ಕೇರಳ ಪ್ರವಾಹ ಸಂತ್ರಸ್ತರಿಗೆ ನೆರವಾಗಿದ್ರು ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದ ಅಧಿಕಾರಿ!

Public TV
1 Min Read

ತಿರುವನಂತಪುರ: ತಮಿಳುನಾಡಿನ ಅರಣ್ಯ ಪ್ರದೇಶದಲ್ಲಿ ಸಂಭವಿಸಿದ ವಾಯುಪಡೆ ಹೆಲಿಕಾಪ್ಟರ್‌ ದುರಂತದಿಂದಾಗಿ ಸಿಡಿಎಸ್‌ ಜನರಲ್‌ ಬಿಪಿನ್‌ ರಾವತ್‌ ಸೇರಿದಂತೆ 13 ಮಂದಿ ಮೃತಪಟ್ಟಿರುವ ಘಟನೆಗೆ ಇಡೀ ದೇಶವೇ ಮರುಕ ವ್ಯಕ್ತಪಡಿಸಿದೆ. ಇಂತಹ ಸನ್ನಿವೇಶದಲ್ಲೇ ಮತ್ತೊಂದು ಹೃದಯ ವಿದ್ರಾವಕ ವಿಚಾರವೊಂದನ್ನು ಕೇರಳ ಹಂಚಿಕೊಂಡಿದೆ.

ವಾಯುಪಡೆ ಹೆಲಿಕಾಪ್ಟರ್‌ ದುರಂತದಲ್ಲಿ ಮೃತಪಟ್ಟ 13 ಮಂದಿ ಪೈಕಿ ಜೂನಿಯರ್‌ ವಾರಂಟ್‌ ಅಧಿಕಾರಿ ಪ್ರದೀಪ್‌ ಆರಕ್ಕಲ್‌ ಕೂಡ ಒಬ್ಬರಾಗಿದ್ದಾರೆ. ಕೇರಳದ ತ್ರಿಶೂರ್‌ ಜಿಲ್ಲೆಯವರಾದ ಪ್ರದೀಪ್‌, ಸಮಾಜ ಸೇವೆ ಗುಣಗಳನ್ನು ಹೊಂದಿದ್ದರು. ಕೇರಳದಲ್ಲಿ ಉಂಟಾಗಿದ್ದ ಪ್ರವಾಹ ಸಂದರ್ಭದಲ್ಲಿ ಸಂತ್ರಸ್ತರಿಗೆ ಸಹಾಯ ಮಾಡಿದ್ದರು. ತಮ್ಮ ಸ್ವಂತ ಹಣದಲ್ಲೇ ಸಂತ್ರಸ್ತರಿಗೆ ಅಗತ್ಯ ಔಷಧಿ, ಊಟದ ವ್ಯವಸ್ಥೆ ಮಾಡಿದ್ದರು ಎಂಬ ವಿಚಾರವನ್ನು ಸ್ಥಳೀಯರು ನೆನಪಿಸಿಕೊಂಡಿದ್ದಾರೆ. ಇದನ್ನೂ ಓದಿ: ಜನರಲ್ ರಾವತ್‍ರ ಮರಣವನ್ನು ಸಂಭ್ರಮಿಸಿದ ಕಿಡಿಗೇಡಿ ಅರೆಸ್ಟ್

ಕೇರಳದಲ್ಲಿ ಪ್ರವಾಹ ಉಂಟಾಗಿದ್ದಾಗ ರಕ್ಷಣಾ ಕಾರ್ಯಾಚರಣೆಯಲ್ಲಿ ಪ್ರದೀಪ್‌ ಪ್ರಮುಖ ಪಾತ್ರ ವಹಿಸಿದ್ದರು. ಸ್ವಂತ ಹಣವನ್ನು ಖರ್ಚು ಮಾಡಿ ಸಂತ್ರಸ್ತರಿಗೆ ಊಟ, ಅಗತ್ಯ ವಸ್ತುಗಳು ಹಾಗೂ ಔಷಧೋಪಚಾರ ಮಾಡಿದ್ದರು. ಆ ಮೂಲಕ ಸಹಾಯ ಮನೋಭಾವ ಹೊಂದಿದ್ದರು ಎಂದು ನೆರೆಹೊರೆಯವರು ತಿಳಿಸಿದ್ದಾರೆ. ಇದನ್ನೂ ಓದಿ: ಹೆಲಿಕಾಪ್ಟರ್ ದುರಂತ – ಕ್ಯಾಪ್ಟನ್ ವರುಣ್ ಸಿಂಗ್‌ಗೆ ಬೆಂಗಳೂರಿನಲ್ಲಿ ಹೆಚ್ಚಿನ ಚಿಕಿತ್ಸೆ

ಮತ್ತೊಂದು ದುಃಖದ ಸಂಗತಿಯೆಂದರೆ, ದುರಂತ ಸಂಭವಿಸಿದ ವಾರದ ಹಿಂದೆಯಷ್ಟೇ ಪ್ರದೀಪ್‌ ತನ್ನ ಊರಿಗೆ ಬಂದು ಕುಟುಂಬದವರೊಂದಿಗೆ ಕಾಲ ಕಳೆದಿದ್ದರು. ಪ್ರದೀಪ್‌ ಅವರ ತಂದೆ ಅನಾರೋಗ್ಯದ ಕಾರಣ ಆಸ್ಪತ್ರೆಗೆ ದಾಖಲಾಗಿ, ಈಚೆಗೆ ಡಿಸ್ಚಾರ್ಜ್‌ ಆಗಿದ್ದರು. ಈಗಲೂ ಅವರು ಆಮ್ಲಜನಕ ಸಹಾಯದಿಂದ ಮನೆಯಲ್ಲೇ ವಿಶ್ರಾಂತಿಯಲ್ಲಿದ್ದಾರೆ. ಈಗಾಗಲೇ ದೈಹಿಕವಾಗಿ ಬಳಲಿರುವ ತಂದೆಗೆ ಮಗನ ಸಾವಿನ ಬಗ್ಗೆ ಈವರೆಗೂ ಹೇಳಿಲ್ಲ. ಇದನ್ನೂ ಓದಿ: ಹೆಲಿಕಾಪ್ಟರ್‌ ದುರಂತದಲ್ಲಿ ಮಡಿದವರ ಪಾರ್ಥಿವ ಶರೀರ ಸಾಗಿಸುತ್ತಿದ್ದ ಅಂಬುಲೆನ್ಸ್‌ ಅಪಘಾತ!

36 ವರ್ಷ ವಯಸ್ಸಿನ ಪ್ರದೀಪ್‌ಗೆ ಪತ್ನಿ ಹಾಗೂ 3 ಮತ್ತು 7 ವರ್ಷದ ಇಬ್ಬರು ಮಕ್ಕಳಿದ್ದಾರೆ. ಪ್ರದೀಪ್‌ ದುರಂತ ಸಾವಿನ ಬಗ್ಗೆ ತಾಯಿ, ಪತ್ನಿ ಹಾಗೂ ಸಹೋದರನಿಗಷ್ಟೇ ವಿಷಯ ಮುಟ್ಟಿಸಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *