ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ಆಪ್ತ ಸ್ನೇಹಿತನನ್ನೇ ಕೊಂದ

Public TV
2 Min Read

ಚಿತ್ರದುರ್ಗ: ಮಾಟ ಮಂತ್ರ ಎಂಬ ಮೌಢ್ಯದ ಅನುಮಾನಕ್ಕೆ ವ್ಯಕ್ತಿಯೋರ್ವ ತನ್ನ ಅಪ್ತ ಸ್ನೇಹಿತನನ್ನೇ ಕೊಂದು ಹಾಕಿರುವ ಘಟನೆ ಚಿತ್ರದುರ್ಗದಲ್ಲಿ ನಡೆದಿದೆ.

ಚಿತ್ರದುರ್ಗ ಜಿಲ್ಲೆ ಚಳ್ಳಕೆರೆ ತಾಲೂಕಿನ ಹಡವಿಗೊಂಡನಹಳ್ಳಿಯ ಚಂದ್ರಣ್ಣ (55) ಹಾಗೂ ಮಂಜುನಾಥ್ (37) ಇಬ್ಬರು ಅಪ್ತ ಸ್ನೇಹಿತರಾಗಿದ್ದರು. ಅವರಿಬ್ಬರ ವಯಸ್ಸಿನಲ್ಲಿ ವ್ಯತ್ಯಾಸವಿದ್ದರೂ ಸಹ ಸುಮಾರು ವರ್ಷಗಳಿಂದ ಆಪ್ತ ಮಿತ್ರರಾಗಿದ್ದ ಗೆಳೆಯರ ನಡುವೇ ಮಾಟ ಮಂತ್ರ ಎಂಬ ಮೌಢ್ಯದ ಅನುಮಾನ ಮೂಡಿ ಅವರಿಬ್ಬರ ಮಧ್ಯೆ ದ್ವೇಷ ಹುಟ್ಟಿಸಿತ್ತು. ಈಗ ಆ ದ್ವೇಷ ಗೆಳೆಯನ ಜೀವವನ್ನೇ ಬಲಿ ಪಡೆದಿದೆ.

ಸದಾ ಚಂದ್ರಣ್ಣನ ಎಲ್ಲಾ ಕೆಲಸ ಕಾರ್ಯಗಳಲ್ಲೂ ಹೆಗಲು ಕೊಡುತ್ತಿದ್ದ ಮಂಜುನಾಥ್ ಚಂದ್ರಣ್ಣ ಹಿರಿಯನಾದರೂ ತುಂಬ ಸಲಿಗೆಯಿಂದ ಇರುತ್ತಿದ್ದರು. ಆದರೆ ಅವರಿಬ್ಬರ ಸ್ನೇಹ ಸಹಿಸಲಾಗದ ಯಾರೋ ಮಹಾನುಭಾವರು ಇಬ್ಬರ ನಡುವೇ ಮಾಟ, ಮಂತ್ರ ಎಂಬ ಮೌಢ್ಯದ ಬೀಜವನ್ನು ಬಿತ್ತಿದ್ದರು. ಹೀಗಾಗಿ ಪರಸ್ಪರ ದ್ವೇಷ ಹಾಗೂ ಅಸೂಯೆ ಶುರುವಾಗಿತ್ತು. ದಿನಬೆಳಗಾದರೆ ಹಗೆತನ ಸಾಧಿಸುತ್ತಾ ಊರಲ್ಲಿ ಓಡಾಡುತ್ತಿದ್ದರು.

ಹೀಗಿರುವಾಗ ಡಿಸೆಂಬರ್ 4 ರಂದು ಕಟ್ಟಿಗೆ ಕಡಿದು ಇದ್ದಲು ಮಾಡುವ ಕಾಯಕಕ್ಕೆ ಚಂದ್ರಣ್ಣ ತೆರಳಿದ್ದು, ರಾತ್ರಿ ವೇಳೆ ಅದೇ ಜಮೀನಿನಲ್ಲಿ ಮಲಗಲು ನಿರ್ಧರಿಸಿದ್ದರು. ಆಗ ಅವರನ್ನು ಹಿಂಬಾಲಿಸಿದ್ದ ಆತನ ಗೆಳೆಯ ಮಂಜುನಾಥ್ ಚಂದ್ರಣ್ಣ ನಿದ್ರೆಗೆ ಜಾರುತ್ತಿದ್ದಂತೆ ದೊಣ್ಣೆಯಿಂದ ತಲೆಗೆ ಹೊಡೆದಿದ್ದಾನೆ. ಬಳಿಕ ಬಲವಾದ ಕೋಲಿನಿಂದ ಕತ್ತಿಗೆ ಇರಿದು ಉಸಿರುಗಟ್ಟಿಸಿದ್ದಾನೆ. ಕೊನೆಗೆ ತಲೆಮೇಲೆ ಕಲ್ಲು ಎತ್ತಿಹಾಕಿ ಚಂದ್ರಣ್ಣನನ್ನು ಹತ್ಯೆ ಮಾಡಿದ್ದಾನೆ.

ಈ ವಿಷಯ ತಿಳಿದ ಚಂದ್ರಣ್ಣನ ಕುಟುಂಬದವರು ಪೊಲೀಸರಿಗೆ ಮಾಹಿತಿ ನೀಡಿದ್ದು, ಸುಮಾರು ವರ್ಷಗಳಿಂದ ಚಂದ್ರಣ್ಣನಿಗೆ ಆಪ್ತ ಸ್ನೇಹಿತನಂತಿದ್ದ ಮಂಜುನಾಥ್ ಇತ್ತೀಚೆಗೆ ಚಂದ್ರಣ್ಣನು ನಮ್ಮ ಕುಟುಂಬದ ಮೇಲೆ ಮಾಟ ಮಂತ್ರ ಮಾಡಿಸಿ ನಮ್ಮ ಸಂಸಾರ ಹಾಳು ಮಾಡಿದ್ದಾನೆ. ಆತನನ್ನು ಬಿಡುವುದಿಲ್ಲ ಎಂದು ಹೇಳಿಕೊಂಡು ಓಡಾಡುತ್ತಿದ್ದ ಎಂದು ಹೇಳಿದ್ದಾರೆ.

ಈ ವಿಷಯವನ್ನು ಬೆನ್ನತ್ತಿದ ಪೊಲೀಸರು ಮಂಜುನಾಥ್ ಅನ್ನು ವಿಚಾರಣೆ ನಡೆಸಿದಾಗ, ನಾನು ಕೊಲೆ ಮಾಡಿಲ್ಲ ಎಂದು ಹೇಳಿದ್ದಾನೆ. ಆದರೆ ನಂತರ ಮಾಟ ಮಂತ್ರ ಎಂಬ ಮೌಢ್ಯದ ಅನುಮಾದಿಂದ ನಾನೇ ಕೊಲೆ ಮಾಡಿದ್ದು, ಎಂದು ಒಪ್ಪಿಕೊಂಡಿದ್ದಾನೆ. ಈ ಸಂಬಂಧ ಚಳ್ಳಕೆರೆ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *