ತರಕಾರಿ ಮಾರುವವರ ಪುತ್ರಿ ಏರೋನಾಟಿಕ್ ಎಂಜನಿಯರಿಂಗ್ ಪರೀಕ್ಷೆಯಲ್ಲಿ ರಾಜ್ಯಕ್ಕೆ ಪ್ರಥಮ

Public TV
2 Min Read

ಚಿತ್ರದುರ್ಗ: ಅದೊಂದು ಬಡ ಕುಟುಂಬ ಐದು ಜನರಿರುವ ಈ ಕುಟುಂಬಕ್ಕೆ ಆಸರೆಯಾಗಿರುವುದು ತರಕಾರಿ ವ್ಯಾಪಾರ. 40 ವರ್ಷಗಳಿಂದ ಚಿತ್ರದುರ್ಗ ಜಿಲ್ಲೆ ಹಿರಿಯೂರು ಪಟ್ಟಣದ ಮಾರುಕಟ್ಟೆಯಲ್ಲಿ ತರಕಾರಿ ಮಾರುತ್ತಾ ಜೀವನ ಸಾಗಿಸುತ್ತಾ ಬಂದಿರುವ ಈ ದಂಪತಿ ಮುಖದಲ್ಲೀಗ ಸಂತಸ ಕಾಣುತ್ತಿದೆ. ಅದಕ್ಕೆ ಕಾರಣ ಇವರ ಮಗಳು ಲಲಿತಾ.

ಲಲಿತಾ ಅವರು ಯಲಹಂಕದ ಈಸ್ಟ್ ವೆಸ್ಟ್ ಎಂಜಿನಿಯರಿಂಗ್ ಕಾಲೇಜಿನಲ್ಲಿ ಅಧ್ಯಯನ ಮಾಡಿ ಏರೋನಾಟಿಕಲ್ ಎಂಜಿನಿಯರಿಂಗ್ ವಿಭಾಗದಲ್ಲಿ ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದಿದ್ದಾರೆ. ಈ ಮೂಲಕ ತಂದೆ ತಾಯಿಯಲ್ಲಿ ಹೆಮ್ಮೆ ಮೂಡಿಸಿದ್ದಾರೆ.

2020ರ ಫೆಬ್ರವರಿ 8ರಂದು ಬೆಳಗಾವಿಯ ವಿಶ್ವೇಶ್ವರಯ್ಯ ತಾಂತ್ರಿಕ ವಿಶ್ವವಿದ್ಯಾಲಯದ ಆವರಣದಲ್ಲಿ ನಡೆಯುವ 19ನೇ ಘಟಿಕೋತ್ಸವದಲ್ಲಿ ಏರೋಸ್ಪೇಸ್ ಎಂಜಿನಿಯರಿಂಗ್ ವಿಭಾಗದಲ್ಲಿ ರಾಜ್ಯಕ್ಕೆ ಪ್ರಥಮ ಸ್ಥಾನ ಗಳಿಸಿರುವ ಲಲಿತಾ ಆರ್ ಅವಳಿ ಚಿನ್ನದ ಪದಕ ಪಡೆದಿದ್ದಾರೆ.

ಚಿತ್ರದುರ್ಗ ಜಿಲ್ಲೆಯ ಹಿರಿಯೂರು ನಗರದ ಕೆ.ರಾಜೇಂದ್ರ ಮತ್ತು ಆರ್. ಚಿತ್ರಾ ದಂಪತಿಯ ಮಗಳು ಆರ್.ಲಲಿತಾ ಏರೋನಾಟಿಕ್ಸ್ ಎಂಜಿನಿಯರಿಂಗ್ ವಿಭಾಗದಲ್ಲಿ ಪ್ರಥಮ ಸ್ಥಾನ ಗಳಿಸಿದವರು. ಈ ದಂಪತಿಗೆ ಮೂವರು ಹೆಣ್ಣು ಮಕ್ಕಳು. ತಮ್ಮ ಮಕ್ಕಳಿಗೆ ಉನ್ನತ ಶಿಕ್ಷಣ ಕೊಡಿಸಬೇಕು ಎಂಬುದು ಈ ದಂಪತಿ ಬಯಕೆ. ಮೊದಲನೇ ಮಗಳು ಲಲಿತಾ ಏರೋನಾಟಿಕಲ್ ಎಂಜಿನಿಯರಿಂಗ್, ಎರಡನೇ ಮಗಳು ಭುವನ ಫ್ಯಾಷನ್ ಡಿಸೈನಿಂಗ್ ಓದುತ್ತಿದ್ದಾರೆ. ಕೊನೆಯ ಮಗಳು ತುಳಸಿ ಹಿರಿಯೂರಿನಲ್ಲಿ ಸಿವಿಲ್ ಡಿಪ್ಲೊಮಾ ಓದುತ್ತಿದ್ದಾರೆ.

ಲಲಿತಾ ಅವರು ಪ್ರಾಥಮಿಕ ಶಿಕ್ಷಣವನ್ನು ನಗರದ ವಾಗ್ದೇವಿ ಶಾಲೆಯಲ್ಲಿ ಮುಗಿಸಿ, ಚಿತ್ರದುರ್ಗದ ಎಸ್.ಆರ್.ಎಸ್ ಕಾಲೇಜಿನಲ್ಲಿ ಪಿಯುಸಿ ಓದಿದರು. ಬಳಿಕ ಬೆಂಗಳೂರಿನ ಯಲಹಂಕದ ಈಸ್ಟ್ ವೆಸ್ಟ್ ಏರೋನಾಟಿಕಲ್ ಎಂಜನಿಯರಿಂಗ್ ವಿಭಾಗದಲ್ಲಿ ಪ್ರವೇಶ ಪಡೆದು, ಸತತ ಮೂರು ವರ್ಷಗಳ ಕಾಲ ಪ್ರಥಮ ಸ್ಥಾನ ಪಡೆದರು. ಇದಕ್ಕೆ ಪ್ರತಿಫಲವಾಗಿ ಕೊನೆಯ ವರ್ಷ ಉಚಿತ ಹಾಸ್ಟೆಲ್ ವ್ಯವಸ್ಥೆ ಲಭಿಸಿತು. ಈಗ ವಿಟಿಯುಗೆ ಮೊದಲ ಸ್ಥಾನ ಗಳಿಸಿದ್ದಾರೆ.

ಸುಮಾರು 40 ವರ್ಷಗಳಿಂದ ತರಕಾರಿ ಮಾರಾಟ ಮಾಡಿಕೊಂಡು ಬಂದಿರುವ ಈ ಕುಟುಂಬ ಕಷ್ಟಪಟ್ಟು ದುಡಿಯುತ್ತಿದೆ. ಆದರೆ ಓದಲು ಸಾಧ್ಯವಾಗದೇ ಕಂಗಾಲಾಗಿದ್ದ ದಂಪತಿ ಓದಿದ್ದು ಒಂದನೇ ತರಗತಿ ಅಷ್ಟೆ. ಬಡತನ ಓದಲು ಬಿಡಲಿಲ್ಲ. ಆದ್ದರಿಂದ ನಮಗೆ ಎಷ್ಟೇ ಕಷ್ಟ ಬಂದರೂ ಮಕ್ಕಳಿಗೆ ಒಳ್ಳೆಯ ವಿದ್ಯಾಭ್ಯಾಸ ಕೊಡಬೇಕೆಂದು ತೀರ್ಮಾನಿಸಿದ್ದಾರೆ. ಅವರ ಆಸೆ ಪೂರೈಸುತ್ತಿದ್ದು, ಕಷ್ಟಕ್ಕೆ ಈಗ ಫಲ ಸಿಕ್ಕಿದೆ ಅಂತ ಲಲಿತ ಅವರ ಪೋಷಕರು ಸಂತಸ ವ್ಯಕ್ತಪಡಿಸಿದ್ದಾರೆ.

ಅಪ್ಪ-ಅಮ್ಮನಿಗೆ ಇದು ಸಣ್ಣ ಉಡುಗೊರೆ:
ತಂದೆ ತಾಯಿಯ ಪ್ರೋತ್ಸಾಹದಿಂದ ನಾನು ಪ್ರಥಮ ಸ್ಥಾನ ಪಡೆಯಲು ಸಾಧ್ಯವಾಗಿದೆ. ಕಷ್ಟಪಟ್ಟು ಅಪ್ಪ ಅಮ್ಮ ನಮ್ಮನ್ನು ಓದಿಸುತ್ತಿದ್ದಾರೆ. ಹೀಗಾಗಿ ಪ್ರತಿನಿತ್ಯ ನಾನೂ ಕಷ್ಟಪಟ್ಟು ಓದುತ್ತಿದ್ದೆ. ಇದೀಗ ಪ್ರಥಮ ಸ್ಥಾನ ಬಂದಿರುವುದು ಖುಷಿ ನೀಡಿದೆ. ಅವರಿಗೆ ಇದೊಂದು ಸಣ್ಣ ಉಡುಗೊರೆ. ಸಾಧಿಸುವುದು ಇನ್ನೂ ತುಂಬಾ ಇದೆ ಎನ್ನುತ್ತಾರೆ. ‘ಈಗಾಗಲೇ ಗೇಟ್ ಎರಡು ಪರೀಕ್ಷೆ ಮುಗಿದಿದ್ದು, ಎಂಎಸ್ ಮಾಡಬೇಕೆಂಬ ಆಸೆಯಿದೆ’ ಎಂದೂ ಹೇಳಿಕೊಂಡಿದ್ದಾರೆ.

Share This Article
Leave a Comment

Leave a Reply

Your email address will not be published. Required fields are marked *