Chitradurga Bus Accident | ಲಾಕೆಟ್ ಮೂಲಕ ಮಗಳ ಗುರುತು ಪತ್ತೆಹಚ್ಚಿದ ಮಾನಸಾ ತಂದೆ

2 Min Read

– ಬೆಂಗಳೂರಿನಿಂದ ನಾನೇ ಬಸ್ ಹತ್ತಿಸಿದ್ದೆ ಎಂದು ಕಣ್ಣೀರಿಟ್ಟ ತಂದೆ
– ಗಣೇಶನ ಪೆಂಡೆಂಟ್ ಹೊಂದಿದ್ದ ಲಾಕೆಟ್

ಚಿತ್ರದುರ್ಗ: ಹಿರಿಯೂರು (Hiriyuru) ಬಳಿ ಸಂಭವಿಸಿದ ಬಸ್ ದುರಂತದಲ್ಲಿ ಕಣ್ಮರೆಯಾಗಿದ್ದ ಮಗಳನ್ನು ತಂದೆ ಶವಾಗಾರದಲ್ಲಿ ಪತ್ತೆಹಚ್ಚಿದ್ದಾರೆ. ಗಣೇಶನ ಪೆಂಡೆಂಟ್ ಇದ್ದ ಲಾಕೆಟ್ ಮೂಲಕ ಇದೇ ನನ್ನ ಮಗಳು ಎಂದು ಮಾನಸ ತಂದೆ ಗೋಗರೆದಿದ್ದಾರೆ.

ಹಿರಿಯೂರು ತಾಲೂಕಿನ ಗೊರ್ಲತ್ತು ಗ್ರಾಮದ ಬಳಿ ಲಾರಿ ಹಾಗೂ ಖಾಸಗಿ ಬಸ್ ನಡುವೆ ಅಪಘಾತ ಸಂಭವಿಸಿದೆ. ಪರಿಣಾಮ ಬಸ್‌ನಲ್ಲಿದ್ದ ಕೆಲ ಪ್ರಯಾಣಿಕರು ಸಜೀವ ದಹನಗೊಂಡಿದ್ದಾರೆ. ಈವರೆಗೂ 6 ಮೃತದೇಹಗಳು ಪತ್ತೆಯಾಗಿದ್ದು, ಈ ಪೈಕಿ ನವ್ಯಾ ಹಾಗೂ ಮಾನಸಾ ಶವಗಳ ಬಗ್ಗೆ ಅನುಮಾನ ವ್ಯಕ್ತವಾಗಿತ್ತು. ಶವಾಗಾರದಲ್ಲಿ ಮಾನಸಾ ತಂದೆ ಗಣೇಶನ ಪೆಂಡೆಂಟ್ ಇದ್ದ ಲಾಕೆಟ್ ಮೂಲಕ ಮಗಳ ಶವವನ್ನು ಪತ್ತೆಹಚ್ಚಿದ್ದಾರೆ ಎಂದು ಚಿತ್ರದುರ್ಗ ಎಸ್‌ಪಿ ರಂಜಿತ್ ಬಂಡಾರು ತಿಳಿಸಿದ್ದಾರೆ. ಇದನ್ನೂ ಓದಿ: Chitradurga Bus Accident | ಲಾರಿ ಚಾಲಕನ ರ‍್ಯಾಷ್ ಡ್ರೈವ್, ಅಜಾಗರೂಕತೆಯಿಂದ ಅಪಘಾತ: ರಾಮಲಿಂಗಾ ರೆಡ್ಡಿ

ಈ ಕುರಿತು ಮಾನಸಾ ತಂದೆ ಚಂದ್ರೇಗೌಡ ಮಾತನಾಡಿ, ಮಗಳಿಗೆ ಪ್ರೀತಿಯಿಂದ ಚಿನ್ನದ ಸರ ಹಾಗೂ ಗಣೇಶನ ಡಾಲರ್ ಕೊಡಿಸಿದ್ದೆ. ಎಂಗೇಜ್‌ಮೆಂಟ್ ಆಗಿತ್ತು. ಮದುವೆಗೆ ಎಲ್ಲಾ ರೀತಿಯ ಸಿದ್ಧತೆ ಮಾಡಿಕೊಂಡಿದ್ದೆವು. ಆದರೆ ವಿಧಿಯಾಟ ಅವಳು ಬದುಕುಳಿಯಲಿಲ್ಲ. ಕೊನೆಗೆ ಬೆಂಗಳೂರಿನಿಂದ ಗೋಕರ್ಣ ಹೋಗಲು ನಾನೇ ಹೋಗಿ ಬಸ್ ಹತ್ತಿಸಿದ್ದೆ ಎಂದು ಕಣ್ಣೀರಿಟ್ಟಿದ್ದಾರೆ.

ಇದಕ್ಕೂ ಮುನ್ನ ನವ್ಯಾ ತಂದೆ ಮಂಜಪ್ಪ ಅವರು ಮಾತನಾಡಿದ್ದರು. ಬೆಳಿಗ್ಗೆ 7 ಗಂಟೆಗೆ ವಿಷಯ ಗೊತ್ತಾಗಿದೆ. ಮಿಲನ ಫೋನ್ ಮಾಡಿ ಹೇಳಿದಳು. ನವ್ಯಾ, ಮಾನಸಾ, ಮಿಲನ ಮೂವರು ಬೆಸ್ಟ್ ಫ್ರೆಂಡ್ಸ್ ಆಗಿದ್ದರು. ಮೂವರು ಒಟ್ಟಿಗೆ ಇಂಜಿನಿಯರಿಂಗ್ ಓದಿ, ಸಾಫ್ಟ್‌ವೇರ್‌ ಇಂಜಿನಿಯರ್ ಆಗಿ ಕೆಲಸ ಮಾಡುತ್ತಿದ್ದರು. ಸದ್ಯ ರಜೆ ಇತ್ತು ಎಂಬ ಕಾರಣಕ್ಕೆ ಸಿಗಂದೂರಿಗೆ ಹೊರಟಿದ್ದರು. ನನಗೆ ಒಬ್ಬನೇ ಮಗ ಹಾಗೂ ಒಬ್ಬಳೇ ಮಗಳಿದ್ದಾಳೆ. ಎಪ್ರಿಲ್‌ನಲ್ಲಿ ನವ್ಯಾ ಮದುವೆ ಕೂಡ ಫಿಕ್ಸ್ ಆಗಿತ್ತು ಎಂದು ಅಳಲು ತೋಡಿಕೊಂಡಿದ್ದರು.ಇದನ್ನೂ ಓದಿ: ಹಿರಿಯೂರು ಬಸ್‌ ಅಪಘಾತ – ಹಾಸನ ಮೂಲದ ಇಬ್ಬರು ಟೆಕ್ಕಿಗಳು ಕಣ್ಮರೆ

 

 

Share This Article