ರಾಹುಲ್‌ಗೆ ಶಿಕ್ಷೆ ವಿಧಿಸಿದ ನ್ಯಾಯಾಧೀಶರ ನಾಲಿಗೆ ಕತ್ತರಿಸ್ತೀನಿ – ಬೆದರಿಕೆ ಹಾಕಿದ ಕಾಂಗ್ರೆಸ್ ನಾಯಕನ ವಿರುದ್ಧ ಪ್ರಕರಣ ದಾಖಲು

Public TV
2 Min Read

ನವದೆಹಲಿ: 2019ರ ಕ್ರಿಮಿನಲ್ ಮಾನನಷ್ಟ ಮೊಕದ್ದಮೆಗೆ ಸಂಬಂಧಿಸಿದಂತೆ ರಾಹುಲ್ ಗಾಂಧಿ (Rahul Gandhi) ವಿರುದ್ಧ ತೀರ್ಪು ನೀಡಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುವುದಾಗಿ ಕಾಂಗ್ರೆಸ್ (Congress) ಮುಖಂಡರೊಬ್ಬರು ಬೆದರಿಕೆ ಹಾಕಿದ್ದಾರೆ. ಇದೀಗ ವಿವಾದಾತ್ಮಕ ಹೇಳಿಕೆ ನೀಡಿದ ಕಾಂಗ್ರೆಸ್ ನಾಯಕನ ವಿರುದ್ಧ ಪ್ರಕರಣ ದಾಖಲಿಸಲಾಗಿದೆ.

ತಮಿಳುನಾಡಿನ (Tamil Nadu) ದಿಂಡಿಗಲ್ ಜಿಲ್ಲಾಧ್ಯಕ್ಷ ಮಣಿಕಂದನ್ (Manikandan) ವಿರುದ್ಧ ದಿಂಡಿಗಲ್ ಪೊಲೀಸರು ಶನಿವಾರ ಪ್ರಕರಣ ದಾಖಲಿಸಿಕೊಂಡಿದ್ದಾರೆ. ಅವರ ಹೇಳಿಕೆಗೆ ಐಪಿಸಿ ಸೆಕ್ಷನ್ 153ಬಿ ಸೇರಿದಂತೆ 3 ಸೆಕ್ಷನ್‌ಗಳ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ ಹಾಗೂ ಈ ಬಗ್ಗೆ ತನಿಖೆ ನಡೆಯುತ್ತಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

ಏಪ್ರಿಲ್ 6 ರಂದು ತಮಿಳುನಾಡಿನ ದಿಂಡಿಗಲ್‌ನಲ್ಲಿ ರಾಹುಲ್ ಗಾಂಧಿ ಅವರ ಅನರ್ಹತೆಯ ವಿರುದ್ಧ ಪ್ರತಿಭಟನೆಯ ಸಂದರ್ಭದಲ್ಲಿ ಮಣಿಕಂದನ್ ಈ ಹೇಳಿಕೆಯನ್ನು ನೀಡಿದ್ದರು. ನಾವು ಅಧಿಕಾರಕ್ಕೆ ಬಂದರೆ ನಮ್ಮ ನಾಯಕ ರಾಹುಲ್ ಗಾಂಧಿಯನ್ನು ಜೈಲಿಗೆ ಕಳುಹಿಸಲು ತೀರ್ಪು ನೀಡಿದ ನ್ಯಾಯಾಧೀಶರ ನಾಲಿಗೆಯನ್ನು ಕತ್ತರಿಸುತ್ತೇವೆ ಎಂದು ಮಣಿಕಂದನ್ ಹೇಳಿದ್ದಾರೆ. ಇದನ್ನೂ ಓದಿ: ಕೊಡೇಕಲ್‌ನಲ್ಲಿ ಕಲ್ಲು ತೂರಾಟ ಪ್ರಕರಣ – ಸುರಪುರ ಕ್ಷೇತ್ರದಲ್ಲಿ ನಿಷೇಧಾಜ್ಞೆ ವಿಸ್ತರಣೆ

2019ರ ಲೋಕಸಭೆ ಚುನಾವಣೆಗೆ ಮುನ್ನ ಕೋಲಾರದಲ್ಲಿ ಪ್ರಚಾರ ಕಾರ್ಯಕ್ರಮವನ್ನು ಉದ್ದೇಶಿಸಿ ರಾಗಾ ಮಾತನಾಡಿದ್ದ ವೇಳೆ ಮೋದಿ ವಿರುದ್ಧ ವಿವಾದಾತ್ಮಕ ಹೇಳಿಕೆ ನೀಡಿದ್ದರು. ಈ ಪ್ರಕರಣದ ವಿಚಾರಣೆ ನಡೆಸಿದ್ದ ಸೂರತ್ ಕೋರ್ಟ್ ರಾಹುಲ್‌ರನ್ನು ದೋಷಿ ಎಂದು ತೀರ್ಪು ನೀಡಿ ಶಿಕ್ಷೆಯನ್ನು ವಿಧಿಸಿತ್ತು.

2013ರ ಸುಪ್ರೀಂ ಕೋರ್ಟ್‌ನ ತೀರ್ಪಿನ ಪ್ರಕಾರ ಮಾರ್ಚ್ 24 ರಂದು ರಾಹುಲ್ ಅವರನ್ನು ಸಂಸದರಾಗಿ ಅನರ್ಹಗೊಳಿಸಲಾಯಿತು. ಯಾವುದೇ ಸಂಸದರು ಅಥವಾ ಶಾಸಕರು ತಪ್ಪಿತಸ್ಥರೆಂದು ಸಾಬೀತಾದರೆ ಮತ್ತು 2 ವರ್ಷ ಅಥವಾ ಅದಕ್ಕಿಂತ ಹೆಚ್ಚಿನ ಶಿಕ್ಷೆಯಾದರೆ ಪ್ರಜಾ ಪ್ರತಿನಿಧಿ ಕಾಯ್ದೆಯ ಪ್ರಕಾರ ಶಾಸಕ/ ಸಂಸದರು ಅನರ್ಹರಾಗುತ್ತಾರೆ. ಇದನ್ನೂ ಓದಿ: ವಿಕಲಚೇತನ ಕಾರ್ಯಕರ್ತನೊಂದಿಗೆ ಸೆಲ್ಫಿ ಕ್ಲಿಕ್ಕಿಸಿದ ಮೋದಿ

Share This Article