ್ಲಿ 52 ಮಂದಿಯ ಪೈಕಿ 47 ಮಂದಿ ಸಂಪರ್ಕಕ್ಕೆ ಬಂದರು.. ಒಮ್ಮೆ ತಕ್ಷಣಕ್ಕೆ ಸೇರೋಣ ಎಂದಾಯಿತು..

ದೂರದ ದುಬಾಯಿಯಿಂದ ಹಿಡಿದು, ಕಲಬುರಗಿ, ಕೇರಳ, ಬೆಂಗಳೂರು, ಮೈಸೂರು, ಮಡಿಕೇರಿ, ಮಂಗಳೂರಿನಿಂದ ಎಲ್ಲರೂ ಧಾವಿಸಿಬಿಟ್ಟರು. ಇದೆಲ್ಲಾ ಒಂದು ತಿಂಗಳಲ್ಲಿ ನಡೆದು ಹೋದದ್ದೆ ವಿಸ್ಮಯ..

ಬೇರೆ ಬೇರೆ ಕಡೆ ವೃತ್ತಿಯಲ್ಲಿ ಇರುವ ಕಾಲೇಜಿನ ಪ್ರಾಂಶುಪಾಲರುಗಳು ಪ್ರೊಫೆಸರ್‌ಗಳು, ಉಪನ್ಯಾಸಕರು, ಪ್ರೌಢ ಶಾಲೆಗಳ ಮುಖ್ಯಶಿಕ್ಷಕರು, ಉದ್ಯಮಿಗಳು, ಪ್ರಗತಿಪರ ಕೃಷಿಕರು, ಸಹಕಾರಿ ಧುರೀಣರು, ದೇವಾಲಯದ ಧರ್ಮದರ್ಶಿಗಳು, ಸಮಾಜ ಸೇವಕರು, ಗೃಹಿಣಿಯರು, ವಿವಿಧ ಕ್ಷೇತ್ರಗಳ ಪರಿಣಿತರ ಸಮಾಗಮವೇ ಇದಾಗಿತ್ತು.

ಕಾಲೇಜಿನಲ್ಲಿ ಅವರು ಕಳೆದ ಅವಧಿ, ಆಗಿನ ಸವಿನೆನಪು, ತುಂಟಾಟಗಳ ಮೆಲುಕು, ಜೀವನ ಸಾಗಿ ಬಂದ ಹಾದಿ, ಕಷ್ಟಕಾರ್ಪಣ್ಯಗಳನ್ನು ಹಂಚಿಕೊಂಡರು.. ತಮ್ಮ ಯಶೋಗಾಥೆಗಳನ್ನು ತಿಳಿಸಿ ಸಂಭ್ರಮಿಸಿದರು..

ಹಾಡಿದರು ಕುಣಿದರು, ಫನ್ ಗೇಮ್ಸ್‌ ಗಳನ್ನು ಆಡುತ್ತಾ ಖುಷಿಪಟ್ಟರು.. ತಾವು ಕಲಿತ ತರಗತಿಯಲ್ಲಿ ಕೆಲಕಾಲ ಕಳೆದು ಹಳೆ ನೆನಪುಗಳನ್ನು ಮೆಲುಕು ಹಾಕಿದರು.. ಈ ಪುನರ್ ಮಿಲನ ಅವರಲ್ಲಿ ಹೊಸ ಹುರುಪು ಜೀವನೊಲ್ಲಾಸ ಮೂಡಿಸಿದಂತೆ ಭಾಸವಾಗಿದ್ದು ನಿಜ..

ಒಟ್ಟಿಗೆ ಬೆಳಗಿನ ಉಪಹಾರದೊಂದಿಗೆ ಆರಂಭವಾದ ಈ ಸಮಾಗಮ ಸಹಭೋಜನದೊಂದಿಗೆ ಮುಂದುವರಿಯಿತು..
ಕಾಲೇಜಿನ ಹಾಲಿ ಪ್ರಾಂಶುಪಾಲ ರೆ.ಫಾ.ಆಂಟನಿ ಪ್ರಕಾಶ್ ಮೊಂತೆರೊ ಹಳೆವಿದ್ಯಾರ್ಥಿಗಳೊಂದಿಗೆ ಬೆರೆತು ಸಹನುಡಿಗಳನ್ನು ಆಡಿದರು..

ಕಾಲೇಜಿನೊಂದಿಗಿನ ಬೆಸುಗೆ ಮುಂದುವರಿಯಲಿ ಎಂದು ಆಶಿಸಿದರು.. ಒಟ್ಟಿಗೆ ಭೋಜನ ಸವಿದು ಸಂಭ್ರಮಕ್ಕೆ ಸಾಕ್ಷಿಯಾದರು.. ಉಪಪ್ರಾಂಶುಪಾಲ ವಿಜಯಕುಮಾರ್ ಮೊಳೆಯಾರ್, ಇಂಗ್ಲಿಷ್ ವಿಭಾಗದ ಮುಖ್ಯಸ್ಥೆ ಭಾರತಿ ರೈ ಜೊತೆಗಿದ್ದರು..

ಮತ್ತೆ ಮತ್ತೆ ಸೆರೋಣ.. ಈ ಬೆಸುಗೆ ನಿರಂತರವಾಗಿರಲಿ ಎನ್ನುವುದೇ ಎಲ್ಲರ ಹಾರೈಕೆ ಮತ್ತು ಆಶಯವಾಗಿತ್ತು.. ಜೀವನದಲ್ಲಿ ಏನೋ ಗಳಿಸಿದ ಹುರುಪಿನೊಂದಿಗೆ..ನಿರಂತರ ಸಮ್ಮಿಲನದ ಸಂಕಲ್ಪದೊಂದಿಗೆ ತೆರಳಿದ ಎಲ್ಲರ ಮುಖದಲ್ಲಿ ಮಂದಹಾಸವಿತ್ತು.

Share This Article