‘AP’ ಅಂದ್ರೆ ಅಹ್ಮದ್ ಪಟೇಲ್, ‘FAM’ ಅಂದ್ರೆ ಫ್ಯಾಮಿಲಿ – ಅಗಸ್ಟಾ ಹಗರಣದ ಚಾರ್ಜ್‍ಶೀಟ್‍ನಲ್ಲಿ ಇಡಿ ಉಲ್ಲೇಖ

Public TV
3 Min Read

ನವದೆಹಲಿ: ಬಹುಕೋಟಿ ಅಗಸ್ಟಾ ಹೆಲಿಕಾಪ್ಟರ್ ಖರೀದಿ ಹಗರಣ ಸಂಬಂಧ ಜಾರಿ ನಿರ್ದೇಶನಾಲಯ ಸಿಬಿಐ ವಿಶೇಷ ನ್ಯಾಯಾಲಯಕ್ಕೆ 52 ಪುಟಗಳ ಹೆಚ್ಚುವರಿ ಚಾರ್ಜ್‍ಶೀಟ್ ಸಲ್ಲಿಸಿದೆ. ಚಾರ್ಜ್‍ಶೀಟ್‍ನಲ್ಲಿ ಹಗರಣದ ಆರೋಪಿ ಮಧ್ಯವರ್ತಿ ಕ್ರಿಶ್ಚಿಯನ್ ಮೈಕೆಲ್ ಡೈರಿಯಲ್ಲಿ ಬರೆದುಕೊಂಡಿದ್ದ ಕೋಡ್ ಗಳಲ್ಲಿ ಗಣ್ಯ ರಾಜಕಾರಣಗಳಿಗೆ ನೀಡಿರುವ ಕಿಕ್ ಬ್ಯಾಕ್ ಹಣವನ್ನು ಉಲ್ಲೇಖಿಸಿದೆ.

ಪ್ರಮುಖವಾಗಿ ಡೈರಿಯಲ್ಲಿ ಉಲ್ಲೇಖ ಮಾಡಿದ್ದ ‘AP’ ಕೋಡ್ ಅಂದರೆ ಅಹಮದ್ ಪಟೇಲ್ ಎಂದು ತಿಳಿಸಿದ್ದು, ಉಳಿದಂತೆ ‘FAM’ ಹೆಸರು ಉಲ್ಲೇಖವಾಗಿದ್ದು, ಆರ್‍ಜಿ ಯಾರು ಎನ್ನುವುದನ್ನು ಪತ್ತೆ ಹಚ್ಚುತ್ತೇವೆ ಎಂದು ತಿಳಿಸಿದೆ. ಈ ವ್ಯಕ್ತಿಗೆ 50 ಕೋಟಿ ರೂ. ಗಳನ್ನು ಸಂದಾಯ ಮಾಡಲಾಗಿರುವ ಮಾಹಿತಿ ಡೈರಿಯಲ್ಲಿ ಸಿಕ್ಕಿದೆ ಎಂದು ಇಡಿ ಚಾರ್ಜ್‍ಶೀಟ್ ನಲ್ಲಿ ತಿಳಿಸಿದೆ.

ಚಾರ್ಜ್‍ಶೀಟ್‍ನಲ್ಲಿ ಏನಿದೆ?
‘AP’ ಎಂದರೆ ಅಹ್ಮದ್ ಪಟೇಲ್, ‘FAM’ ಅಂದರೆ ಫ್ಯಾಮಿಲಿ ಎಂದು ವಿಚಾರಣೆಯ ವೇಳೆ ಮೈಕಲ್ ಹೇಳಿರುವುದಾಗಿ ಇಡಿ ಚಾರ್ಜ್‍ಶೀಟ್‍ನಲ್ಲಿ ಉಲ್ಲೇಖಿಸಿದೆ. ಒಪ್ಪಂದ ಜಾರಿ ಮಾಡುವ ವೇಳೆ ರಕ್ಷಣಾ ಅಧಿಕಾರಿಗಳು, ಮಧ್ಯವರ್ತಿಗಳು, ಆಡಳಿತಾಧಿಕಾರಿಗಳು, ಆಡಳಿತ ಪಕ್ಷದ ಪ್ರಮುಖ ನಾಯಕರಿಗೆ ಕಿಕ್ ಬ್ಯಾಕ್ ಹಣವನ್ನು ನೀಡಲಾಗಿದೆ. ಈ ಹಣ ಹವಾಲ ರೂಪದಲ್ಲಿ ಸಲ್ಲಿಕೆಯಾಗಿದೆ ಎಂದು ಅಕ್ರಮ ಹಣ ವರ್ಗಾವಣೆ ನಿಷೇಧ ಕಾಯ್ದೆ (ಪಿಎಂಎಲ್ ಎ) ಅಡಿಯಲ್ಲಿ ಇಡಿ ಸಲ್ಲಿಸಿದ ಚಾರ್ಜ್ ಶೀಟ್ ನಲ್ಲಿ ವಿವರಿಸಲಾಗಿದೆ.

ಡೈರಿಯಲ್ಲಿ ಹಣ ವರ್ಗಾವಣೆ ಆಗಿರುವ ಬಗ್ಗೆ ಮಾಹಿತಿಯನ್ನು ಸಂಕೀರ್ಣ ಮಾದರಿಯಲ್ಲಿ ನಮೂದಿಸಲಾಗಿದೆ. ಅಲ್ಲದೇ ಈ ಡೀಲ್ ಆರೋಪಿಯಾಗಿರುವ ಅಂದಿನ ಏರ್‍ಚೀಫ್ ಮಾರ್ಷಲ್ ಎಸ್‍ಪಿ ತ್ಯಾಗಿ ಸೇರಿದಂತೆ ಇಡಿ, ಸಿಬಿಐ ಅಧಿಕಾರಿಗಳ ಮೂಲವೇ ನಡೆದಿದೆ ಎಂದು ತಿಳಿಸಲಾಗಿದೆ.

ಇಡಿ 52 ಪುಟಗಳ ಚಾರ್ಜ್ ಶೀಟ್ ನೊಂದಿಗೆ 3 ಸಾವಿರ ಪುಟಗಳ ದಾಖಲೆಗಳನ್ನು ಕೂಡ ನ್ಯಾಯಾಲಯಕ್ಕೆ ಸಲ್ಲಿಸಿದೆ. ಈ ಚಾರ್ಜ್ ಶೀಟ್‍ನಲ್ಲಿ ಮೈಕಲ್ ವ್ಯವಹಾರ ಪಾಲುದಾರ ಡೇವಿಡ್ ಸ್ಯಾಮ್ಸ್ ಸೇರಿದಂತೆ ಗ್ಲೋಬಲ್ ಸೇವೆ ನೀಡುತ್ತಿರುವ ಎಫ್‍ಝಡ್‍ಇ, ಯುಎಇ ಸಂಸ್ಥೆಗಳು ಸೇರಿದಂತೆ 38 ಆರೋಪಿಗಳ ಹೆಸರನ್ನು ಉಲ್ಲೇಖಿಸಲಾಗಿದೆ.

ಲೋಕಸಭಾ ಚುಣಾವಣೆಯ ಸಮಯದಲ್ಲೇ ಇಡಿ ಚಾರ್ಜ್ ಶೀಟ್ ಸಲ್ಲಿಕೆ ಮಾಡಿರುವುದು ರಾಜಕೀಯ ಕೆಸರೆರಾಚಟಕ್ಕೆ ಕಾರಣವಾಗುವ ನಿರೀಕ್ಷೆ ಇದ್ದು, ಪ್ರಧಾನಿ ನರೇಂದ್ರ ಮೋದಿ ಅವರು ತಮ್ಮ ಭಾಷಣದ ನಡುವೆ ತಿಹಾರ್ ಜೈಲಿನ ಬಗ್ಗೆ ಉಲ್ಲೇಖ ಮಾಡಿ ಟೀಕೆ ಮಾಡಿದ್ದರು. ಅಲ್ಲದೇ ಕಾಪ್ಟರ್ ಡೀಲ್ ನಲ್ಲಿ ಆಂಗ್ಲೋ ಇಟಾಲಿಯನ್ ಸಂಸ್ಥೆ 70 ದಶಲಕ್ಷ ಯುರೋಗಳನ್ನು ನೀಡಿದೆ ಎಂದು ಆರೋಪಿಸಿದ್ದರು.

ಮೈಕಲ್ ಯಾರು?
ದುಬೈನಲ್ಲಿ ನೆಲೆಸಿದ್ದ ಬ್ರಿಟನ್ ಪ್ರಜೆ ಮೈಕಲ್‍ನನ್ನು ಗಡಿಪಾರು ಮಾಡುವಂತೆ ಭಾರತ ಸರ್ಕಾರ ಯುಎಇಗೆ ಮನವಿ ಸಲ್ಲಿಸಿತ್ತು. ಇಂಟರ್ ಪೋಲ್ ರೆಡ್ ಕಾರ್ನರ್ ನೋಟಿಸ್ ಸಹ ಜಾರಿ ಮಾಡಿತ್ತು. ಇದನ್ನು ವಿರೋಧಿಸಿ ಮೈಕಲ್ ದುಬೈ ಕೋರ್ಟ್ ಮೊರೆ ಹೋಗಿದ್ದ. ಆದರೆ ಕೋರ್ಟ್ ಆತನ ಕೋರಿಕೆಯನ್ನು ತಿರಸ್ಕರಿಸಿತ್ತು. ಈ ಹಿನ್ನೆಲೆಯಲ್ಲಿ ಯುಎಇ ಸರ್ಕಾರ ಮೈಕಲ್ ನನ್ನು ಡಿಸೆಂಬರ್ ಮೊದಲ ವಾರದಲ್ಲಿ ಗಡಿಪಾರು ಮಾಡಿತ್ತು.

ಏನಿದು ಪ್ರಕರಣ?
ವಿವಿಐಪಿ ವ್ಯಕ್ತಿಗಳ ಪ್ರಯಾಣಕ್ಕೆ ಇಟಲಿಯ ಫಿನ್‍ಮೆಕ್ಯಾನಿಕಾ ಕಂಪೆನಿಯ ಅಂಗಸಂಸ್ಥೆಯಾದ ಅಗಸ್ಟಾ ವೆಸ್ಟ್ ಲ್ಯಾಂಡ್ ಕಂಪನಿಯ ಜೊತೆ 2010ರಲ್ಲಿ 12 ಹೆಲಿಕಾಪ್ಟರ್ ಖರೀದಿಸಲು ಯುಪಿಎ ಸರ್ಕಾರ 3,600 ಕೋಟಿ ರೂ. ಒಪ್ಪಂದ ಮಾಡಿಕೊಂಡಿತ್ತು. 2013ರಲ್ಲಿ ಈ ಲಂಚದ ಆರೋಪ ಕೇಳಿ ಬಂದ ಕಾರಣ ಸರ್ಕಾರ 2014ರಲ್ಲಿ ಒಪ್ಪಂದವನ್ನು ರದ್ದು ಮಾಡಿತ್ತು. ಹಗರಣ ಬಯಲಿಗೆ ಬಂದ ಬಳಿಕ 1818 ಕೋಟಿ ರೂ. ಭಾರತ ಮರು ವಶಪಡಿಸಿಕೊಂಡಿದೆ. ಈ ಮೂಲಕ ಒಟ್ಟು 2,068 ಕೋಟಿ ರೂ. ವಾಪಸ್ ಪಡೆದುಕೊಳ್ಳುವಲ್ಲಿ ಭಾರತ ಯಶಸ್ವಿಯಾಗಿತ್ತು. ಈ ನಿಟ್ಟಿನಲ್ಲಿ ಒಪ್ಪಂದ ಕುದುರಿಸುವ ಉದ್ದೇಶದಿಂದ ಆಗಸ್ಟಾ ವೆಸ್ಟ್‍ಲ್ಯಾಂಡ್‍ನಿಂದ 225 ಕೋಟಿ ರೂ. ಹಣವನ್ನು ಮೈಕಲ್ ಪಡೆದಿದ್ದ ಎನ್ನುವ ಆರೋಪ ಕೇಳಿಬಂದಿದೆ. ಆದರೆ ಆ ಹಣವನ್ನು ಮೈಕಲ್ ಭಾರತದ ಕೆಲವು ರಾಜಕಾರಣಿಗಳು ಮತ್ತು ಅಧಿಕಾರಿಗಳಿಗೆ ಲಂಚ ನೀಡುವ ಉದ್ದೇಶದಿಂದ ಪಡೆದಿದ್ದ ಎನ್ನುವ ಆರೋಪ ಕೇಳಿ ಬಂದಿದೆ.

ತ್ಯಾಗಿ ಮೇಲಿದ್ದ ಆರೋಪ ಏನು?
ವಿವಿಐಪಿ ಹೆಲಿಕಾಪ್ಟರ್ ಖರೀದಿ ಸಂಬಂಧ ಸರ್ಕಾರ ಕರೆದ ಹರಾಜು ಪ್ರಕ್ರಿಯೆಯಲ್ಲಿ ಹೆಲಿಕಾಪ್ಟರ್ ಹಾರಾಟದ ಎತ್ತರದ ಮಿತಿಯನ್ನು 6 ಸಾವಿರ ಮೀಟರ್ ನಿಂದ 4,500 ಮೀಟರ್ ಗೆ(15,000 ಅಡಿಗಳಿಗೆ) ವಾಯುಸೇನೆ ಇಳಿಸಿತ್ತು. ಆಗಸ್ಟಾ ಕಂಪನಿ ನೆರವಾಗುವ ಉದ್ದೇಶದಿಂದಲೇ ಎಸ್‍ಪಿ ತ್ಯಾಗಿ ಅವರು ಎತ್ತರದ ಮಿತಿಯನ್ನು ಇಳಿಸಿದ್ದಾರೆ. ಅಷ್ಟೇ ಅಲ್ಲದೇ ಈ ಒಪ್ಪಂದಕ್ಕೆ ಸಂಬಂಧಿಸಿದಂತೆ ಮಧ್ಯವರ್ತಿ ಜೊತೆ ಎಸ್‍ಪಿ ತ್ಯಾಗಿ ಮಾತುಕತೆ ನಡೆಸಿ ಕಿಕ್‍ಬ್ಯಾಕ್ ಪಡೆದುಕೊಂಡಿದ್ದಾರೆ ಎನ್ನುವ ಆರೋಪ ಕೇಳಿಬಂದಿತ್ತು.

Share This Article
Leave a Comment

Leave a Reply

Your email address will not be published. Required fields are marked *