‘ಖಾಕಿ’ ಖದರ್‌ಗೂ ರೋಮಾಂಚನ ಮೂಡಿಸಿದ ವೀಡಿಯೋ ಸಾಂಗ್!

Public TV
1 Min Read

ಬೆಂಗಳೂರು: ಚಿರಂಜೀವಿ ಸರ್ಜಾ ಇತ್ತೀಚೆಗೆ ಒಂದರ ಹಿಂದೊಂದರಂತೆ ಮಾಸ್ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ನಾನಾ ರೀತಿಯ ಪಾತ್ರಗಳನ್ನು ನಿರ್ವಹಿಸಿ ಮಾಸ್ ಲುಕ್ಕಿನತ್ತ ಹೊರಳಿಕೊಂಡಿರೋ ಅವರು ಸದ್ಯಕ್ಕೆ ಸದ್ದು ಮಾಡುತ್ತಿರೋದು `ಖಾಕಿ’ ಚಿತ್ರದ ಮೂಲಕ. ಕನ್ನಡ ಚಿತ್ರರಂಗದಲ್ಲಿ ಅದ್ಧೂರಿ ಸಿನಿಮಾಗಳ ನಿರ್ಮಾಪಕರೆಂದೇ ಹೆಸರು ಮಾಡಿರುವ ತರುಣ್ ಶಿವಪ್ಪ ನಿರ್ದೇಶನದಲ್ಲಿ ಮೂಡಿ ಬಂದಿರೋ ಚಿತ್ರವಿದು. ಕೆಲ ದಿನಗಳ ಹಿಂದಷ್ಟೇ ಬಿಡುಗಡೆಯಾಗಿದ್ದ ಟೀಸರ್ ಮೂಲಕ ಖಾಕಿ ಖದರ್‍ನ ಸಣ್ಣ ಝಲಕ್ ಜಾಹೀರಾಗಿತ್ತು. ಆ ಥ್ರಿಲ್ ಇನ್ನೂ ಹಬೆಯಾಡುತ್ತಿರುವಾಗಲೇ `ಖಾಕಿ’ಯ ಕಡೆಯಿಂದ ರೋಮಾಂಚನದ ಕಾವೇರಿಸುವಂಥಾ ಚೆಂದದ ವೀಡಿಯೋ ಸಾಂಗೊಂದು ಬಿಡುಗಡೆಯಾಗಿದೆ.

ಸಂಜಿತ್ ಹೆಗ್ಡೆ ಮತ್ತು ಇಶಾ ಸುಚಿ ಹಾಡಿರೋ ಈ ಹಾಡು ಸಾಹಿತ್ಯ, ಸಂಗೀತ ಸೇರಿದಂತೆ ಎಲ್ಲ ರೀತಿಯಲ್ಲಿಯೂ ಒಂದೇ ಗುಕ್ಕಿಗೆ ಎಲ್ಲರನ್ನೂ ಆವರಿಸಿಕೊಳ್ಳುವಂತೆ ಮೂಡಿ ಬಂದಿದೆ. ಯಾರೇ ನೀನು, ಯಾರೇ ನೀನು ಎಂಬ ಈ ವೀಡಿಯೋ ಸಾಂಗ್ ರಿತ್ವಿಕ್ ಮುರಳೀಧರ್ ಸಂಗೀತ ಸಂಯೋಜನೆಯೊಂದಿಗೆ ಮೂಡಿ ಬಂದಿದೆ. ಕವಿರತ್ನ ಡಾ ವಿ. ನಾಗೇಂದ್ರ ಪ್ರಸಾದ್ ಬರೆದಿರುವ ಲವಲವಿಕೆಯ ಸಾಲುಗಳಂತೂ ಒಂದೇ ಸಲಕ್ಕೆ ಎಲ್ಲರಿಗೂ ನಾಟುವಂತಿವೆ. ಆಹ್ಲಾದದ ಬುಗ್ಗೆಗಳನ್ನು ಎದೆಯ ಮಿದುವಿಗೆ ಸೋಕಿಸುವಂತಿರೋ ಸಾಹಿತ್ಯ, ಅದಕ್ಕೆ ತಕ್ಕುದಾದ ಸಂಗೀತ ಮತ್ತು ಸಂಜಿತ್ ಹೆಗ್ಡೆ, ಇಶಾ ಸುಚಿಯ ಗಾನ ಮಾಧುರ್ಯದೊಂದಿಗೆ ಈ ಹಾಡು ಖಾಕಿ ಖದರ್‍ಗೂ ರೋಮಾಂಚನ ಮೂಡಿಸುವಂತಿದೆ.

ಈ ಹಾಡಿನಲ್ಲಿ ಚಿರಂಜೀವಿ ಸರ್ಜಾ ಮತ್ತು ತಾನ್ಯಾ ಹೋಪ್ ಮೋಹಕವಾಗಿ ಕಾಣಿಸಿಕೊಂಡಿದ್ದಾರೆ. ಈಗಾಗಲೇ ಖಾಕಿ ಚಿತ್ರದ ಅಸಲಿ ಕಥೆ ಏನೆಂಬುದರ ಸುತ್ತಾ ಥರ ಥರದ ಚರ್ಚೆಗಳು ನಡೆಯುತ್ತಿವೆ. ಇದೊಂದು ಪಕ್ಕಾ ಮಾಸ್ ಚಿತ್ರ. ಖಾಕಿ ಅಂದೇಟಿಗೆ ಪೊಲೀಸ್ ನೆನಪಾಗೋದರಿಂದ ಇಲ್ಲಿ ಚಿರು ಪೊಲೀಸ್ ಅಧಿಕಾರಿಯಾಗಿ ನಟಿಸಿದ್ದಾರೆಂದೇ ಆರಂಭದಲ್ಲಿ ಅಂದುಕೊಳ್ಳಲಾಗಿತ್ತು. ಆದರೆ ಅವರಿಲ್ಲಿ ಕೇಬಲ್ ಆಪರೇಟರ್ ಆಗಿ ನಟಿಸಿದ್ದಾರೆಂಬ ವಿಚಾರ ಇತ್ತೀಚೆಗಷ್ಟೇ ಬಹಿರಂಗಗೊಂಡಿತ್ತು. ಕಥೆಯ ವಿಚಾರ ಏನೋ ಗೊತ್ತಿಲ್ಲ, ಆದರೆ ಆ ಕಥೆಯೊಳಗೊಂದು ಮುದ್ದಾದ ಲವ್ ಸ್ಟೋರಿ ಇದೆ ಎಂಬುದನ್ನು ಈ ವೀಡಿಯೋ ಸಾಂಗ್ ಖಚಿತ ಪಡಿಸಿದೆ. ಇದರೊಂದಿಗೆ ಖಾಕಿ ಖದರ್ ಮೋಹಕ ರೂಪ ಪಡೆದುಕೊಂಡಿದೆ!

Share This Article
Leave a Comment

Leave a Reply

Your email address will not be published. Required fields are marked *