ಚಿತ್ರದುರ್ಗ: ಸ್ವಾಮೀಜಿಗಳು ಅಂದ್ರೆ ಧರ್ಮ ಭೋದನೆ ಮಾಡುತ್ತ, ಅವರ ಸಮುದಾಯದ ಏಳಿಗೆಗೆ ಬದುಕನ್ನು ಮುಡಪಾಗಿಟ್ಟು, ಭಜನೆ, ಭಕ್ತಿಗಷ್ಟೇ ಅವರು ಸೀಮಿತ ಎಂದು ಅನೇಕ ಭಾವಿಸಿದ್ದಾರೆ. ಆದರೆ ಚಿತ್ರದುರ್ಗದ ಛಲವಾದಿ ಗುರುಪೀಠದ ಬಸವನಾಗಿದೇವ ಸ್ವಾಮೀಜಿ ಹಾಗೂ ಕೇತೇಶ್ವರ ಗುರುಪೀಠದ ಕೇತೇಶ್ವರ ಸ್ವಾಮೀಜಿ ನಾವು ಯಾವ ಹವ್ಯಾಸಿ ಕ್ರೀಡಾಪಟುಗಳಿಗಿಂತ ಕಡಿಮೆ ಏನಿಲ್ಲ ಎನ್ನುವಂತೆ ಏರೋ ಸ್ಪೋರ್ಟ್ಸ್ ನಲ್ಲಿ ಭಾಗಿಯಾಗಿ ಗಾಳಿಯಲ್ಲಿ ತೇಲಾಡುತ್ತಾ ಪಕ್ಷಿಗಳಂತೆ ಬಾನಲ್ಲಿ ಹಾರಾಡಿ ಎಲ್ಲರ ಮೆಚ್ಚುಗೆಗೆ ಪಾತ್ರವಾಗಿದ್ದಾರೆ.
ಚಿತ್ರದುರ್ಗದ ಮುರುಘಾ ಮಠ ಮತ್ತು ಸಾಹಸಿ ಯುವಕರ ವತಿಯಿಂದ ಇಂದು ಚಿತ್ರದುರ್ಗದ ಸೀಬಾರದ ಬಳಿ ಏರೋ ಸ್ಪೋರ್ಟ್ಸ್ ಆಯೋಜಿಸಲಾಗಿತ್ತು. ಈ ಏರೋ ಸ್ಪೋರ್ಟ್ಸ್ ನಲ್ಲಿ ಭಾಗವಹಿಸಿದ್ದ ಬಸವನಾಗಿದೇವ ಶರಣರು ಮಾತನಾಡಿ, ತಲೆಗೆ ಹೆಲ್ಮೆಟ್ ಧರಿಸಿ ಮೈಗೆಲ್ಲ ಹಗ್ಗ ಬಿಗಿದು ಒಂದು ಬಾರಿ ಬಾನಿಗೆ ಜಿಗದರೆ ಮುಗಿಯಿತು. ಬಾನೆತ್ತರಕ್ಕೆ ಹಾರಿ ನಾವು ಪಕ್ಷಿಗಳಾಗಿದ್ದೇವೆ ಎನ್ನುವ ಭಾವನೆ ಮೂಡುತ್ತದೆ ಎಂದು ಅನುಭವ ಬಿಚ್ಚಿಟ್ಟಿದ್ದಾರೆ.
ಬೆಂಗಳೂರಿನ ಹಂಕಾ ಏರೋ ಸ್ಪೋರ್ಟ್ಸ್ ನವರು ಈ ಕ್ರೀಡೆಯನ್ನು ಸೀಬಾರದ ಬಳಿ ನಡೆಸುತ್ತಿದ್ದು, ಇಂದಿನಿಂದ ಎರಡು ದಿನಗಳ ಕಾಲ ಸಾಹಸ ಕ್ರೀಡೆ ನಡೆಯಲಿದೆ. ಗಾಳಿಯಲ್ಲಿ ಹಾರುವ ಕ್ರೀಡೆಗೆ ಮುರುಘಾ ಶರಣರು ಚಾಲನೆ ನೀಡಿದರು. ಯುವಕರ ಸಾಹಸವನ್ನು ಕಂಡು ಬೆರಗಾದರು. ಯುವಕರು ಬೇರೆ ರಾಜ್ಯಗಳಿಗೆ ಹೋಗಿ ಅಲ್ಲಿ ಸಾವಿರಾರು ಹಣ ಖರ್ಚು ಮಾಡಿ ಈ ರೀತಿಯ ಕ್ರೀಡೆ ಆಡುತ್ತಾರೆ. ಹೀಗಾಗಿ ಬರದನಾಡಿನ ಯುವಕರು ಸಹ ಕಡಿಮೆ ಹಣದಲ್ಲಿ ಈ ರೋಮಾಂಚನ ಕ್ರೀಡೆಯ ಸವಿರುಚಿ ನೋಡಲಿ ಅಂತ ಸಾಹಸಿ ಕ್ರೀಡೆಯನ್ನು ಇಲ್ಲಿ ಆಯೋಜಿಸಲಾಗಿದೆ ಎಂದು ಆಯೋಜಕರು ತಿಳಿಸಿದ್ದಾರೆ.
ಏರೋ ಸ್ಪೋರ್ಟ್ಸ್ ನಲ್ಲಿ ಮೇದಾರ ಗುರುಪೀಠದ ಶ್ರೀ ಮೇದಾರ ಕೇತೇಶ್ವರ ಶರಣರು ಸಹ ಭಾಗಿಯಾಗಿ, ಉತ್ಸಾಹದಿಂದ ಬಾನಂಗಳದಲ್ಲಿ ತೇಲಾಡಿ ಎಲ್ಲರ ಕಣ್ಮನ ಸೆಳೆದರು. ಜೊತೆಗೆ ಅವರು ಸಹ ಫುಲ್ ಎಂಜಾಯ್ ಮಾಡಿದ್ದು, ಕೋಟೆ ನಾಡಿನಲ್ಲಿ ಗಾಳಿಯಲ್ಲಿ ತೇಲಾಡುವ ಸಾಹಸ ಕ್ರೀಡೆ ಆಯೋಜನೆಗೊಂಡಿರುವುದರಿಂದ ಉತ್ಸಾಹಿ ಯುವಕರ ಗುಂಪು ಸೀಬಾರದತ್ತ ಧಾವಿಸುತ್ತಿದೆ. ಹೊಸ ಅನುಭವ ಪಡೆಯುವ ಮೂಲಕ ಅಪರೂಪದ ಸಾಹಸಿ ಕ್ರೀಡೆಯ ರಸದೌತಣ ಸವಿಯುತ್ತಿದ್ದಾರೆ.