ಕುರಾನ್‌ ಅಪವಿತ್ರದ ಆರೋಪ- ಪಾಕ್‌ನಲ್ಲಿ ಕ್ರಿಶ್ಚಿಯನ್‌ ವೃದ್ಧನ ಮೇಲೆ ಮಾರಣಾಂತಿಕ ಹಲ್ಲೆ, ಸಾವು

Public TV
2 Min Read

ಲಾಹೋರ್: ಪಾಕಿಸ್ತಾನದ (Pakistan) ಪಂಜಾಬ್ ಪ್ರಾಂತ್ಯದಲ್ಲಿ ಕುರಾನ್  ಅಪವಿತ್ರಗೊಳಿಸಿದ್ದಾರೆ ಎನ್ನುವ ಆರೋಪದಡಿ ಇಸ್ಲಾಮಿಸ್ಟ್ ತೆಹ್ರೀಕ್-ಎ-ಲಬ್ಬೈಕ್ ಪಾಕಿಸ್ತಾನ್ (TLP) ಗುಂಪೊಂದು ಕ್ರಿಶ್ಚಿಯನ್ ವೃದ್ಧರೊಬ್ಬರ ಮೇಲೆ ಮಾರಣಾಂತಿಕವಾಗಿ ಹಲ್ಲೆಗೈದ ಘಟನೆ ನಡೆದಿದೆ.

ಘಟನೆಯಿಂದ ಗಂಭೀರ ಗಾಯಗೊಂಡ ವೃದ್ಧ ಸಾವನ್ನಪ್ಪಿರುವುದಾಗಿ ಪೊಲೀಸರು ಸೋಮವಾರ ತಿಳಿಸಿದ್ದಾರೆ. ಧರ್ಮನಿಂದೆಯ ಕೃತ್ಯಗಳ ಆರೋಪ ಹೊತ್ತಿರುವ ಜನರನ್ನು ಮುಲಾಜಿಲ್ಲದೇ ಹತ್ಯೆ ಮಾಡುವ ಮೂಲಕ ಪಾಕ್‌ನಲ್ಲಿ ಇಸ್ಲಾಮಿಸ್ಟ್‌ಗಳು ಆಗಾಗ್ಗೆ ಕಾನೂನು ಕೈಗೆತ್ತಿಕೊಳ್ಳುತ್ತಾರೆ.

ಈ ಘಟನೆ ಲಾಹೋರ್‌ನಿಂದ ಸುಮಾರು 200 ಕಿ.ಮೀ ದೂರದಲ್ಲಿರುವ ಪಂಜಾಬ್‌ನ ಸರ್ಗೋಧಾ ಜಿಲ್ಲೆಯ ಮುಜಾಹಿದ್ ಕಾಲೋನಿಯಲ್ಲಿ ನಡೆದಿದೆ. TLP ನೇತೃತ್ವದ ಗುಂಪು ಕೆಲವು ಕ್ರಿಶ್ಚಿಯನ್ ಸಮುದಾಯದ ಸದಸ್ಯರ ಮೇಲೆ ದಾಳಿ ಮಾಡಿದೆ. ಇದರಿಂದ ಇಬ್ಬರು ಕ್ರಿಶ್ಚಿಯನ್ನರು ಹಾಗೂ 10 ಮಂದಿ ಪೊಲೀಸರು ಗಾಯಗೊಂಡಿದ್ದಾರೆ. ಅಲ್ಲದೇ ಈ ಗುಂಪು ಕ್ರಿಶ್ಚಿಯನ್ನರಿಗೆ ಸೇರಿದ ಆಸ್ತಿಯನ್ನು ಸಹ ದೋಚಿದೆ ಎಂಬುದಾಗಿ ವರದಿಯಾಗಿದೆ.

ನಡೆದಿದ್ದೇನು..?: ಶನಿವಾರ ಬೆಳಗ್ಗೆ ಕೆಲವು ಯುವಕರು ಮುಜಾಹಿದ್ ಕಾಲೋನಿಯಲ್ಲಿ ಕ್ರಿಶ್ಚಿಯನ್ ಸಮುದಾಯದ ಹಿರಿಯ ವ್ಯಕ್ತಿ ನಜೀರ್ ಗಿಲ್ ಮಸಿಹ್ ಅಲಿಯಾಸ್ ಲಾಜರ್ ಮಸಿಹ್, ಕುರಾನ್ ಅನ್ನು ಅಪವಿತ್ರಗೊಳಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಈ ಬೆನ್ನಲ್ಲೇ TLP ನೇತೃತ್ವದ ಗುಂಪೊಂದು ನಜೀರ್ ಅವರ ನಿವಾಸ ಮತ್ತು ನಜೀರ್‌ ನೇತೃತ್ವದ ಇಂಡಸ್ಟ್ರಿ ಕಡೆಗೆ ಧಾವಿಸಿತ್ತು. ಅಲ್ಲದೇ ಏಕಾಏಕಿ ಶೂ ಫ್ಯಾಕ್ಟರಿ ಮತ್ತು ಅವರ ಮನೆಗೆ ಬೆಂಕಿ ಹಚ್ಚಿದೆ.

ಕ್ರಿಶ್ಚಿಯನ್ನರ ಒಡೆತನದ ಕೆಲವು ಅಂಗಡಿಗಳನ್ನು ಧ್ವಂಸಗೊಳಿಸಿತು. ಇತ್ತ ಪೊಲೀಸರು ಘಟನಾ ಸ್ಥಳಕ್ಕೆ ಧಾವಿಸುತ್ತಿದ್ದಂತೆಯೇ ಗುಂಪು ವೃದ್ಧನ ಮೇಲೆ ಮನಬಂದಂತೆ ಥಳಿಸಿದೆ. ಘಟನೆಯಿಂದ ಚಿಂತಾಜನಕ ಸ್ಥಿತಿಯಲ್ಲಿದ್ದ ನಜೀರ್‌ ಅವರನ್ನು ಕೂಡಲೇ ಆಸ್ಪತ್ರೆಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಭಾನುವಾರ ಮೃತಪಟ್ಟಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ. ಇದನ್ನೂ ಓದಿ: ಸಿಕ್ಸರ್‌ ಬಾರಿಸಿದ 7 ಸೆಕೆಂಡುಗಳಲ್ಲಿ ಹೃದಯಾಘಾತ – ಮೈದಾನದಲ್ಲೇ ಜೀವಬಿಟ್ಟ ಕ್ರಿಕೆಟಿಗ

ನಜೀರ್‌ ಸಾವನ್ನು ಅವರ ಸಂಬಂಧಿ ಇರ್ಫಾನ್ ಗಿಲ್ ಮಸಿಹ್ ಖಚಿತಪಡಿಸಿದ್ದಾರೆ. ತನ್ನ ಮಾವ 4 ವರ್ಷಗಳ ನಂತರ ದುಬೈನಿಂದ ಹಿಂದಿರುಗಿದ್ದಾರೆ. ಅವರ ಮೇಲೆ ಈಗ ಕುರಾನ್ ಅಪವಿತ್ರಗೊಳಿಸಿದ್ದಾರೆಂಬ ಸುಳ್ಳು ಆರೋಪ ಹೊರಿಸಲಾಯಿತು ಎಂದು ಗಿಲ್ ಹೇಳಿದರು. ಟಿಎಲ್‌ಪಿ ಗುಂಪು ಬರುವ ವಿಚಾರ ತಿಳಿಯುತ್ತಿದ್ದಂತೆಯೇ ಕ್ರಿಶ್ಚಿಯನ್ ಕುಟುಂಬಗಳು ತಮ್ಮ ತಮ್ಮ ಮನೆಗಳಿಗೆ ಬೀಗ ಹಾಕಿಕೊಳ್ಳುವ ಮೂಲಕ ಜೀವ ಉಳಿಸಿಕೊಂಡಿದ್ದಾರೆ ಎಂದು ಅವರು ಹೇಳಿದರು.

ಒಟ್ಟಿನಲ್ಲಿ ಕುರಾನ್‌ನ ಅಪವಿತ್ರೀಕರಣದ ಆರೋಪದ ಮೇಲೆ ಗುಂಪು ಕೆಲವು ಕ್ರೈಸ್ತರ ಮನೆಗಳನ್ನುಸುತ್ತುವರಿದಿದ್ದರಿಂದ ಪರಿಸ್ಥಿತಿಯನ್ನು ಹತೋಟಿಗೆ ತರಲು ಹಲವು ಪೊಲೀಸರ ತಂಡಗಳನ್ನು ನಿಯೋಜಿಸಬೇಕಾಯಿತು.

Share This Article