ಪ್ರಧಾನಿಯೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ – ಸೂಲಿಬೆಲೆ

Public TV
1 Min Read

– ರಾಜಕಾರಣ ಇರುವುದು ಸೇವೆಗಾಗಿ, ಧಿಮಾಕಿಗಾಗಿ ಅಲ್ಲ

ಚಿತ್ರದುರ್ಗ: ಸಂಸದರು ಗೆಲ್ಲುವ ಮುನ್ನ ಜನರೊಂದಿಗೆ ಇದ್ದಂತಹ ಔದಾರ್ಯವನ್ನು ಜನಪ್ರತಿನಿಧಿಯಾದ ಮೇಲೂ ಉಳಿಸಿಕೊಳ್ಳಬೇಕೆಂದು ಟೀಂ ಮೋದಿ ಸಂಸ್ಥಾಪಕ ಚಕ್ರವರ್ತಿ ಸೂಲಿಬೆಲೆ ಹೇಳಿದ್ದಾರೆ.

ಕೋಟೆನಾಡು ಚಿತ್ರದುರ್ಗದಲ್ಲಿ ಮಾತನಾಡಿದ ಅವರು ಪ್ರಧಾನಿ ನರೇಂದ್ರ ಮೋದಿಯವರೇ ಜನಸೇವಕರಾದ ಮೇಲೆ ಸಂಸದರು ಯಾವ ಲೆಕ್ಕ ಎಂದು ಪ್ರಶ್ನಿಸಿದರು. ಉತ್ತರ ಕನ್ನಡ ಜಿಲ್ಲೆಯಲ್ಲಿ ಆಸ್ಪತ್ರೆ ವಿಚಾರವಾಗಿ ಜನರು ಮಾಜಿ ಕೇಂದ್ರ ಸಚಿವ ಅನಂತಕುಮಾರ್ ಹೆಗಡೆ ಅವರನ್ನು ಭೇಟಿಯಾಗಲು ಬಂದಾಗ ಅವರು ತೋರಿಸಿರುವ ವರ್ತನೆ ಸರಿಯಲ್ಲ ಎಂದು ಅಭಿಪ್ರಾಯಪಟ್ಟರು.

ಸಂಸದರ ನಡೆಯನ್ನು ಇಡೀ ಕರ್ನಾಟಕದ ಜನತೆ ಮಾತನಾಡುತ್ತಿದ್ದು, ಸಹಜವಾಗಿ ಅದು ಆಕ್ರೋಶಕ್ಕೆ ಕಾರಣವಾಗಿದೆ. ಅಲ್ಲದೇ ಕೊನೆಪಕ್ಷ ಜನರು ಜನಪ್ರತಿನಿಧಿ ಬಳಿ ಬಂದಾಗ ಪ್ರೀತಿಯಿಂದ ಮಾತನಾಡಿಸಿ, ಈ ವಿಚಾರವಾಗಿ ಸಿಎಂ ಜೊತೆ ಮಾತನಾಡುತ್ತೇನೆಂಬ ಭರವಸೆಯಾದರೂ ನೀಡಬೇಕಿತ್ತು ಎಂದು ಸೂಲಿಬೆಲೆ ಬೇಸರ ವ್ಯಕ್ತಪಡಿಸಿದರು.

ಬಿಜೆಪಿ ಸಂಸದರು ಯಾರು ಸಹ ತಮ್ಮ ವೈಯುಕ್ತಿಕ ವರ್ಚಸ್ಸಿನಿಂದ ಗೆದ್ದಿಲ್ಲ. ಪ್ರಧಾನಿ ಮೋದಿಯವರ ಅಭಿವೃದ್ಧಿ ಹಾಗು ಹಿಂದೂ ರಾಷ್ಟ್ರೀಯ ಚಿಂತನೆಗಳ ಆಧಾರದ ಮೇಲೆ ಗೆದ್ದಿದ್ದಾರೆ. ಘಟಬಂಧನ್ ಕಟ್ಟಿಕೊಂಡು ಕುಮಾರಸ್ವಾಮಿ ರಾಜ್ಯಕ್ಕೆ ಬಂದಾಗ ಬಿಜೆಪಿ ಸಂಸದರೆಲ್ಲರೂ ಗೆಲ್ಲುವ ಆಸೆಯನ್ನು ಬಿಟ್ಟಿದ್ದರು. ಕೇವಲ ಆರು ಅಥವಾ ಏಳು ಸೀಟು ಬರಬಹುದೆಂಬ ಲೆಕ್ಕಾಚಾರ ಶುರುವಾಗಿತ್ತು ಎಂದರು.

ನಮ್ಮ ರಾಜ್ಯದಲ್ಲಿ ಮೋದಿ ಮುಖ ನೋಡಿ 25 ಸ್ಥಾನಗಳನ್ನು ಬಿಜೆಪಿಗೆ ನೀಡಿದ್ದಾರೆ. ಹೀಗಾಗಿ ಬಿಜೆಪಿ ಎಂಪಿಗಳು ಸಹ ಜನರಿಗೆ ಪೂರಕವಾಗಿ ಕೆಲಸ ಮಾಡಬೇಕು. ಯಾರು ಸ್ಪಷ್ಟವಾಗಿ ಸ್ವಂತ ವರ್ಚಸ್ಸಿನಿಂದ ಗೆದ್ದಿದ್ದೇನೆಂದು ಹೇಳಲು ಅರ್ಹರಿಲ್ಲ. ಜಾತಿ ಬೆಂಬಲದಿಂದ ಗೆದ್ದಿದ್ದೇನೆಂದರೆ ಮತದಾರರು ಒಪ್ಪುವುದಿಲ್ಲ ಎಂದು ಕೇಂದ್ರ ಸಚಿವ ಸದಾನಂದಗೌಡರಿಗೆ ಟಾಂಗ್ ನೀಡಿದರು.

ಜಾತಿಗಾಗಿ ಸದಾನಂದಗೌಡರನ್ನು ಮಂತ್ರಿ ಮಾಡಿದರೆ ಮೋದಿಯೂ ಎಡವಿದಂತೆ. ಇದು ಸಂಸದರ ವಿರುದ್ಧದ ಅಪಸ್ವರ ಅಲ್ಲ. ಜನಸೇವೆಗೆ ಪೂರಕ ಸ್ಪಂದನೆ ಬೇಕೆಂಬ ಒತ್ತಾಯ. ರಾಜಕಾರಣ ಸೇವೆಗಾಗಿ ಇರವಂಥದ್ದು ಹೊರತು ಧಿಮಾಕಿಗಾಗಿ ಅಲ್ಲ. ಮೋದಿಯವರ ಪ್ರಭಾವದಿಂದ ಗೆದ್ದಿರುವ ಸಂಸದರೆಲ್ಲರೂ ಗೆಲ್ಲುವ ಮುಂಚೆ ಇದ್ದಂತಹ ಔದಾರ್ಯತೆ ಸಂಸದರಾದ ಮೇಲೂ ಮೈ ಗೂಡಿಸಿಕೊಳ್ಳಬೇಕೆಂದು ಹೇಳಿದರು.

Share This Article
Leave a Comment

Leave a Reply

Your email address will not be published. Required fields are marked *