ರಾಯಚೂರು ನಗರಸಭೆಯಿಂದ ಕಲುಷಿತ ನೀರು ಸರಬರಾಜು – ಮತ್ತೋರ್ವ ವ್ಯಕ್ತಿ ಸಾವು

Public TV
2 Min Read

ರಾಯಚೂರು: ನಗರಸಭೆಯ ನಿರ್ಲಕ್ಷ್ಯಕ್ಕೆ ಮತ್ತೊಂದು ಬಲಿಯಾಗಿದೆ. ನಗರಸಭೆ ಸರಬರಾಜು ಮಾಡುವ ಕಲುಷಿತ ನೀರನ್ನು ಕುಡಿದು ಅನಾರೋಗ್ಯಕ್ಕೀಡಾಗಿದ್ದ ವ್ಯಕ್ತಿ ಸಾವನ್ನಪ್ಪಿದ್ದಾನೆ. ಆಸ್ಪತ್ರೆಗಳಲ್ಲಿ ದಿನೇ ದಿನೇ ರೋಗಿಗಳ ಸಂಖ್ಯೆ ಹೆಚ್ಚಾಗುತ್ತಿದ್ದು, ಬಡವರು ಆಸ್ಪತ್ರೆ ಬಿಲ್ ಕಟ್ಟಲು ಆಗದೇ ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರಿಗೆ ಇಬ್ಬರು ಬಲಿಯಾದರು ನಗರಸಭೆ ಮಾತ್ರ ಇನ್ನೂ ಎಚ್ಚೆತ್ತಿಲ್ಲ.

ನಗರದ ಅಂದ್ರೂನ್ ಕಿಲ್ಲಾ ನಿವಾಸಿ ಅಬ್ದುಲ್ ಗಫರ್ ರಾಯಚೂರು ನಗರಸಭೆ ಸರಬರಾಜು ಮಾಡುವ ಕಲುಷಿತ ನೀರನ್ನು ಕುಡಿದು ಸಾವನ್ನಪ್ಪಿದ್ದಾನೆ. ಏಕಾಏಕಿ ವಾಂತಿ, ಭೇದಿ ಜೊತೆಗೆ ಕಿಡ್ನಿಯ ಮೇಲೆ ಪರಿಣಾಮ ಬೀರಿ ಡೈಯಲೈಸಿಸ್ ಹಂತಕ್ಕೆ ತಲುಪಿತ್ತು. ಕೊನೆಗೆ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾನೆ. ಎರಡು ದಿನಗಳ ಹಿಂದೆಯಷ್ಟೇ ನಿರ್ಜಲೀಕರಣದಿಂದ ಇಂದಿರಾನಗರ ನಿವಾಸಿ 40 ವರ್ಷದ ಮಲ್ಲಮ್ಮ ಸಾವನ್ನಪ್ಪಿದ್ದರು. ಇದನ್ನೂ ಓದಿ: ಮಾರುವೇಶದಲ್ಲಿ ಪೊಲೀಸರ ದಾಳಿ – 400 ಕೆ.ಜಿ ದನದ ಮಾಂಸ ವಶ

ನೂರಾರು ಜನ ರಿಮ್ಸ್ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ನಿರ್ಜಲೀಕರಣದಿಂದ ದಾಖಲಾಗಿದ್ದಾರೆ. ಆಸ್ಪತ್ರೆ ದಾಖಲಾಗದವರು ಮನೆಯಲ್ಲೆ ಚಿಕಿತ್ಸೆ ಪಡೆಯುತ್ತಿದ್ದಾರೆ. ಕಲುಷಿತ ನೀರು ಕುಡಿದು ವಾಂತಿ, ಭೇದಿ, ಕಿಡ್ನಿ ಸಮಸ್ಯೆ ಸೇರಿ ನಾನಾ ತೊಂದರೆ ಅನುಭವಿಸುತ್ತಿದ್ದಾರೆ. ಇಷ್ಟಾದರೂ ಕೂಡ ನಗರಸಭೆ ಅಧಿಕಾರಿಗಳು ಎಚ್ಚೆತ್ತುಕೊಳ್ಳುತ್ತಿಲ್ಲ. ಹೀಗಾಗಿ ಸಾರ್ವಜನಿಕರು ಆಕ್ರೋಶಗೊಂಡಿದ್ದಾರೆ.

ನಗರದ ಪ್ರತೀ ವಾರ್ಡ್‍ನ ಮನೆ ಮನೆಯಲ್ಲೂ ಅನಾರೋಗ್ಯದಿಂದ ಜನ ಬಳಲುತ್ತಿದ್ದಾರೆ. ಕುಡಿಯುವ ನೀರಿನ ಶುದ್ದೀಕರಣ ಘಟಕದ ಸ್ವಚ್ಛತಾ ಕಾರ್ಯ ಈಗ ಆರಂಭಗೊಂಡಿದ್ದು, ಪೂರ್ಣ ಸ್ವಚ್ಛಗೊಳಿಸಲು ಕನಿಷ್ಠ ಒಂದು ತಿಂಗಳ ಸಮಯ ಬೇಕಿದೆ. ನಗರಸಭೆಯ ಸುಮಾರು ವರ್ಷಗಳ ನಿರ್ಲಕ್ಷ್ಯಕ್ಕೆ ಈಗ ನಗರದಲ್ಲಿ ಇಬ್ಬರು ಬಲಿಯಾಗಿದ್ದು, ನೂರಾರು ಜನ ಆಸ್ಪತ್ರೆಗೆ ದಾಖಲಾಗಿದ್ದಾರೆ. ನಿರ್ಲಕ್ಷ್ಯ ಹಿನ್ನೆಲೆ ನಗರಸಭೆ ಎಇಇ ವೆಂಕಟೇಶ್ ಹಾಗೂ ಜೆ.ಇ ಕೃಷ್ಣ ಮೇಲೆ ಕ್ರಮಕ್ಕೆ ಜಿಲ್ಲಾಡಳಿತ ಮುಂದಾಗಿದೆ. ಇದನ್ನೂ ಓದಿ: ಹಸು ಜೊತೆಗೆ ಸೆಕ್ಸ್ – ವಿಕೃತ ಕಾಮಿ ಅರೆಸ್ಟ್

ಆಲಂ, ಪೊಟ್ಯಾಸಿಯಂ, ಬ್ಲೀಚಿಂಗ್ ಪೌಡರ್‌ನ್ನು ಸಮರ್ಪಕವಾಗಿ ಬಳಸಿ ನೀರನ್ನು ಶುದ್ದೀಕರಿಸದೇ ಸರಬರಾಜು ಮಾಡುತ್ತಿರುವ ನಗರಸಭೆ ಜನರಲ್ಲಿ ಈಗ ಜಾಗೃತಿ ಮೂಡಿಸಲು ಮುಂದಾಗಿದೆ. ನೀರನ್ನು ಕಾಯಿಸಿ, ಸೋಸಿ ಕುಡಿಯಿರಿ ಅಂತ ಹೇಳುತ್ತಿದೆ. ಆದರೆ ತಪ್ಪಿತಸ್ಥ ಅಧಿಕಾರಿಗಳ ವಿರುದ್ಧ ಕಠಿಣ ಕ್ರಮ ಜರುಗಲೇ ಬೇಕು ಅಂತ ಸಾರ್ವಜನಿಕರು ಒತ್ತಾಯಿಸಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *