‘ಮನೆಗೆ ಹೋಗಲು ಬಿಡಿ’ – ಚಿತ್ರದುರ್ಗದಲ್ಲಿ ಕುಟುಂಬಸ್ಥರನ್ನು ನೆನೆದು ಕೂಲಿ ಕಾರ್ಮಿಕರ ಕಣ್ಣೀರು

Public TV
2 Min Read

ಚಿತ್ರದುರ್ಗ: ಕೊರೊನಾ ಸೋಂಕು ಹರಡದಂತೆ ತಡೆಗಟ್ಟಲು ಜಾರಿಮಾಡಿದ ಲಾಕ್‍ಡೌನ್‍ನಿಂದ ಜನಜೀವನ ಅಸ್ತವ್ಯಸ್ತಗೊಂಡಿದೆ. ಈ ಮಧ್ಯೆ ಚಿತ್ರದುರ್ಗ ಕ್ವಾರಂಟೈನಲ್ಲಿರುವ ನಿರಾಶ್ರಿತರು ಹಾಗೂ ಕೂಲಿ ಕಾರ್ಮಿಕರು ಕುಟುಂಬವನ್ನು ನೆನೆದು ಕಣ್ಣೀರಿಟ್ಟಿದ್ದಾರೆ.

ಯಾದಗಿರಿಯಿಂದ ಬೆಂಗಳೂರಿಗೆ ಕೂಲಿ ಕೆಲಸಕ್ಕಾಗಿ ತೆರಳಿದ್ದ 17 ಮಂದಿ ಹಾಗೂ ವಿವಿಧ ಕೆಲಸಗಳಿಗೆ ರಾಜಸ್ಥಾನದಿಂದ ಆಂಧ್ರಪ್ರದೇಶಕ್ಕೆ ಹೋಗಿದ್ದ 10 ಜನ ನಿರಾಶ್ರಿತರನ್ನು ಚಿತ್ರದುರ್ಗ ಜಿಲ್ಲಾಡಳಿತ ಹಿರೇಯೂರಿನ ಟೋಲ್ ಗೇಟ್ ಬಳಿ ತಡೆದು, ಅವರನ್ನು ಹಾಸ್ಟಲ್ ಕ್ವಾರಂಟೈನ್ ನಲ್ಲಿ ಇಡಲಾಗಿದೆ.

ಈ ಹಿಂದೆ ಏಪ್ರಿಲ್ 14ಕ್ಕೆ ಲಾಕ್‍ಡೌನ್ ಮುಗಿಯಲಿದೆ ಆ ಬಳಿಕ ನಿಮ್ಮನ್ನು ನಿಮ್ ಊರುಗಳಿಗೆ ಕಳುಹಿಸುತ್ತೇವೆಂದು ಅಧಿಕಾರಿಗಳು ಕಾರ್ಮಿಕರಿಗೆ, ನಿರಾಶ್ರಿತರಿಗೆ ಭರವಸೆ ಸಹ ನೀಡಿದ್ದರು. ಆದರೆ ಇಂದು ಮತ್ತೆ ಪ್ರಧಾನಿ ಮೋದಿ ಅವರು ಲಾಕ್‍ಡೌನ್ ವಿಸ್ತರಣೆ ಮಾಡಿದ್ದಾರೆ. ಹೀಗಾಗಿ ಈ ವಿಷಯ ತಿಳಿದ ಕಾರ್ಮಿಕರು ಆತಂಕಗೊಂಡಿದ್ದು, ಸ್ವಗ್ರಾಮಗಳಲ್ಲಿರುವ ಅವರ ಗರ್ಭಿಣಿ ಪತ್ನಿ ಹಾಗೂ ತಂದೆ ತಾಯಿಯರನ್ನು ನೆನೆದು ಕಣ್ಣೀರಿಡ್ತಿದ್ದಾರೆ.

ಲಾಕ್‍ಡೌನ್ ವಿಸ್ತರಣೆಯಾದ ಬೆನ್ನಲ್ಲೇ ಚಿತ್ರದುರ್ಗದ ಐಯುಡಿಪಿ ಬಡಾವಣೆಯಲ್ಲಿರುವ ಸರ್ಕಾರಿ ಹಾಸ್ಟಲ್‍ನಲ್ಲಿ ತಂಗಿರುವ ನಿರಾಶ್ರಿತರಾದ ಯಾದಗಿರಿಯ ಚಿತ್ತೂರು ಗ್ರಾಮದ ಕಮಲಮ್ಮ, ಮಗನಾದ ಆಕಾಶ್ ಅವರ ಸಾವಿನಂಚಿನಲ್ಲಿರುವ ಅಜ್ಜಿಯನ್ನು ನೆನೆದು ಬೆಳಿಗ್ಗೆಯಿಂದಲೇ ಉಪಹಾರ ಸೇವಿಸದೇ ಕಣ್ಣೀರುಡುತ್ತಿದ್ದಾರೆ.

ಇತ್ತ ರಾಜಸ್ಥಾನ ಮೂಲದ ಐಸ್ ಕ್ರೀಂ ವ್ಯಾಪಾರಿ ಪಪ್ಪುಲಾಲ್ ತಮ್ಮ ಗರ್ಭಿಣಿ ಪತ್ನಿಯನ್ನು ನೆನೆದು ಅತ್ತಿದ್ದಾರೆ. ನನ್ನ ಪತ್ನಿಗೆ ಹೆರಿಗೆ ಸಮಯ ಸಮೀಪಿಸಿದೆ. ನಾನು ಮನೆಯಲ್ಲಿರುವ ನನ್ನ ಗರ್ಭಿಣಿ ಪತ್ನಿಯೊಂದಿಗೆ ಇರಬೇಕಾದ ಸಮಯದಲ್ಲಿ ಇಲ್ಲಿ ಬಂದಿಯಾಗಿದ್ದೇನೆ. ಆಕೆಯನ್ನು ಆಸ್ಪತ್ರೆಗೆ ಕರೆದೊಯ್ಯಲು ಹಾಗೂ ಜವಬ್ದಾರಿ ಹೊರುವವರು ಸಹ ಯಾರಿಲ್ಲ ಅಂತ ಕಣ್ಣೀರಿಡುತ್ತಾ, ದಯವಿಟ್ಟು ನನ್ನ ಊರಿಗೆ ನನ್ನನ್ನು ಕಳುಹಿಸಿ ಅಂತ ಸರ್ಕಾರ ಹಾಗೂ ಜಿಲ್ಲಾಡಳಿತಕ್ಕೆ ಅಂಗಲಾಚಿ ಬೇಡಿಕೊಂಡಿದ್ದಾರೆ.

ರಾಜಸ್ಥಾನದ ಮತ್ತೋರ್ವ ಮಹಾವೀರ್ ಎಂಬ ಯುವಕ ತನ್ನ ಸಹೋದರನೊಂದಿಗೆ ಕಬ್ಬಿನ ಜ್ಯೂಸ್ ವ್ಯಾಪಾರಕ್ಕಾಗಿ ಆಂಧ್ರ ಪ್ರದೇಶಕ್ಕೆ ತೆರಳಿದ್ದನು. ಇದೇ ವೇಳೆ ಲಾಕ್‍ಡೌನ್ ಜಾರಿಯಾದ ಹಿನ್ನೆಲೆ ತನ್ನ ಊರಿಗೆ ವಾಪಾಸ್ ಹೋಗುವಾಗ ಅಧಿಕಾರಿಗಳ ಕೈಗೆ ಯುವಕ ಹಾಗೂ ಆತನ ಸಹೋದರ ಸಿಕ್ಕಿದ್ದಾರೆ. ತನ್ನ ಮನೆಯಲ್ಲಿ ಕಿತ್ತು ತಿನ್ನುವ ಬಡತನವಿದೆ. ವಯಸ್ಸಾದ ತಂದೆ ತಾಯಿ ಮನೆಯಲ್ಲಿದ್ದಾರೆ. ನನ್ನ ತಂದೆಗೆ ಕೈ ಇಲ್ಲ. ವಿಕಲಚೇತನರಾಗಿರುವ ಅವರಿಗೆ ನಾವಿಬ್ಬರೇ ಆಸರೆಯಾಗಿದ್ದೇವೆ. ಆದ್ದರಿಂದ ಇನ್ನು 20 ದಿನಗಳ ಕಾಲ ಇಲ್ಲಿ ಇರಲು ಸಾಧ್ಯವಿಲ್ಲ. ಆದ್ದರಿಂದ ನಮ್ಮ ಊರಿಗೆ ಇಂದು ಕಳುಹಿಸಿ ಎಂದು ಯುವಕ ಮನವಿ ಮಾಡಿಕೊಂಡಿದ್ದಾನೆ.

Share This Article
Leave a Comment

Leave a Reply

Your email address will not be published. Required fields are marked *