ಅಜಿತಾಬ್ ನಾಪತ್ತೆ ಪ್ರಕರಣಕ್ಕೆ ಟ್ವಿಸ್ಟ್: ಆಧ್ಯಾತ್ಮದ ಕಡೆಗೆ ಟೆಕ್ಕಿ ಚಿತ್ತ!

Public TV
2 Min Read

ಬೆಂಗಳೂರು: ನಗರದ ಟೆಕ್ಕಿ ಅಜಿತಾಬ್ ನಾಪತ್ತೆ ಪ್ರಕರಣ ರೋಚಕ ತಿರುವು ಪಡೆದುಕೊಂಡಿದ್ದು, ಬೇಕು ಅಂತಾಲೇ ನಾಪತ್ತೆಯಾಗಿರಬಹುದು ಎಂದು ತನಿಖೆ ನಡೆಸುತ್ತಿರುವ ಸಿಐಡಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಮೂಲತಃ ಬಿಹಾರದ ಪಾಟ್ನಾ ಮೂಲದ ಟೆಕ್ಕಿ ಅಜಿತಾಬ್ ಗೆ 25 ವರ್ಷವಾಗಿದ್ದು, ಆಧ್ಯಾತ್ಮ ಕಡೆ ಇನ್ನಿಲ್ಲದ ಒಲವು ಹೊಂದಿದ್ದರು. ಅಲ್ಲದೇ ತಮ್ಮ ಕೆಲ ಸ್ನೇಹಿತರಿಗೆ ಆರ್ ವಿಎಸ್(ರಾಜು ವಿಕಾಸ ಕೇಂದ್ರ)ದ ಚಿಂತನೆಗಳ ಬಗ್ಗೆ ಒಲವು ಬೆಳೆಸಿಕೊಳ್ಳುವಂತೆ ಸಲಹೆ ನೀಡುತ್ತಿದ್ದರು ಎಂದು ತನಿಖೆ ವೇಳೆ ತಿಳಿದು ಬಂದಿದೆ ಎಂದು ಸಿಐಡಿ ಮೂಲಗಳು ಪಬ್ಲಿಕ್ ಟಿವಿಗೆ ತಿಳಿಸಿವೆ.

ಆರ್ ವಿಎಸ್ ಆಧ್ಯಾತ್ಮ ಕೇಂದ್ರಗಳು ಭಾರತ ಸೇರಿದಂತೆ ವಿದೇಶದ ಹಲವು ಕಡೆಗಳಲ್ಲಿದ್ದು, ಸಾಕಷ್ಟು ಭಾರೀ ವಿದೇಶಗಳಲ್ಲಿರುವ ಆರ್ ವಿಎಸ್ ಆಶ್ರಮಗಳಿಗೆ ಹೋಗಿ ಬಂದಿದ್ದಾರೆ. ಇದಲ್ಲದೇ ಟೆಕ್ಕಿ ಮನೆಯಲ್ಲಿ ಮದುವೆ ವಿಚಾರ ಕೂಡ ಪ್ರಸ್ತಾಪ ಮಾಡಿದ್ದಾರೆ. ಮೊದಲೇ ಆಧ್ಯಾತ್ಮದ ಕಡೆ ಹೆಚ್ಚು ಒಲವು ತೋರಿದ್ದ ಟೆಕ್ಕಿ ಇದರಿಂದ ತಪ್ಪಿಸಿಕೊಳ್ಳಲು ತಾನೇ ಸುವ್ಯವಸ್ಥಿತವಾಗಿ ಪ್ಲಾನ್ ಮಾಡಿ ಮಿಸ್ಸಿಂಗ್ ಆಗಿರಬಹುದು ಎಂದು ಸಿಐಡಿ ಪೊಲೀಸರು ಅನುಮಾನ ವ್ಯಕ್ತಪಡಿಸಿದ್ದಾರೆ.

ಸಿಐಡಿ ಪೊಲೀಸರು ಈ ದಿಕ್ಕಿನಲ್ಲಿ ತನಿಖೆ ನಡೆಸುತ್ತಿದ್ದು, ಕೆಲ ದೇಶಿ ಆರ್ ವಿಎಸ್ ಆಧ್ಯಾತ್ಮ ಕೇಂದ್ರಗಳಲ್ಲಿ ತನಿಖೆ ನಡೆಸಿದ್ದಾರೆ. ತನಿಖೆ ವೇಳೆ ದೇಶಿ ಆಧ್ಯಾತ್ಮ ಕೇಂದ್ರಗಳು ಟೆಕ್ಕಿ ಬಗ್ಗೆ ಸರಿಯಾದ ಮಾಹಿತಿಯನ್ನು ನೀಡಲು ನಿರಾಕರಿಸಿವೆ. ಅಲ್ಲದೇ ವಿದೇಶಿ ಆಧ್ಯಾತ್ಮ ಕೇಂದ್ರಗಳಿಗೆ ಹೋಗಿ ತನಿಖೆ ನಡೆಸಲು ಮುಂದಾಗಲು ಅರ್ಥಿಕವಾಗಿ ತೊಂದರೆಯಿದೆ ಎಂದು ಸಿಐಡಿ ತಿಳಿಸಿದೆ.

ಏನಿದು ಪ್ರಕರಣ?
ಬೆಳ್ಳಂದೂರಿನ ಬ್ರಿಟೀಷ್ ಟೆಲಿಕಾಂ ನಲ್ಲಿ ಐದು ವರ್ಷದಿಂದ ಕೆಲಸ ಮಾಡುತ್ತಿದ್ದ ಬಿಹಾರ ಮೂಲದ ಅಜಿತಾಬ್ ತನ್ನ ಸಿಯಾಜ್ ಕಾರನ್ನು ಮಾರಾಟ ಸಂಬಂಧ ಓಎಲ್ ಎಕ್ಸ್ ನಲ್ಲಿ ಮಾಹಿತಿ ಹಾಕಿದ್ದರು. ಓಎಲ್ ಎಕ್ಸ್ ನಲ್ಲಿ ಪ್ರಕಟಿಸಿದ ಬಳಿಕ ಕುಮಾರ್ ಅಜಿತಾಬ್ ಕರೆ ಬಂದಾಗಲೆಲ್ಲ ಕಾರು ಸಮೇತ ಹೊರ ಹೋಗಿ ಬರುತ್ತಿದ್ದರು. ಹೀಗೆ ಕಳೆದ ವರ್ಷ ಡಿಸೆಂಬರ್ 18 ರಂದು ಅವರ ಮೊಬೈಲ್ ಗೆ ಕರೆ ಬಂದಿತ್ತು. ಎಂದಿನಂತೆಯೇ ಅಜಿತಾಬ್, ಕೆಎ 03 ಎನ್‍ಎ 1751 ನಂಬರಿನ ತನ್ನ ಸಿಯಾಜ್ ಕಾರಿನಲ್ಲಿ ಹೊರ ಹೋಗಿದ್ದರು. ಹೊರ ಹೋದವರು ಇದೂವರೆಗೂ ಎಲ್ಲಿದ್ದಾರೆ ಎನ್ನುವುದು ತಿಳಿದು ಬಂದಿಲ್ಲ.

ವೈಟ್ ಫಿಲ್ಡ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಅಜಿತಾಬ್ ನಾಪತ್ತೆಯಾಗಿದ್ದು, ಅವರ ಪತ್ತೆಗಾಗಿ ವಿಶೇಷ ತನಿಖಾ ತಂಡ ರಚನೆ ಮಾಡಲಾಗಿತ್ತು. ನಂತರ ಪೋಷಕರ ಒತ್ತಡ ಹೆಚ್ಚಾಗುತ್ತಿದ್ದಂತೆ ಈ ಕೇಸನ್ನು ಸಿಐಡಿಗೆ ವರ್ಗಾವಣೆ ಮಾಡಲಾಗಿತ್ತು. ತನಿಖೆ ಕೈಗೊಂಡ ಸಿಐಡಿ ಪೊಲೀಸರು ಸ್ಫೋಟಕ ಮಾಹಿತಿಯನ್ನು ಕಲೆಹಾಕಿದ್ದಾರೆ.

Share This Article
1 Comment

Leave a Reply

Your email address will not be published. Required fields are marked *