ಕಾರವಾರ: ಮದುವೆ ರಿಸಷ್ಷನ್‌ಗಾಗಿ ಬಂದ ಯುವಕರು ಪಾರ್ಕಿಂಗ್ ವಿಷಯದಲ್ಲಿ ಒಬ್ಬರಿಗೊಬ್ಬರು ಬಡಿದಾಡಿಕೊಂಡ ಘಟನೆ ಉತ್ತರ ಕನ್ನಡ ಜಿಲ್ಲೆಯ ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್‌ನ ಕಸ್ನುಮ್ ಮದುವೆ ಹಾಲ್ ಎದುರು ನಡೆದಿದೆ.
ಘಟನೆಯಲ್ಲಿ ಐದಕ್ಕೂ ಹೆಚ್ಚು ಜನರಿಗೆ ಗಾಯವಾಗಿದ್ದು, ಮೊನ್ನೆ ನಡೆದಿದ್ದ ಈ ಘಟನೆ ವಿಡಿಯೋ ವೈರಲ್ ಆಗುತ್ತಿದ್ದಂತೆ ಎಂಟು ಜನರ ವಿರುದ್ಧ ಭಟ್ಕಳ ಗ್ರಾಮೀಣ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಭಟ್ಕಳದಲ್ಲಿ ನಡೆದ ಘಟನೆ ಏನು?
ಭಟ್ಕಳ ತಾಲೂಕಿನ ಹೆಬಳೆ ಗ್ರಾಮಪಂಚಾಯ್ತಿ ವ್ಯಾಪ್ತಿಯ ಹನೀಫಾಬಾದ್‌ನ ಕಸ್ನುಮ್ ಮದುವೆ ಹಾಲ್‌ನಲ್ಲಿ ರಿಸಪ್ಷನ್ ಇದ್ದು, ಈ ವೇಳೆ ಎರಡು ಗುಂಪುಗಳು ಅಲ್ಲಿ ಪಾರ್ಕಿಂಗ್ ಮಾಡುವಾಗ ಮಾತಿಗೆ ಮಾತು ನಡೆದಿದೆ.
ಆರೋಪಿತರು ಗುಂಪಾಗಿ ಸೇರಿ ಪರಸ್ಪರ ಅವಾಚ್ಯ ಶಬ್ದಗಳಿಂದ ಬೈಯ್ದಾಡಿ, ಬಳಿಕ ಕೈ ಕೈ ಮಿಲಾಯಿಸಿ ಹೊಡೆದಾಟ ನಡೆಸಿದರೆಂಬ ಮಾಹಿತಿ ಲಭಿಸಿದೆ. ಘಟನಾ ಸ್ಥಳಕ್ಕೆ ಠಾಣೆಯ ಪೊಲೀಸ್ ನಿರೀಕ್ಷಕ ಮಂಜುನಾಥ ಲಿಂಗಾರೆಡ್ಡಿ ಸಿಬ್ಬಂದಿಯೊಂದಿಗೆ ಧಾವಿಸಿ ಜಗಳ ಶಮನಕ್ಕೆ ಮುಂದಾದರು. ಆರೋಪಿತರು ಅವರ ಮಾತು ಕೇಳದೆ ಹೊಡೆದಾಟ ಮುಂದುವರಿಸಿದ್ದು, ಇದರಿಂದ ಕೆಲವರು ಗಾಯಗೊಂಡಿದ್ದಾರೆ. ಸ್ಥಳದಲ್ಲಿ ಗಲಭೆಯ ವಾತಾವರಣ ನಿರ್ಮಾಣವಾಗಿ ಸಾರ್ವಜನಿಕ ಶಾಂತಿ ಭಂಗವಾಗಿತ್ತು.
ಇದೀಗ ವಿಡಿಯೋ ವೈರಲ್ ಆದ ಬೆನ್ನಲ್ಲೇ ಈ ಸಂಬಂಧ ಹನೀಫಾಬಾದ್‌ನ ಉಜೇಪ ಸೈದ ಅಬ್ದುಲ್ ಖಾದರ, ಸೈಯ್ಯದ ಉಮೇರ, ಸೈಯ್ಯದ ಅಬ್ದುಲ್ ಖಾದಿರ, ಉಮೇರ ರುಕ್ಕುದ್ದೀನ್ ಉಬೇದುಲ್ಲಾ, ಮುಗೇರ್ ಎಂ.ಜೆ.ಮಂಜೂರ, ಆಹಾದನಗರ ಆನೇ ಕ್ರಾಸ್‌ನ ಇಬಾದುಲ್ಲಾ ಸಾದೀಕಟಾನ, ದೇವಿನಗರ ಜಾಲಿಯ ಅಬ್ದುಲ್ ರಹೀಮ ಮಹಮ್ಮದ್ ಹುಸೇನ್, ಮೂಸಾನಗರದ ಮುಸ್ತಾಕ್ ಮಕ್ಖುಲ್ ಹಾಗೂ ದೇವಿನಗರದ ತಾಹೀರ ಮಹಮ್ಮದ್ ಹುಸೇನ್ ವಿರುದ್ಧ ಭಟ್ಕಳ ಗ್ರಾಮಿಣ ಪೋಲಿಸ್ ಠಾಣೆಯಲ್ಲಿ ಪ್ರಕರಣ ದಾಖಲಿಸಲಾಗಿದೆ.