ಪಾಲಿಕೆ ಚುನಾವಣಾ ಫಲಿತಾಂಶ- ಮತದಾರರಿಗೆ, ಪಕ್ಷದ ಹಿರಿಯ ನಾಯಕರಿಗೆ ಸಿಎಂ ಧನ್ಯವಾದ

Public TV
1 Min Read

ಬೆಂಗಳೂರು: ಮಾಜಿ ಮುಖ್ಯಮಂತ್ರಿ ಬಿ.ಎಸ್ ಯಡಿಯೂರಪ್ಪ ಅವರ ಆಶೀರ್ವಾದಿಂದ ಮಾಹನಗರ ಪಾಲಿಕೆ ಚುನಾವಣೆಯಲ್ಲಿ ಗೆದ್ದಿದ್ದೇವೆ ಎಂದು ಮುಖ್ಯಮಂತ್ರಿ ಬಸವರಾಜ್ ಬೊಮ್ಮಾಯಿ ಹೇಳಿದ್ದಾರೆ.

ಚುನಾವಣಾ ಫಲಿತಾಂಶ ಹೊರಬರುತ್ತಿದ್ದಂತೆಯೇ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಹುಬ್ಬಳ್ಳಿ- ಧಾರವಾಡದಲ್ಲಿ ಬಿಜೆಪಿಗೆ ಗೆಲುವು ಸಿಕ್ಕಿದೆ. ಬೆಳಗಾವಿ ಹಾಗೂ ಹುಬ್ಬಳ್ಳಿ-ಧಾರವಾಡದಲ್ಲಿ ಬಿಜೆಪಿ ಸ್ಪಷ್ಟವಾದ ಬಹುಮತ ಪಡೆದುಕೊಳ್ಳುವಂತಹ ಎಲ್ಲಾ ಸಾಧ್ಯತೆಗಳಿವೆ. ಕಲಬುರಗಿಯಲ್ಲಿ ಕೂಡ ನಂಬರ್ ಒನ್ ಪಾರ್ಟಿ ಆಗುವ ಲಕ್ಷಣಗಳು ಕಾಣಿಸುತ್ತಿವೆ ಎಂದರು.

ಎಲ್ಲಾ ಮಹಾನಗರ ಪಾಲಿಕೆಯ ಅಧ್ಯಕ್ಷರುಗಳಿಗೆ, ಹಿರಿಯ ನಾಯಕರು, ಶಾಸಕರು, ಮಂತ್ರಿಗಳು, ಕಾರ್ಯಕರ್ತರಿಗೆ ಹಾಗೂ ಸಂಪೂರ್ಣವಾಗಿ ಪ್ರಚಾರ ಮಾಡಿರುವಂತಹ ರಾಜ್ಯಾಧ್ಯಕ್ಷ ನಳಿನ್ ಕುಮಾರ್ ಕಟೀಲ್, ರವಿಕುಮಾರ್, ಅರುಣ್ ಕುಮಾರ್ ಅವರಿಗೆ ಧನ್ಯವಾದ ಸಮರ್ಪಿಸುವುದಾಗಿ ಸಿಎಂ ಹೇಳಿದರು.

ಮತದಾರರು ನಮ್ಮ ಮೇಲೆ ಮತ್ತೊಮ್ಮೆ ವಿಶ್ವಾಸ ಇಟ್ಟುಕೊಂಡಿದ್ದಾರೆ. ಕಳೆದ ಬಾರಿ ಬೆಳಗಾವಿಯಲ್ಲಿ ಬಹಳ ಕಡಿಮೆ ಸೀಟು ಇತ್ತು. ಆದರೆ ಈ ಬಾರಿ ಅದ್ಭುತ ಪ್ರದರ್ಶನ ಆಗಿದೆ. ಬಹಳಷ್ಟು ವಿಶ್ಲೇಷಣೆಗಳು ಕೇಳಿಬಂದಿದ್ದವು. ಆದರೆ ಅವೆಲ್ಲವನ್ನೂ ಮತದಾರರು ಹುಸಿಗೊಳಿಸಿದ್ದಾರೆ. ಬೆಳಗಾವಿ ಯಾವತ್ತಿಗೂ ಬಿಜೆಪಿ ಜೊತೆಗಿರುತ್ತದೆ ಅನ್ನೋದನ್ನು ಅಲ್ಲಿನ ಮತದಾರರು ಬಹಳ ಸ್ಪಷ್ಟವಾಗಿ ತೋರಿಸಿದ್ದಾರೆ. ಹಾಗೆಯೇ ಹುಬ್ಬಳ್ಳಿ-ಧಾರವಾಡ ಕೂಡ ಬಿಜೆಪಿ ಕೋಟೆಯಾಗಿದ್ದು, ಅದನ್ನು ಸುಭದ್ರವಾಗಿ ಇಟ್ಟುಕೊಳ್ಳುವಲ್ಲಿ ಯಶಸ್ವಿಯಾಗಿದ್ದೇವೆ ಎಂದರು.

ಕಲಬುರಗಿಯಲ್ಲೂ ಹೆಚ್ಚಿನ ಸಂಖ್ಯೆಯಲ್ಲಿ ಈಗಾಗಲೇ ಆಯ್ಕೆಯಾಗಿದ್ದೇವೆ. ಬಾಕಿಯಾಗಿರುವ ಇನ್ನಷ್ಟು ವಾರ್ಡ್ ಗಳಲ್ಲಿ ಅಲ್ಲಿ ಕೂಡ ಆಯ್ಕೆಯಾಗುವ ನಿರೀಕ್ಷೆ ಇದೆ. ಒಟ್ಟಾರೆಯಾಗಿ ಸರ್ಕಾರ ಬಂದು 1 ತಿಂಗಳಲ್ಲಿ ನಡೆದ ಈ ಚುನಾವಣೆಯಲ್ಲಿ ಪ್ರಥಮ ಸೂಚನೆಯನ್ನು ನೀಡಿದ್ದು, ಜನ ಮನ್ನಣೆ ನೀಡುವ ಮೂಲಕ ಸರ್ಕಾರಕ್ಕೆ ಬೆಂಬಲ ಕೊಟ್ಟಿದ್ದಾರೆ. ಇದು ಮುಂದಿನ ದಿನಗಳಿಗೆ ದಿಕ್ಸೂಚಿ ಆಗಿದ್ದು, ಯಡಿಯೂರಪ್ಪ ಅವರ ಆಶೀರ್ವಾದ ಹಾಗೂ ಅಮಿತ್ ಶಾ ಹಾಗೂ ಮೋದಿಯವರ ಹೆಸರು ಪ್ರೇರಣೆಯಿಂದ ಇಂದು ಗೆಲುವು ಸಾಧಿಸಿದ್ದೇವೆ ಎಂದು ತಿಳಿಸಿದರು. ಇದೇ ವೇಳೆ ಎಲ್ಲಾ ಮತದಾರರಿಗೆ ಅಭಿನಂದನೆಗಳನ್ನು ಸಿಎಂ ಸಲ್ಲಿಸಿದರು.

Share This Article
Leave a Comment

Leave a Reply

Your email address will not be published. Required fields are marked *