ಉತ್ತರ ಪ್ರದೇಶ | ಜಾಮಾ ಮಸೀದಿ ಸಮೀಕ್ಷೆಗೆ ತೆರಳಿದ್ದ ಅಧಿಕಾರಿಗಳ ಮೇಲೆ ಕಲ್ಲು ತೂರಾಟ

Public TV
2 Min Read

ಲಕ್ನೋ: ಉತ್ತರಪ್ರದೇಶದ (Uttar Pradesh) ಸಂಭಾಲ್‌ನಲ್ಲಿರುವ ಶಾಹಿ ಜಾಮಾ ಮಸೀದಿಯ (Shahi Jama Masjid) ಸಮೀಕ್ಷೆ ವಿರೋಧಿಸಿ ಪ್ರತಿಭಟನಾಕಾರರು ಪೊಲೀಸರು ಹಾಗೂ ಸಮಿಕ್ಷಾ ತಂಡದ ಮೇಲೆ ಕಲ್ಲು ತೂರಾಟ ನಡೆಸಿದ ಘಟನೆ ನಡೆದಿದೆ.

ಸಮೀಕ್ಷಾ ತಂಡ ಸ್ಥಳಕ್ಕೆ ಆಗಮಿಸುತ್ತಿದ್ದಂತೆ ನೂರಾರು ಸಂಖ್ಯೆಯಲ್ಲಿ ಸೇರಿದ್ದ ಪ್ರತಿಭಟನಾಕಾರರು ಸಮೀಕ್ಷೆಗೆ ವಿರೋಧ ವ್ಯಕ್ತಪಡಿಸಿದ್ದಾರೆ. ಬಳಿಕ ಅಧಿಕಾರಿಗಳ ಮೇಲೆ ಗುಂಪು ಕಲ್ಲು ತೂರಾಟ ನಡೆಸಿದೆ. ಪ್ರತಿಭಟನೆ ಹಿಂಸಾಚಾರಕ್ಕೆ ತಿರುಗಿದ್ದು, ಪೊಲೀಸರು ಪರಿಸ್ಥಿತಿ ನಿಯಂತ್ರಣಕ್ಕೆ ತರಲು ಅಶ್ರುವಾಯು ಸಿಡಿಸಿದ್ದಾರೆ. ಈ ವೇಳೆ ಹಿರಿಯ ಪೊಲೀಸ್ ಅಧಿಕಾರಿಗಳು ಹಾಗೂ ಮಸೀದಿಯ ಮುಖ್ಯಸ್ಥರು ಗುಂಪನ್ನು ಸಮಾಧಾನಪಡಿಸಲು ಪ್ರಯತ್ನಿಸಿದ್ದು, ಅವರ ಪ್ರಯತ್ನಗಳು ವಿಫಲವಾದವು.

ಈ ಬಗ್ಗೆ ಪ್ರತಿಕ್ರಿಯಿಸಿರುವ ಉನ್ನತ ಪೊಲೀಸ್ ಅಧಿಕಾರಿ ಪ್ರಶಾಂತ್ ಕುಮಾರ್, ನ್ಯಾಯಾಲಯದ (Court) ಆದೇಶದ ಮೇರೆಗೆ ಸಂಭಾಲ್‌ನಲ್ಲಿ ಸರ್ವೆ ನಡೆಸಲಾಗುತ್ತಿದೆ. ಕೆಲ ಸಮಾಜ ವಿರೋಧಿಗಳು ಕಲ್ಲು ತೂರಾಟ ನಡೆಸಿದ್ದಾರೆ. ಪೊಲೀಸರು ಹಾಗೂ ಹಿರಿಯ ಅಧಿಕಾರಿಗಳು ಸ್ಥಳದಲ್ಲೇ ಇದ್ದಾರೆ. ಪರಿಸ್ಥಿತಿ ನಿಯಂತ್ರಣದಲ್ಲಿದ್ದು, ಕಿಡಿಗೇಡಿಗಳ ವಿರುದ್ಧ ಸೂಕ್ತ ಕ್ರಮಕೈಗೊಳ್ಳಲಾಗುವುದು ಎಂದು ತಿಳಿಸಿದ್ದಾರೆ.

ಇದೇ ರೀತಿಯ ಸಮೀಕ್ಷೆಯನ್ನು ನವೆಂಬರ್‌ 19ರಂದು ಪೊಲೀಸ್ ಬಂದೋಬಸ್ತ್‌ನಲ್ಲಿ ನಡೆಸಲಾಗಿತ್ತು. ಆದ್ರೆ ಕಳೆ ಕೆಲವು ದಿನಗಳಿಂದ ಈ ಪ್ರದೇಶದಲ್ಲಿ ಉದ್ವಿಗ್ನ ವಾತಾವರಣ ನಿರ್ಮಾಣವಾಗಿದ್ದು, ನಿಷೇಧಾಜ್ಞೆ ವಿಧಿಸಲಾಗಿದೆ.

ಶಾಹಿ ಜಾಮಾ ಮಸೀದಿ ಮೂಲತಃ ಹರಿ ಹರ್ ಮಂದಿರ ಎಂದು ವಕೀಲ ವಿಷ್ಣು ಶಂಕರ್ ಜೈನ್ ಎಂಬವರು ಕೋರ್ಟ್‌ಗೆ ಅರ್ಜಿ ಸಲ್ಲಿಸಿದ್ದರು. ಅರ್ಜಿಯಲ್ಲಿ ಮೊಘಲರ ದೊರೆ ಬಾಬರ್ ಮಸೀದಿ ನಿರ್ಮಿಸಲು ದೇವಾಲಯವನ್ನು ಕೆಡವಿದ್ದ ಎಂದು ಉಲ್ಲೇಖಿಸಲಾಗಿದೆ. ಈ ಅರ್ಜಿಯನ್ನು ಪರಿಗಣಿಸಿದ್ದ ನ್ಯಾಯಾಲಯ ವಿಡಿಯೋ ಹಾಗೂ ಫೋಟೋ ತೆಗೆದು ಸಮೀಕ್ಷೆ ನಡೆಸುವಂತೆ ಆದೇಶಿಸಿತ್ತು.

Share This Article