ಸರಿಯಾದ ಸಮಯದಲ್ಲಿ ಆಯ್ಕೆ – ಹೆಚ್‌ಡಿಡಿ ಭೇಟಿಯಾದ ವಿಜಯೇಂದ್ರ

Public TV
2 Min Read

ಬೆಂಗಳೂರು: ಬಿಜೆಪಿ ರಾಜ್ಯಾಧ್ಯಕ್ಷರಾಗಿ ಆಯ್ಕೆಯಾಗಿರುವ ಬಿವೈ ವಿಜಯೇಂದ್ರ (BY Vijayendra) ಅವರು ಸೋಮವಾರ ಮಾಜಿ ಪ್ರಧಾನಿ ದೇವೇಗೌಡ (HD Deve Gowda) ಅವರನ್ನು ಭೇಟಿಯಾಗಿ ದೀಪಾವಳಿ ಶುಭಾಶಯ ಕೋರಿ ಆಶೀರ್ವಾದ ಪಡೆದಿದ್ದಾರೆ. ವಿಜಯೇಂದ್ರ ಅವರಿಗೆ ಹೆಚ್‌ಡಿಡಿ ಹೂಗುಚ್ಛ ನೀಡಿ ಅಭಿನಂದಿಸಿದ್ದಾರೆ.

ಮಾಜಿ ಪ್ರಧಾನಿ ಭೇಟಿ ಬಳಿಕ ಮಾಧ್ಯಮಗಳೊಂದಿಗೆ ಮಾತನಾಡಿದ ವಿಜಯೇಂದ್ರ, ಚಿಕ್ಕ ವಯಸ್ಸಿನಲ್ಲೇ ಅಧ್ಯಕ್ಷ ಸ್ಥಾನ ನೀಡಿದ್ದಕ್ಕೆ ದೇವೇಗೌಡರು ತುಂಬಾ ಖುಷಿ ಪಟ್ಟರು. ಮುಂದಿನ ಲೋಕಸಭಾ ಚುನಾವಣೆಯಲ್ಲಿ ಜೆಡಿಎಸ್ ಜೊತೆಗೆ ಸೇರಿಕೊಂಡು ಸಣ್ಣಪುಟ್ಟ ಸಮಸ್ಯೆಗಳನ್ನು ಸರಿಪಡಿಸಿಲು ಸೂಚನೆ ನೀಡಿದ್ದಾರೆ. ಜೆಡಿಎಸ್-ಬಿಜೆಪಿ ಎರಡೂ ಒಟ್ಟಿಗೆ ಕೆಲಸ ಮಾಡಬೇಕು. ಏನೇ ಇದ್ರೂ ಸರಿ ಮಾಡಿಕೊಂಡು ಹೋಗಬೇಕು ಎಂದಿದ್ದಾರೆ ಎಂದು ತಿಳಿಸಿದರು.

ತಂದೆಯವರಂತೆ ನೀನು ಯಶಸ್ಸು ಕಾಣುತ್ತೀಯ, ಅವರ ದಾರಿಯಲ್ಲಿ ಹೋಗು ನಿನಗೂ ಒಳ್ಳೆಯ ಯಶಸ್ಸು ಸಿಗುತ್ತದೆ ಎಂದು ಹಾರೈಸಿದ್ದಾರೆ. ದೇವೇಗೌಡರ ಮಾತಿನಿಂದ ನನಗೆ ತುಂಬಾ ಸಂತೋಷ ಆಗಿದೆ. ಭೇಟಿ ವೇಳೆ ಅವರು ತಮ್ಮ ಹೋರಾಟ ಮತ್ತು ನಮ್ಮ ತಂದೆಯವರ ಹೋರಾಟಗಳನ್ನು ನೆನಪು ಮಾಡಿಕೊಂಡರು. ಪಾದಯಾತ್ರೆ ಮತ್ತು ಹೋರಾಟ ಅಂದರೆ ನೆನಪು ಆಗೋದೇ ಎರಡು ಹೆಸರು. ಅದು ಯಡಿಯೂರಪ್ಪ ಮತ್ತು ದೇವೇಗೌಡರ ಹೆಸರು. ಅವರ ಸಲಹೆಗಳನ್ನು ನಾನು ಅಳವಡಿಸಿಕೊಂಡು ಪಕ್ಷದಲ್ಲಿ ಕೆಲಸ ಮಾಡುತ್ತೇನೆ ಎಂದು ವಿಜಯೇಂದ್ರ ನುಡಿದರು. ಇದನ್ನೂ ಓದಿ: ವಿಜಯೇಂದ್ರಗೆ ಬೆಂಗಾವಲು ವಾಹನ, ಪೊಲೀಸ್‌ ಭದ್ರತೆ ಕಲ್ಪಿಸಿದ ಸರ್ಕಾರ

ಈ ವೇಳೆ ದೇವೇಗೌಡರು ವಿಜಯೇಂದ್ರಗೆ ಶುಭಾಶಯ ತಿಳಿಸಿ, ಸರಿಯಾದ ಸಮಯದಲ್ಲಿ ನಿಮ್ಮನ್ನು ಆಯ್ಕೆ ಮಾಡಿದ್ದಾರೆ. 3 ದಿನದ ಹಿಂದೆ ಒಂದು ಲೆಕ್ಕ, ಇಂದಿನಿಂದ ಒಂದು ಲೆಕ್ಕ ಎಂದು ಹೆಚ್‌ಡಿಡಿ ಹೇಳಿದ್ದಾರೆ.

ಈ ವೇಳೆ ಉಪಸ್ಥಿತರಿದ್ದ ಸಂಸದ ಪ್ರಜ್ವಲ್ ರೇವಣ್ಣ ಮಾತನಾಡಿ, ಲೋಕಸಭಾ ಚುನಾವಣೆಗೆ ಯೂತ್ ಡೈನಾಮಿಕ್ ಲೀಡರ್ ಬೇಕಿತ್ತು. ಅದಕ್ಕೆ ವಿಜಯೇಂದ್ರ ಅಣ್ಣ ಅವರನ್ನು ಬಿಜೆಪಿ ಆಯ್ಕೆ ಮಾಡಿದೆ. ನಾವೆಲ್ಲ ಸೇರಿಕೊಂಡು ಮತ್ತೊಮ್ಮೆ ಮೋದಿಯವರನ್ನು ಪ್ರಧಾನಿ ಮಾಡಲು ದುಡಿಯುತ್ತೇವೆ. ಲೋಕಸಭೆಯಲ್ಲಿ ಈ ಸಲ 22 ರಿಂದ 24 ಸೀಟ್‌ಗಳನ್ನು ಗೆಲ್ಲುತ್ತೇವೆ ಎಂದು ಹೇಳಿದ್ದಾರೆ. ಇದನ್ನೂ ಓದಿ: ನಿನ್ನ ನೇತೃತ್ವದಲ್ಲಿ ಪಕ್ಷಕ್ಕೆ ಶಕ್ತಿ ತುಂಬೋಣ – ಬೊಮ್ಮಾಯಿ ಆಶೀರ್ವಾದ ಪಡೆದ ವಿಜಯೇಂದ್ರ

Share This Article