ಪೌರತ್ವ ತಿದ್ದುಪಡಿ ಮಸೂದೆಯ ಪ್ರತಿ ಹರಿದು ಹಾಕಿದ ಓವೈಸಿ

Public TV
2 Min Read

ನವದೆಹಲಿ: ಪೌರತ್ವ ತಿದ್ದುಪಡಿ ಮಸೂದೆಯನ್ನು ಸೋಮವಾರ ಗೃಹ ಸಚಿವ ಅಮಿತ್ ಶಾ ಲೋಕಸಭೆಯಲ್ಲಿ ಮಂಡಿಸಿದ್ದು, ಪಾಸ್ ಸಹ ಆಗಿದೆ. ಆದರೆ ಲೋಕಸಭೆಯಲ್ಲಿ ವಿರೋಧ ಪಕ್ಷಗಳು ಭಾರೀ ಗದ್ದಲ ಎಬ್ಬಿಸಿದ್ದು, ಎಐಎಂಐಎಂ ನಾಯಕ ಅಸಾದುದ್ದಿನ್ ಓವೈಸಿ ಮಸೂದೆಯ ಪ್ರತಿಯನ್ನೇ ಹರಿದು ಹಾಕುವ ಮೂಲಕ ತೀವ್ರ ಚರ್ಚೆಗೆ ಕಾರಣರಾಗಿದ್ದಾರೆ.

ಗೃಹ ಸಚಿವರು ಲೋಕಸಭೆಯಲ್ಲಿ ಮಸೂದೆ ಮಂಡಿಸುತ್ತಿದ್ದಂತೆ ವಿರೋಧ ಪಕ್ಷಗಳು ಕೋಲಾಹಲ ಎಬ್ಬಿಸಿವೆ. ಎಐಎಂಐಎಂ ಮುಖ್ಯಸ್ಥ ಅಸಾದುದ್ದೀನ್ ಲೋಕಸಭೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದು, ಮಸೂದೆಯ ಪ್ರತಿಯನ್ನು ಹರಿದು ಹಾಕಿದ್ದಾರೆ. ಈ ಮಸೂದೆಯ ಮೂಲಕ ಭಾರತವನ್ನು ವಿಭಾಗಿಸಲಾಗುತ್ತಿದೆ. ಹೀಗಾಗಿ ಈ ಮಸೂದೆಯನ್ನು ನಾನು ಹರಿದು ಹಾಕುತ್ತೇನೆ. ಇದು ಎರಡನೇ ವಿಭಜನೆಯಾಗಿದೆ ಎಂದು ಕಿಡಿಕಾರಿದ್ದಾರೆ.

ಇತ್ತ ಈಶ್ವಾನ್ಯ ರಾಜ್ಯಗಳಲ್ಲಿಯೂ ಸಹ ಈ ಕುರಿತು ಜನಾಕ್ರೋಶ ಹೆಚ್ಚಾಗುತ್ತಿದೆ. ಅಕ್ರಮ ವಲಸಿಗರನ್ನು ಧಾರ್ಮಿಕ ಆಧಾರದ ಮೇಲೆ ಹೊರತಾಗಿಯೂ ಗಡಿಪಾರು ಮಾಡುವ 1985ರ ಅಸ್ಸಾಂ ಒಪ್ಪಂದವನ್ನು ರದ್ದುಗೊಳಿಸಿ, ಮಸೂದೆಯನ್ನು ಅಂಗೀಕಾರ ಮಾಡಲಾಗುತ್ತಿದೆ ಎಂದು ಈಶಾನ್ಯ ರಾಜ್ಯಗಳಲ್ಲಿ ವಿದ್ಯಾರ್ಥಿ ಸಂಘಟನೆಗಳು ಸೇರಿದಂತೆ ವಿವಿಧ ಸಂಘಟನೆಗಳು ಪ್ರತಿಭಟನೆ ನಡೆಸುತ್ತಿವೆ.

ಮಸೂದೆ ಕುರಿತು ಈಶಾನ್ಯ ರಾಜ್ಯಗಳಲ್ಲಿನ ಬಹುತೇಕ ಜನ ವಿರೋಧ ವ್ಯಕ್ತಪಡಿಸಿದ್ದು, ಪ್ರತಿಭಟನೆ ನಡೆಸುತ್ತಿದ್ದಾರೆ. ಆರು ದಶಕಗಳ ಹಳೆಯ ಪೌರತ್ವ ಕಾಯ್ದೆಗೆ ತಿದ್ದುಪಡಿ ತರಲಾಗುತ್ತಿದ್ದು, ಬಾಂಗ್ಲಾದೇಶ, ಅಫ್ಘಾನಿಸ್ಥಾನ ಹಾಗೂ ಪಾಕಿಸ್ತಾನದ ಮುಸ್ಲಿಮೇತರರಿಗೆ ಭಾರತೀಯ ಪೌರತ್ವ ನೀಡುವುದು ತಿದ್ದುಪಡಿಯ ಉದ್ದೇಶವಾಗಿದೆ.

ಭಾರೀ ಚರ್ಚೆಗೆ ಕಾರಣವಾಗಿದ್ದ ಪೌರತ್ವ ತಿದ್ದುಪಡಿ ಮಸೂದೆಯು 293 ಮತಗಳಿಂದ ಲೋಕಸಭೆಯಲ್ಲಿ ಪಾಸ್ ಆಗಿದೆ. ಲೋಕಸಭೆಯಲ್ಲಿ ಸೋಮವಾರ ನಡೆದ ಪೌರತ್ವ ತಿದ್ದುಪಡಿ ಮಸೂದೆ ಚರ್ಚೆ ನಡೆಯಿತು. ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರು ಮಸೂದೆಯನ್ನು ಸದನದಲ್ಲಿ ಮಂಡಿಸಿ ಮತಕ್ಕೆ ಹಾಕಿದರು. ಆದರೆ ಇದಕ್ಕೆ ವಿಪಕ್ಷಗಳು ಭಾರೀ ವಿರೋಧ ವ್ಯಕ್ತಪಡಿಸಿ, ಇದು ಅಲ್ಪಸಂಖ್ಯಾತ ವಿರೋಧಿ ಎಂದು ಕರೆದರು. ಆರೋಪವನ್ನು ತಳ್ಳಿ ಹಾಕಿದ ಅಮಿತ್ ಶಾ, ಪೌರತ್ವ ತಿದ್ದುಪಡಿ ಮಸೂದೆಯು ಶೇ.0.001 ರಷ್ಟು ಕೂಡ ದೇಶದ ಅಲ್ಪಸಂಖ್ಯಾತ ಸಮುದಾಯದ ವಿರುದ್ಧವಿಲ್ಲ ಎಂದು ಸ್ಪಷ್ಟಪಡಿಸಿದರು.

ಮಸೂದೆ ಮಂಡನೆಗೂ ಮುನ್ನ ಮಾತನಾಡಿದ ಅಮಿತ್ ಶಾ, ನಿಮ್ಮ ಪ್ರತಿ ಪ್ರಶ್ನೆಗೂ ನಾವು ಉತ್ತರಿಸುತ್ತೇವೆ. ಆದರೆ ಸದನವನ್ನು ಬಹಿಷ್ಕರಿಸಿ ಹೊರ ನಡೆಯಬೇಡಿ. ಈ ಮಸೂದೆಯಲ್ಲಿ ಒಮ್ಮೆಯೂ ಮುಸ್ಲಿಂ ಸಮುದಾಯವನ್ನು ಉಲ್ಲೇಖಿಸಲಾಗಿಲ್ಲ ಎಂದು ಮನವಿ ಮಾಡಿಕೊಂಡರು. ಇದನ್ನು ಲೆಕ್ಕಿಸಿದ ವಿಪಕ್ಷಗಳ ಸಂಸದರು, ಮಸೂದೆ ಮಂಡಿಸುವುದನ್ನು ವಿರೋಧಿಸುತ್ತಲೇ ಇದ್ದರು. ಇದರಿಂದಾಗಿ ಸುಮಾರು ಒಂದು ಗಂಟೆ ಸುದೀರ್ಘ ಚರ್ಚೆಯಾಯಿತು.

ಕಾಂಗ್ರೆಸ್‍ನ ಸಂಸದ, ಮುಖಂಡ ಅಧೀರ್ ರಂಜನ್ ಚೌಧರಿ, ಎಐಎಂಐಎಂನ ಮುಖ್ಯಸ್ಥ ಅಸಾದುದ್ದೀನ್ ಓವೈಸಿ ಸೇರಿದಂತೆ ಅನೇಕ ಸಂಸದರು ಸದನದಲ್ಲಿ ಅಸಮಾಧಾನ ಹೊರಹಾಕಿದರು. ಈ ಎಲ್ಲ ಬೆಳವಣಿಗೆಯಿಂದಾಗಿ ಸ್ಪೀಕರ್ ಓಂ ಬಿರ್ಲಾ ಮಸೂದೆಯನ್ನು ಮಂಡಿಸಿ, ಮತದಾನಕ್ಕೆ ಹಾಕುವಂತೆ ನಿರ್ದೇಶನ ನೀಡಿದರು. ಮಸೂದೆಯನ್ನು ಮತಕ್ಕೆ ಹಾಕಿದಾಗ 375 ಸಂಸದರು ಮತದಾನದಲ್ಲಿ ಭಾಗವಹಿಸಿದ್ದರು. ಈ ಪೈಕಿ 293 ಸಂಸದರು ಮಸೂದೆ ಪರವಾಗಿ ಮತ ಹಾಕಿದರೆ, ಪ್ರತಿಪಕ್ಷದ 82 ಸಂಸದರು ವಿರೋಧವಾಗಿ ಮತ ಹಾಕಿದರು. ಪೌರತ್ವ ತಿದ್ದುಪಡಿ ಮಸೂದೆಯೂ ಬಹುಮತ ಪಡೆದು ಲೋಕಸಭೆಯಲ್ಲಿ ಪಾಸ್ ಆಯಿತು.

Share This Article
Leave a Comment

Leave a Reply

Your email address will not be published. Required fields are marked *