ಮೈಸೂರು ಪೇಟಕ್ಕೆ ಮನಸೋತ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಾಧೀಶ ಬೋಬ್ಡೆ

Public TV
1 Min Read

ಬೆಂಗಳೂರು: ಮೈಸೂರು ಪೇಟದ ಗಮ್ಮತ್ತೇ ಅಂಥಾದ್ದು. ಒಮ್ಮೆ ಮೈಸೂರು ಪೇಟಾವನ್ನು ಮುಡಿಗೇರಿಸಿಕೊಂಡವರು ಅಷ್ಟು ಸುಲಭಕ್ಕೆ ಅದನ್ನು ಕೆಳಗಿಳಿಸಲು ಇಷ್ಟಪಡಲ್ಲ. ಇದಕ್ಕೆ ಭಾರತದ ಸರ್ವೋಚ್ಛ ನ್ಯಾಯಾಲಯದ ಮುಖ್ಯ ನ್ಯಾಯಮೂರ್ತಿಗಳೂ ಹೊರತಲ್ಲ ಅಂದರೆ ಅತಿಶಯೋಕ್ತಿಯಲ್ಲ. ಬೆಂಗಳೂರಿನ ಜಿಕೆವಿಕೆಯಲ್ಲಿ ಇವತ್ತಿಂದ ಎರಡು ದಿನಗಳ ಕಾಲ ನ್ಯಾಯಾಂಗ ಅಧಿಕಾರಿಗಳ ಸಮ್ಮೇಳನ ಆರಂಭವಾಗಿದೆ. ಸಮ್ಮೇಳನದಲ್ಲಿ ಭಾಗವಹಿಸಿದ್ದ ಸುಪ್ರೀಂಕೋರ್ಟ್ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆಯವರು ಮೈಸೂರು ಪೇಟಾಕ್ಕೆ ಮನಸೋತ ಅಪರೂಪದ ಪ್ರಸಂಗ ನಡೆಯಿತು.

ಸಮ್ಮೇಳನದಲ್ಲಿ ಸುಪ್ರೀಂಕೋರ್ಟ್ ಮುಖ್ಯನ್ಯಾಯಮೂರ್ತಿಗಳಿಗೆ ಮೈಸೂರು ಪೇಟಾ ತೊಡಿಸಿ, ಶಾಲು ಹೊದಿಸಿ, ಹಾರ ಹಾಕಿ ಅತ್ಯಂತ ಗೌರವಾದರಗಳಿಂದ ಸನ್ಮಾನ ಮಾಡಲಾಯ್ತು. ಆದರೆ ಮೈಸೂರು ಪೇಟಾದ ಆ ನಯ, ಸೊಬಗು, ಮೆರುಗಿಗೆ ಮಾರು ಹೋದರು. ಮುಖ್ಯ ನ್ಯಾಯಮೂರ್ತಿಗಳು, ಸನ್ಮಾನದ ನಂತರವೂ ಮೈಸೂರು ಪೇಟಾ ಮತ್ತು ಶಾಲನ್ನು ತೆಗೆಯದೇ ಹಾಗೇ ಗೌರವಯುತವಾಗಿ ಅವುಗಳನ್ನು ಧರಿಸಿಕೊಂಡೇ ವೇದಿಕೆಯಲ್ಲಿ ಕುಳಿತರು.

ಮೈಸೂರು ಪೇಟಾದ ಮೇಲೆ ಇರುವ ಗೌರವ ಮತ್ತು ಪ್ರೀತಿಯಿಂದ ಕಾರ್ಯಕ್ರಮದ ಪೂರ್ತಿ ಪೇಟ ಧರಿಸಿಕೊಂಡೇ ಮುಖ್ಯ ನ್ಯಾಯಮೂರ್ತಿ ಎಸ್.ಎ.ಬೋಬ್ಡೆಯವರು ಕೂತಿದ್ದರು. ಆಯೋಜಕರು ಮೈಸೂರು ಪೇಟಾ ತೆಗೆಯಲು ಗೌರವದಿಂದಲೇ ಮುಂದಾದಾಗ ಬೇಡ ಇರಲಿ ಎಂದು ಅವುಗಳನ್ನು ಧರಿಸಿಯೇ ವೇದಿಕೆ ಮೇಲೆ ಕುಳಿತಿದ್ದರು.

ಇನ್ನು ಸಮಾವೇಶದಲ್ಲಿ ಸಿಎಂ ಯಡಿಯೂರಪ್ಪ ಅವರಿಗೂ ಸನ್ಮಾನ ಮಾಡಲು ಆಯೋಜಕರು ಮುಂದಾದದರು. ಆದರೆ ಸಿಎಂ, ಸನ್ಮಾನ ಸ್ವೀಕಾರಕ್ಕೆ ಹಿಂದೇಟು ಹಾಕಿದರು. ನನಗೆ ಸನ್ಮಾನ ಬೇಡ ಸರ್ವೋಚ್ಚ ನ್ಯಾಯಮೂರ್ತಿಗಳಿಗೆ ಸಾಕು. ನನಗೆ ಸನ್ಮಾನ ಬೇಡ ಎಂದು ನಯವಾಗಿ ನಿರಾಕರಿಸಿದರು. ಬಳಿಕ ಸಿಎಂ ಅವರಿಗೆ ನ್ಯಾಯಾಂಗ ಕ್ಷೇತ್ರದ ಅಧಿಕಾರಿಗಳಿಂದ ಸನ್ಮಾನ ಸ್ವೀಕರಿಸುವಂತೆ ಒತ್ತಾಯ ಮಾಡಲಾಯ್ತು.

ವೇದಿಕೆಯಲ್ಲಿ ಒತ್ತಾಯ ಮಾಡಿದ್ದರಿಂದ ಸಿಎಂ ಸನ್ಮಾನ ಸ್ವೀಕರಿಸಲೇಬೇಕಾಯ್ತು. ಆದರೆ ಸನ್ಮಾನ ಸ್ವೀಕರಿಸಿದ ವೇಳೆ ತಲೆಗೆ ಮೈಸೂರು ಪೇಟಾ ಹಾಕಲು ಮುಂದಾದಾಗ ಬೇಡ ನಿರಾಕರಿಸಿ, ಪೇಟಾವನ್ನ ಕೈಯಲ್ಲೇ ಸಿಎಂ ಪಡೆದುಕೊಂಡರು.

Share This Article
Leave a Comment

Leave a Reply

Your email address will not be published. Required fields are marked *