ʻಸಾಂತಾಕ್ಲಾಸ್‌ʼನಲ್ಲಿ ವರ್ಷಪೂರ್ತಿ ಕ್ರಿಸ್‌ಮಸ್‌ ಸಂಭ್ರಮ – ವಿಲೇಜ್‌ ಇರೋದಾದ್ರೂ ಎಲ್ಲಿ?

Public TV
2 Min Read

ಡಿಸೆಂಬರ್‌ 25 ಬಂತೆಂದರೆ ಸಾಕು ಇಡೀ ವಿಶ್ವದಾದ್ಯಂತ ಇರುವ ಕ್ರೈಸ್ತ ಬಾಂಧವರು ಸಂಭ್ರಮದಿಂದ ಕ್ರಿಸ್‌ಮಸ್‌ ಹಬ್ಬ ಆಚರಿಸುತ್ತಾರೆ. ಪುಟ್ಟ ಪುಟ್ಟ ಮಕ್ಕಳು ಈ ದಿನಕ್ಕಾಗಿ, ಈ ದಿನದಂದು ಸಾಂತಕ್ಲಾಸ್‌ಗಾಗಿ ತುದಿಗಾಲಲ್ಲಿ ನಿಂತು ಕಾಯುತ್ತಿರುತ್ತಾರೆ. ಏಕೆಂದರೆ ಸಾಂತಾಕ್ಲಾಸ್‌ ನಮಗೆ ವಿಶೇಷ ಹುಡುಗೊರೆ ನೀಡುತ್ತಾರೆ ಎಂಬುದು ಅವರ ನಂಬಿಕೆ. ಆದ್ರೆ ವರ್ಷಪೂರ್ತಿ ಕ್ರಿಸ್ಮಸ್‌ ಸಂಭ್ರಮ ಮನೆ ಮಾಡಿರುವುದು ಸಾಂತಾಕ್ಲಾಸ್‌ ವಿಲೇಜ್‌ನಲ್ಲಿ.. ಹೀಗೊಂದು ಹಳ್ಳಿ ಇದೆಯಾ ಎಂದು ಅಚ್ಚರಿಯೂ ಸಹ ಆಗಬಹುದು. ಆದ್ರೂ ನೀವು ನಂಬಲೇಬೇಕು….

ಈ ಹಳ್ಳಿ ಹೆಸರೇ ಸಾಂತಾಕ್ಲಾಸ್‌ ವಿಲೇಜ್‌.. ಸುಂದರ ಹಿಮಚ್ಛಾದಿತ ಪ್ರದೇಶಗಳ ನಡುವೆ ಇರುವ ಹಳ್ಳಿ ಇರುವುದೆಲ್ಲಿ? ಇದರ ವೈಶಿಷ್ಟ್ಯ ಏನು? ವರ್ಷಪೂರ್ತಿ ಇಲ್ಲಿ ಕ್ರಿಸ್ಮಸ್‌ ಆಚರಣೆ ಮಾಡುವುದೇಕೆ ಎಂಬುದುನ್ನು ತಿಳಿಯೋಣ….

ಸಾಂತಾಕ್ಲಾಸ್ ವಿಲೇಜ್ ಎಲ್ಲಿದೆ?
ಸಾಂತಾಕ್ಲಾಸ್ ವಿಲೇಜ್ ಇರುವುದು ಫಿನ್‌ಲ್ಯಾಂಡ್ ರೊವಾನಿಮಿಯಲ್ಲಿ. ಇದು ವರ್ಷವಿಡೀ ಹಿಮದಿಂದ ಆವೃತವಾಗಿರುವ ಪ್ರದೇಶವಾಗಿದೆ. ಸಾಂತಾಕ್ಲಾಸ್ ವಿಲೇಜ್ ಅನ್ನೋದು ಅಮ್ಯೂಸ್‌ಮೆಂಟ್ ಪಾರ್ಕ್. ಫಿನ್‌ಲ್ಯಾಂಡ್‌ನ ಲಾಪ್‌ಲ್ಯಾಂಡ್ ಪ್ರಾಂತ್ಯದಲ್ಲಿ 1985ರಲ್ಲಿ ಸಾಂತಾಕ್ಲಾಸ್ ವಿಲೇಜ್ ಅನ್ನು ಸ್ಥಾಪಿಸಲಾಯಿತು. ಸಾಂತಾಕ್ಲಾಸ್ ಗ್ರಾಮವು ರೊವಾನಿಮಿಯ ಈಶಾನ್ಯಕ್ಕೆ ಸುಮಾರು 8 ಕಿಮೀ ಮತ್ತು ರೊವಾನಿಮಿ ವಿಮಾನ ನಿಲ್ದಾಣದಿಂದ ಸುಮಾರು 2 ಕಿಮೀ ದೂರದಲ್ಲಿದೆ.

ಈ ತಾಣದಲ್ಲಿ ವರ್ಷವಿಡೀ ಸಾಂತಾಕ್ಲಾಸ್‌ನನ್ನು ನೋಡಬಹುದು. ಮಾತ್ರವಲ್ಲಿ ಇಲ್ಲಿಗೆ ಭೇಟಿ ನೀಡಿದರೆ ಮಕ್ಕಳು ಸಾಂತಾಕ್ಲಾಸ್‌ನಿಂದ ಉಡುಗೊರೆಯನ್ನೂ ಪಡೆಯಬಹುದು. ಪ್ರತಿ ವರ್ಷ ಪ್ರಪಂಚದಾದ್ಯಂತದ ಜನರು ಸಾಂತಾನನ್ನು ಭೇಟಿ ಮಾಡಲು ಇಲ್ಲಿಗೆ ಬರುತ್ತಾರೆ. ಸಾಂತಾಕ್ಲಾಸ್ ಗ್ರಾಮದಲ್ಲಿ ಕ್ರಿಸ್ಮಸ್ ಆಚರಣೆಗಳು ಡಿಸೆಂಬರ್ 23 ರಿಂದ ಪ್ರಾರಂಭವಾಗುತ್ತವೆ. ಈ ದಿನದಿಂದ ಸಾಂತಾಕ್ಲಾಸ್ ಜನರನ್ನು ಭೇಟಿಯಾಗಲು ಹೊರಡುವುದು ಇಲ್ಲಿನ ಆಚರಣೆ.

ರೊವಾನಿಮಿ ಗ್ರಾಮದ ವೈಶಿಷ್ಟ್ಯ ಗೊತ್ತೇ?
ರೊವಾನಿಮಿ ಗ್ರಾಮವು ಮರದ ಗುಡಿಸಲುಗಳನ್ನು ಒಳಗೊಂಡಿದೆ. ಇಲ್ಲಿಗೆ ಭೇಟಿ ನೀಡಿದರೆ ಎಲ್ಲಿ ನೋಡಿದರೂ ಅಕ್ಷರಗಳು ಮತ್ತು ಅಂಕಿಗಳನ್ನು ನೋಡಬಹುದು. ವಿಶೇಷವೆಂದರೆ ಇಲ್ಲಿ ಬರುವ ಪತ್ರಗಳನ್ನು ಸಾಂತಾಕ್ಲಾಸ್ ಕೂಡ ಓದಿ ಮಕ್ಕಳಿಗೆ, ದೊಡ್ಡವರಿಗೆ ಸ್ಪಂದಿಸುತ್ತಾರೆ. ಅದಕ್ಕಾಗಿಯೇ ಪ್ರಪಂಚದಾದ್ಯಂತದ ಹಲವರು ಇಲ್ಲಿನ ಸಾಂತಾನಿಗೆ ಪತ್ರಗಳನ್ನು ಕಳುಹಿಸುತ್ತಾರೆ. ಈ ಪತ್ರಗಳನ್ನು ಸಂಗ್ರಹಿಸಲು ತಂಡವೊಂದು ಕೆಲಸ ಮಾಡುತ್ತದೆ. ನಂತರ ಅವರು ಅವುಗಳನ್ನು ಸಾಂಟಾಗೆ ತಲುಪಿಸುವ ಕೆಲಸ ಮಾಡುತ್ತಾರೆ.

ನೀವು ಫಿನ್‌ಲ್ಯಾಂಡ್‌ಗೆ ಹೋದರೆ, ಖಂಡಿತವಾಗಿಯೂ ಕೆಲವು ಸ್ಥಳಗಳಿಗೆ ಭೇಟಿ ನೀಡಬೇಕು. ಸಾಂತಾಕ್ಲಾಸ್ ವಿಲೇಜ್, ಹೆಲ್ಸಿಂಕಿ, ಲೆವಿ, ಟರ್ಕು, ಪೂರ್ವು, ಸೈಮಾ ಸರೋವರ, ಫಿನ್‌ಲ್ಯಾಂಡ್ ರಾಷ್ಟ್ರೀಯ ಉದ್ಯಾನವನ, ಸೈವೊಲಿನಾ, ಸುವೊನ್ಸಿನ್ನಾ ಕ್ಯಾಸಲ್‌ನಂತಹ ಅನೇಕ ಸುಂದರ ಸ್ಥಳಗಳಿಗೆ ಭೇಟಿ ನೀಡಬಹುದು. ಬೇಸಿಗೆ ರಜೆ ಸಾಂತಾಕ್ಲಾಸ್ ವಿಲೇಜ್‌ಗೆ ಭೇಟಿ ಮಾಡಲು ಹೇಳಿ ಮಾಡಿಸಿದ ಸಮಯ.

Share This Article