ಈದ್ಗಾ ಮೈದಾನ ವಿಚಾರವಾಗಿ ಚನ್ನಪಟ್ಟಣ ಕೋರ್ಟ್ ಬಳಿಯೇ ಎರಡು ಗುಂಪುಗಳಿಂದ ಗಲಾಟೆ

Public TV
2 Min Read

ರಾಮನಗರ: ಈದ್ಗಾ ಮೈದಾನ ವಿಚಾರವಾಗಿ ಕೋರ್ಟ್ ಬಳಿಯೇ ಎರಡು ಗುಂಪಿನ ಜನರು ಗಲಾಟೆ ಮಾಡಿಕೊಂಡ ಘಟನೆ ಜಿಲ್ಲೆಯ ಚನ್ನಪಟ್ಟಣದಲ್ಲಿ ನಡೆದಿದೆ.

ಚನ್ನಪಟ್ಟಣ ನ್ಯಾಯಾಲಯವನ್ನು ಸಿಎಂ ಕುಮಾರಸ್ವಾಮಿ ಅವರು ಫೆಬ್ರವರಿ 2ರಂದು ಉದ್ಘಾಟನೆ ಮಾಡಲಿದ್ದಾರೆ. ಈ ಹಿನ್ನೆಲೆಯಲ್ಲಿ ಒಂದು ಕೋಮಿನ ಜನರು ಈದ್ಗಾ ಮೈದಾನ ಹಾಗೂ ಕೋರ್ಟ್ ಮಧ್ಯೆ ಶೀಟ್‍ಗಳಿಂದ ತಡೆಗೊಡೆ ನಿರ್ಮಿಸಿದ್ದಾರೆ. ಇದನ್ನು ವಿರೋಧಿಸಿ ಮತ್ತೊಂದು ಕೋಮಿನ ಜನರು ರಸ್ತೆಗೆ ಇಳಿದು ಪ್ರತಿಭಟನೆ ನಡೆದಿದ್ದಾರೆ.

ಎರಡು ಕೋಮಿನ ಜನರನ್ನು ಸಮಾಧಾನ ಪಡಿಸಲು ಪೊಲೀಸರು, ಅಧಿಕಾರಿಗಳ ಹರಸಾಹಸ ಪಡುತ್ತಿದ್ದಾರೆ. ಭಾರೀ ಸಂಖ್ಯೆಯಲ್ಲಿ ಜನರು ಸೇರಿದ್ದರಿಂದ ಬೆಂಗಳೂರು – ಮೈಸೂರು ಹೆದ್ದಾರಿಯಲ್ಲಿ ಸಂಚಾರ ಅಸ್ತವ್ಯಸ್ತವಾಗಿದೆ. ಪರಿಸ್ಥಿಯನ್ನು ತಿಳಿಗೊಳಿಸಲು ಪೊಲೀಸರು ಲಘು ಲಾಠಿ ಚಾರ್ಜ್ ಮಾಡಿ ಎರಡೂ ಗುಂಪಿನ ಜನರನ್ನು ಚದುರಿಸಿದ್ದಾರೆ.

ಏನಿದು ಪ್ರಕರಣ?:
ಚನ್ನಪಟ್ಟಣದ ಈದ್ಗಾ ಮೈದಾನದ ಆರು ಎಕರೆ ಜಮೀನಿನಲ್ಲಿ ನಾಲ್ಕು ಎಕರೆ ಪಡೆದು ಕೋರ್ಟ್ ನಿರ್ಮಿಸಲಾಗಿದೆ. ಜಾಗವನ್ನು ಪಡೆಯುವಾಗ ಅಂದಿನ ಶಾಸಕ ಸಿ.ಪಿ.ಯೋಗೇಶ್ವರ್ ಅವರು, ಬೇರೆ ಕಡೆಗೆ ಈದ್ಗಾ ಮೈದಾನಕ್ಕೆ ಹಾಗೂ ನಮಾಜ್‍ಗೆ ಜಾಗವನ್ನು ನೀಡುತ್ತೇವೆ ಎಂದು ಭರವಸೆ ನೀಡಿದ್ದರು. ಆದರೆ ನ್ಯಾಯಾಲಯ ಕಟ್ಟಡ ನಿರ್ಮಾಣವಾಗಿ ಉದ್ಘಾಟನೆ ಹಂತಕ್ಕೆ ಬಂದರೂ ಬೇರೆ ಕಡೆ ಜಾಗ ಮಂಜೂರಾಗಿರಲಿಲ್ಲ. ಜೊತೆಗೆ ಈದ್ಗಾ ಮೈದಾನದ ಜಾಗದಲ್ಲಿ 10 ಗುಂಟೆ ಜಾಗವನ್ನು ವಾಹನಗಳ ಪಾರ್ಕಿಂಗ್‍ಗೆ ಬಳಕೆ ಮಾಡಲಾಗಿದೆ.

ಈಗಾಗಲೇ ನೀಡಿರುವ ನಾಲ್ಕು ಎಕರೆ ಜಾಗವನ್ನು ಹೊರತುಪಡಿಸಿ, ಮತ್ತೆ ಜಾಗವನ್ನು ನೀಡುವುದಿಲ್ಲ ಎಂದು ಕೆಲವರು ಪಟ್ಟು ಹಿಡಿದಿದ್ದಾರೆ. ಈ ನಿಟ್ಟಿನಲ್ಲಿ ಈದ್ಗಾ ಮೈದಾನ ಹಾಗೂ ಕೋರ್ಟ್ ಮಧ್ಯದಲ್ಲಿ ಶೀಟ್‍ಗಳಿಂದ ತಡೆಗೋಡೆ ನಿರ್ಮಿಸಿದ್ದಾರೆ. ಆದರೆ ತಡೆಗೋಡೆ ತೆರವುಗೊಳಿಸುವಂತೆ ಕೇಳಲು ಹೋಗಿದ್ದ ಪೊಲೀಸರ ಜೊತೆಗೆ ವಾಗ್ದಾಳಿ ನಡೆಸಿದ್ದಾರೆ. ಈ ವೇಳೆ ಪೊಲೀಸರು ತಡೆಗೋಡೆಯನ್ನು ತೆರವುಗೊಳಿಸುತ್ತಿದ್ದಂತೆ ಪ್ರತಿಭಟನಾ ನಿರತರು ತಡೆಯಲು ಮುಂದಾದರು.

ಈದ್ಗಾ ಮೈದಾನಕ್ಕಾಗಿ ಪ್ರತಿಭಟನೆ ನಡೆಸುತ್ತಿರುವ ಜನರು ಪ್ರತಿಭಟನಾ ಸ್ಥಳದಿಂದ ಹೋಗವವರೆಗೂ ನಾವು ಹೋಗುವುದಿಲ್ಲ ಎಂದು ಮತ್ತೊಂದು ಕೋಮಿನ ಜನರು ಪಟ್ಟು ಹಿಡಿದಿದ್ದಾರೆ. ಇದರಿಂದಾಗಿ ಸ್ಥಳದಲ್ಲಿ ಆತಂಕದ ವಾತಾವರಣ ನಿರ್ಮಾಣವಾಗಿದೆ.

ಪಬ್ಲಿಕ್ ಟಿವಿಯನ್ನು ಇನ್ ಸ್ಟಾಗ್ರಾಮ್ ನಲ್ಲಿ ಫಾಲೋ ಮಾಡಿ www.instagram.com/publictv , ಪಬ್ಲಿಕ್ ಟಿವಿ ಆ್ಯಪ್ ಡೌನ್‍ಲೋಡ್ ಮಾಡಿ: play.google.com/publictv 

Share This Article
Leave a Comment

Leave a Reply

Your email address will not be published. Required fields are marked *