ಚಿತ್ರದುರ್ಗ: ಪತಿಯೊಬ್ಬ ಒನಕೆಯಿಂದ ಪತ್ನಿಯ ಮುಖ, ತಲೆಗೆ ಹೊಡೆದು ಬರ್ಬರವಾಗಿ ಕೊಲೆ ಮಾಡಿದ ಘಟನೆ ಮೊಳಕಾಲ್ಮೂರು ತಾಲೂಕಿನ ಕೋನಸಾಗರ ಗ್ರಾಮದಲ್ಲಿ ನಡೆದಿದೆ.
ಕೋನಸಾಗರ ಗ್ರಾಮದ ಶಾಂತಮ್ಮ (40) ಕೊಲೆಯಾದ ಪತ್ನಿ. ಮಂಜಣ್ಣ ಕೊಲೆ ಮಾಡಿದ ಪತಿ. ಮಂಜಣ್ಣ ಇಂದು ಮಧ್ಯಾಹ್ನ ಕೊಲೆಗೈದು ಮನೆಯಿಂದ ಪರಾರಿಯಾಗಿದ್ದಾನೆ. ಆದರೆ ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲ.
ಶಾಂತಮ್ಮ-ಮಂಜಣ್ಣ ದಂಪತಿ 3 ದಿನದ ಹಿಂದಷ್ಟೇ ಎರಡನೇ ಪುತ್ರನ ಮದುವೆ ಮಾಡಿದ್ದರು. ಆದರೆ ಕೌಟಂಬಿಕ ನಿರ್ವಹಣೆ ವಿಚಾರವಾಗಿ ಶಾಂತಮ್ಮ ಮತ್ತು ಮಂಜಣ್ಣ ಜಗಳ ಮಾಡಿಕೊಂಡಿದ್ದರು. ಈ ವೇಳೆ ಕೋಪಗೊಂಡಿದ್ದ ಮಂಜಣ್ಣ ಪತ್ನಿಗೆ ಒನಕೆಯಿಂದ ಹೊಡೆದಿದ್ದಾನೆ. ಗಂಭೀರವಾಗಿ ಗಾಯಗೊಂಡು ಕೆಳಗೆ ಬಿದ್ದ ಶಾಂತಮ್ಮ ರಕ್ತಸ್ರಾವದಿಂದ ಪ್ರಾಣ ಬಿಟ್ಟಿದ್ದಾರೆ ಎಂದು ಸ್ಥಳೀಯರು ದೂರಿದ್ದಾರೆ.
ಮದುವೆ ಸಂಭ್ರಮ ಮಾಸುವ ಮುನ್ನವೇ ಮನೆಯಲ್ಲಿ ಕಲಹ ಉಂಟಾಗಿ ತಾಯಿಯ ಹೆಣ ಬಿದ್ದಿದೆ. ಘಟನಾ ಸ್ಥಳಕ್ಕೆ ಭೇಟಿ ನೀಡಿದ ಪೊಲೀಸರು ಪರಿಶೀಲನೆ ನಡೆಸಿದ್ದಾರೆ. ಶಾಂತಮ್ಮ ಅವರ ಮೃತ ದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳುಹಿಸಲಾಗಿದೆ.
ಈ ಸಂಬಂಧ ಮೊಳಕಾಲ್ಮೂರು ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಆರೋಪಿ ಮಂಜಣ್ಣನ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.