ಸಿಂಗನಿಗೆ ಟಾಂಗ್ ಕೊಡೋ ರವಿಶಂಕರ್ ನೀವಂದುಕೊಂಡಂತಿಲ್ಲ!

Public TV
1 Min Read

ಬೆಂಗಳೂರು: ಕನ್ನಡ ಚಿತ್ರರಂಗವನ್ನು ತನ್ನ ಅಗಾಧ ಪ್ರತಿಭೆಯ ಮೂಲಕವೇ ಆವರಿಸಿಕೊಂಡಿರುವ ಖ್ಯಾತ ಖಳನಟ ರವಿಶಂಕರ್. ಕಿಚ್ಚ ಸುದೀಪ್ ಅಭಿನಯದ ಕೆಂಪೇಗೌಡ ಚಿತ್ರದ ಮೂಲಕ ಖಳನಾಗಿ ಅಬ್ಬರಿಸಲಾರಂಭಿಸಿದ್ದ ರವಿಶಂಕರ್ ಆ ನಂತರ ತಿರುಗಿ ನೋಡಿದ್ದೇ ಇಲ್ಲ. ಈ ಹಾದಿಯಲ್ಲಿ ವೈವಿಧ್ಯಮಯ ಪಾತ್ರಗಳ ರೂವಾರಿಯಾಗಿ ಸಾಗಿ ಬಂದಿರೋ ಅವರು ಚಿರಂಜೀವಿ ಸರ್ಜಾ ನಾಯಕನಾಗಿ ನಟಿಸಿರೋ ಸಿಂಗ ಚಿತ್ರದಲ್ಲಿಯೂ ಒಂದು ಪಾತ್ರದಲ್ಲಿ ನಟಿಸಿದ್ದಾರೆ. ಆದರೆ ಅವರ ಪಾತ್ರ ಈ ಚಿತ್ರದಲ್ಲಿ ಖಂಡಿತಾ ನೀವಂದುಕೊಂಡಂತೆ ಇರೋದಿಲ್ಲ!

ರವಿಶಂಕರ್ ಅಂದರೆ ಎಂಥವರೂ ಅದುರಿ ಹೋಗುವಂಥಾ ಅಬ್ಬರದ ನಟನಾ ಶಕ್ತಿ ಹೊಂದಿರೋ ಕಲಾವಿದ. ಹೀಗಿರೋದರಿಂದಲೇ ಅವರ ಹೆಸರು ಕೇಳಿದರೇನೇ ವಿಲನ್ ಪಾತ್ರಗಳು ಕಣ್ಮುಂದೆ ತೇಲಿ ಹೋಗುತ್ತವೆ. ಇನ್ನು ಪಕ್ಕಾ ಮಾಸ್ ಶೈಲಿಯ ಸಿಂಗ ಚಿತ್ರದಲ್ಲಿ ರವಿಶಂಕರ್ ನಟಿಸಿದ್ದಾರೆಂದ ಮೇಲೆ ಹೀರೋ ಚಿರುಗೆ ಟಕ್ಕರ್ ಕೊಡೋ ಪಾತ್ರದಲ್ಲಿಯೇ ನಟಿಸಿದ್ದಾರೆ ಅಂತಲೇ ಅರ್ಥ. ಇದಕ್ಕೆ ಪೂರಕವಾದ ದೃಶ್ಯಾವಳಿಗಳೇ ಟ್ರೈಲರ್‍ನಲ್ಲಿಯೂ ಸರಿದು ಹೋಗಿವೆ.

ಆದರೆ ಈ ಚಿತ್ರದಲ್ಲಿ ರವಿಶಂಕರ್ ಪಾತ್ರ ಅಷ್ಟು ಸಲೀಸಾಗಿ ಊಹಿಸುವಂಥಾದ್ದಲ್ಲ. ಬಹುಶಃ ಇದುವರೆಗೂ ಕಾಣಿಸಿಕೊಳ್ಳದ ಪಾತ್ರದ ಮೂಲಕ ಸಿಂಗನ ಜೊತೆಗೆ ಅವರು ಪ್ರೇಕ್ಷಕರನ್ನು ತಲುಪಲಿದ್ದಾರೆ. ಕಥೆ ರೆಡಿ ಮಾಡುವ ಕ್ಷಣದಲ್ಲಿಯೇ ಪ್ರೇಕ್ಷಕರಿಗೊಂದು ಸರ್‍ಪ್ರೈಸ್ ಕೊಡಬೇಕೆಂಬ ಉದ್ದೇಶದಿಂದ ವಿಜಯ್ ಕಿರಣ್ ಈ ಪಾತ್ರವನ್ನು ಸೃಷ್ಟಿಸಿದ್ದರಂತೆ. ಇದು ಹೀಗೆಯೇ ಬರಬೇಕೆಂಬ ಕಲ್ಪನೆಯೊಂದು ನಿರ್ದೇಶಕರಲ್ಲಿತ್ತಲ್ಲಾ? ಅದನ್ನು ಮೀರಿಸುವಂತೆ ರವಿಶಂಕರ್ ಈ ಪಾತ್ರವನ್ನು ಮಿರುಗಿಸಿದ್ದಾರಂತೆ. ಅಷ್ಟಕ್ಕೂ ರವಿಶಂಕರ್ ಆ ಥರದ ಯಾವ ಪಾತ್ರವನ್ನು ನಿರ್ವಹಿಸಿದ್ದಾರೆಂಬ ಕುತೂಹಲ ನಿಮ್ಮಲ್ಲಿದ್ದರೆ, ಇದೇ ತಿಂಗಳ ಹತ್ತೊಂಬತ್ತರಂದು ಅದಕ್ಕೆ ನಿಖರ ಉತ್ತರ ಸಿಗಲಿದೆ.

Share This Article
Leave a Comment

Leave a Reply

Your email address will not be published. Required fields are marked *