– ನನ್ನ ಪತಿಗೆ ಯಾರೂ ಬ್ರೈನ್ ವಾಶ್ ಮಾಡಿಲ್ಲ, ತುಂಬಾ ಒಳ್ಳುವರು
– ಧರ್ಮಸ್ಥಳದಲ್ಲಿದ್ದಾಗಲೇ ಮ್ಯಾನೇಜರ್‌ಗೆ ಹೇಳಿ ನಾವು ಮದ್ವೆ ಆಗಿದ್ವಿ
ಚಾಮರಾಜನಗರ: ನಾವು ಮತಾಂತರ ಆಗಿದ್ವಿ, ಆದ್ದರಿಂದ ಫಂಡಿಂಗ್ ಬರ್ತಿತ್ತು, ಧರ್ಮಸ್ಥಳದ (Dharmasthala) ವಿರುದ್ಧ ಕಟ್ಟು ಕಥೆ ಸೃಷ್ಟಿಸಿದ್ರು ಅನ್ನೋದೆಲ್ಲ ಸುಳ್ಳು. 11 ವರ್ಷಗಳಿಂದಲೇ ತಮಿಳುನಾಡಿನಲ್ಲೇ ಕೂಲಿ ಕೆಲಸ ಮಾಡಿಕೊಂಡಿದ್ವಿ. ಅವರು ಕೆಲಸಕ್ಕೆ ಹೋದರಷ್ಟೇ ಜೀವನ ನಡೆಯುತ್ತಿತ್ತು. ಈಗ ಅವರಿಲ್ಲದೇ ಜೀವನವೇ ಇಲ್ಲದಂತಾಗಿದೆ. ಎಲ್ಲಿ ಹೋಗ್ಬೇಕು, ಏನ್ ಮಾಡ್ಬೇಕು ಒಂದೂ ಗೊತ್ತಾಗ್ತಿಲ್ಲ…. ಬುರುಡೆ ಪ್ರಕರಣದಲ್ಲಿ ಎಸ್‌ಐಟಿ ಕಸ್ಟಡಿಯಲ್ಲಿರುವ ಚಿನ್ನಯ್ಯನ 2ನೇ ಪತ್ನಿ ಮಲ್ಲಿಕಾ ಬಿಕ್ಕಿ ಬಿಕ್ಕಿ ಅಳುತ್ತಾ ʻಪಬ್ಲಿಕ್ ಟಿವಿʼ ಜೊತೆಗೆ ತನ್ನ ಅಳಲು ತೋಡಿಕೊಂಡದ್ದು ಹೀಗೆ.
ಧರ್ಮಸ್ಥಳದಲ್ಲಿ ನೂರಾರು ಶವಗಳನ್ನು ಹೂತಿಟ್ಟಿ ಪ್ರಕರಣದ ʻಬುರುಡೆʼ ಚಿನ್ನಯ್ಯ (Chinnayya) ಮೂಲತಃ ಮಂಡ್ಯ ಜಿಲ್ಲೆಯವನಾದರೂ ನೆಲೆಸಿದ್ದು ತಮಿಳುನಾಡಿನ (Tamil Nadu) ಸತ್ಯಮಂಗಲಂನ ಚಿಕ್ಕರಸಂಪಾಳ್ಯಂದಲ್ಲಿ. ಸದ್ಯ ಪ್ರಕರಣದಲ್ಲಿ ಸಿಲುಕಿ ಎಸ್‌ಐಟಿ ಕಸ್ಟಡಿಯಲ್ಲಿದ್ದಾನೆ. ಆದ್ರೆ ಚಿಕ್ಕರಸಂಪಾಳ್ಯಂನಲ್ಲಿ ನೆಲೆಸಿರುವ ಚಿನ್ನಯ್ಯನ 2ನೇ ಪತ್ನಿ ಮಲ್ಲಿಕಾ ʻಪಬ್ಲಿಕ್ ಟಿವಿʼ ಜೊತೆಗೆ ಮಾತನಾಡಿದ್ದಾರೆ. ಚಿನ್ನಯ್ಯನ ಸ್ಥಿತಿ ಕಂಡು ಕಣ್ಣೀರಿದ್ದಾರೆ. ನನ್ನ ಪತಿ ಹಾಗೆ ಮಾಡೋನಲ್ಲ. ಏನಾಗ್ತಿದೆ ಅನ್ನೋದೆ ಗೊತ್ತಿಲ್ಲ. ಎಲ್ಲವೂ ಟಿವಿಯಲ್ಲಿ ನೋಡಿದ ನಂತರ ಗೊತ್ತಾಗ್ತಿದೆ ಎಂದಿದ್ದಾರೆ. ಇದನ್ನೂ ಓದಿ: ನನ್ನ ಪತಿಯ ಅಣ್ಣ ಕೈಸ್ತ ಪಾದ್ರಿ, ಆದ್ರೆ ಚಿನ್ನಯ್ಯ ಮತಾಂತರ ಆಗಿಲ್ಲ: 2ನೇ ಪತ್ನಿ ಮಲ್ಲಿಕಾ
ನಾನೂ ಕೂಡ ಧರ್ಮಸ್ಥಳಕ್ಕೆ ಕೆಲಸಕ್ಕೆ ಹೋಗ್ತಿದ್ದೆ. ಮನೆಯಲ್ಲಿ ಚಿಕ್ಕ ಮಗು ಇದ್ದಿದ್ದರಿಂದ ನಾಲ್ಕೂವರೆ ಗಂಟೆಗೆಲ್ಲ ನಾನು ವಾಪಸ್ ಬರ್ತಿದ್ದೆ. ನನ್ನ ಪತಿ ಉಳಿದವರು ಆರೂವರೆ ಗಂಟೆಗೆ ಬರ್ತಿದ್ದರು. ಆದ್ರೆ ಒಂದು ದಿನ ಸೂಪರ್‌ವೈಸರ್ ನಡುವೆ ಜಗಳ ಆಗಿ ಕೆಲಸದಿಂದ ತೆಗೆದರು ಅಂತ ಹೇಳಿದ್ದರು. ಅದಾದ ಮೇಲೆ ಧರ್ಮಸ್ಥಳ ಬಿಟ್ಟೆವು. ಒಂದು ವರ್ಷ ಮಂಡ್ಯದ ಚಿಕ್ಕಬಳ್ಳಿಯಲ್ಲಿ ಇದ್ವಿ. ಚಿಕ್ಕಬಳ್ಳಿ ಗ್ರಾಮಸ್ಥರೆಲ್ಲ ಒಳ್ಳೆಯವರು ಈಗ ಯಾಕೆ ಮಾತಾಡ್ತಿದ್ದಾರೆ ಗೊತ್ತಿಲ್ಲ. ಅಲ್ಲಿ ಕೆಲಸ ಮಾಡುವಾಗ ಕೆಲವರು ಸಂಬಳ ಕೊಡ್ತಿರಲಿಲ್ಲ. ನಂತರ ತಮಿಳುನಾಡಿಗೆ ಬಂದ್ವಿ. ಇಲ್ಲಿಗೆ ಬಂದು ಈಗ 11 ವರ್ಷಗಳಾಯ್ತು. ಆ ಬಳಿಕ ತಮಿಳುನಾಡು ಸುತ್ತಲಿನ ತಿರುಪೂರು, ಕೊಯಮತ್ತೂರಲ್ಲಿ ಕೂಲಿ ಕೆಲಸಕ್ಕೆ ಹೋಗ್ತಿದ್ದರು. ಈಗಲೂ ಕೆಲಸಕ್ಕೆ ಹೋದರಷ್ಟೇ ಸಂಬಳ ಇಲ್ಲಿದ್ದರೆ, ಇಲ್ಲ ಎನ್ನುವಂತಿದೆ. ಇಲ್ಲಿಗೆ ಬಂದ 3 ವರ್ಷದ ನಂತರ 10 ವರ್ಷ ಲೀಸ್‌ಗೆ 2 ಲಕ್ಷ ರೂ. ಕೊಟ್ಟು ಮನೆ ಮಾಡಿಕೊಂಡ್ವಿ. ಇನ್ನೂ 2 ವರ್ಷ ಬಾಕಿಯಿದೆ ಅಂತ ತಿಳಿಸಿದ್ದಾರೆ. ಇದನ್ನೂ ಓದಿ: ಈ ಬಾರಿ ಗಣೇಶೋತ್ಸವದಲ್ಲಿ ರಾರಾಜಿಸಲಿದೆ ಧರ್ಮಸ್ಥಳ
ಮತಾಂತರ ಆಗಿದ್ರಾ? ಫಂಡಿಂಗ್ ಬರ್ತಿತ್ತಾ?
ʻಪಬ್ಲಿಕ್ ಟಿವಿʼಯ ಈ ಪ್ರಶ್ನೆಗೆ ಉತ್ತರಿಸಿದ ಚಿನ್ನಯ್ಯನ ಪತ್ನಿ ಮಲ್ಲಿಕಾ, ಮತಾಂತರ ಆಗಿದ್ದರಿಂದ ಫಂಡಿಂಗ್ ಬರ್ತಿದೆ, ಆದ್ದರಿಂದ ಧರ್ಮಸ್ಥಳದ ವಿರುದ್ಧ ಕಟ್ಟು ಕಥೆ ಕಟ್ತಿದ್ದಾನೆ ಅನ್ನೋದೆಲ್ಲ ಸುಳ್ಳು. ಧರ್ಮಸ್ಥಳದಲ್ಲಿದ್ದಾಗಲೇ ಮ್ಯಾನೇಜರ್‌ಗೆ ಹೇಳಿ ನಾವು ಮದ್ವೆ ಆಗಿದ್ದು. ಆಗಿನಿಂದಲೂ ಮಂಜುನಾಥಸ್ವಾಮಿ ಮೇಲೆ ನಮಗೆ ಅಪಾರ ಭಕ್ತಿ. ಚಿಕ್ಕಬಳ್ಳಿಯಿಂದಲೂ ತುಂಬಾ ಜನ ಧರ್ಮಸ್ಥಳಕ್ಕೆ ಬರುತ್ತಿದ್ದರು. ಅವರಿಗೆಲ್ಲ ಇವರೇ ರೂಮ್ ವ್ಯವಸ್ಥೆ ಮಾಡಿಕೊಡ್ತಿದ್ರು. ವಿಶೇಷ ಪೂಜೆ ಮಾಡಿಸಿಕೊಡ್ತಿದ್ದರು ಎಂದು ಹೇಳಿದ್ದಾರೆ.
ಚಿನ್ನಯ್ಯನ ಅಣ್ಣ ಕೈಸ್ತ ಪಾದ್ರಿ, ಆದ್ರೆ ಅವರಿಗೆ ಕಣ್ಣು ಕಾಣ್ತಿರಲಿಲ್ಲ. ಚರ್ಚ್‌ನಲ್ಲಿ ಹುಡುಗರು ಇಲ್ಲದೇ ಇದ್ದಾಗ ಚಿನ್ನಯ್ಯನಿಗೆ ಫೋನ್ ಮಾಡ್ತಿದ್ದರು. ಅಲ್ಲದೇ ಹೊರಗೆ ಹೋಗಬೇಕು ಅಂತಾ ಚಿನ್ನಯ್ಯನನ್ನ ಕರೀತಿದ್ರು. ಆಗಷ್ಟೇ ಚಿನ್ನಯ ಹೋಗ್ತಿದ್ದರು. ಆದ್ರೆ ಯಾವುದೇ ಧರ್ಮಕ್ಕೆ ಮತಾಂತರ ಆಗಿರಲಿಲ್ಲ. ಯಾವುದೇ ಗ್ಯಾಂಗ್ ಬಗ್ಗೆ ಕೂಡ ನನ್ನ ಜೊತೆಗೆ ಒಂದು ದಿನವೂ ಮಾತನಾಡಿರಲಿಲ್ಲ. ಹಾಗೇನಾದರೂ ಇದ್ದಿದ್ದರೆ ಹೇಳ್ತಿದ್ರು ಅಂತ ವಿವರಿಸಿದ್ರು. ಇದನ್ನೂ ಓದಿ: ಒಡಿಶಾ | ಜಲಪಾತದಲ್ಲಿ ರೀಲ್ಸ್ ಮಾಡಲು ಹೋಗಿ ಕೊಚ್ಚಿಹೋದ ಯೂಟ್ಯೂಬರ್
ಚಿನ್ನಯ್ಯನಿಗೆ ಬ್ರೈನ್ ವಾಶ್ ಮಾಡಿದ್ರಾ?
ನಮ್ಮ ಮನೆಗೆ ಯಾರೂ ಬಂದಿಲ್ಲ, ಏನೂ ಮಾತನಾಡಿಲ್ಲ, ದುಡ್ಡು ಕಾಸು ಸಹ ಕೊಟ್ಟಿಲ್ಲ. ಪತಿ ಮನೆಗೆ ಬಂದು 2 ತಿಂಗಳಾಯ್ತು. 17 ವರ್ಷ ಜೊತೆಗೆ ಇದ್ವಿ. ನನ್ನನ್ನ ಒಂಟಿಯಾಗಿ ಎಲ್ಲಿಗೂ ಕಳಿಸುತ್ತಿರಲಿಲ್ಲ. ಚೆನ್ನಾಗಿ ನೋಡಿಕೊಳ್ತಿದ್ರು. ತಂದೆ- ತಾಯಿ ಎಲ್ಲವೂ ಅವರೇ ಆಗಿದ್ದರು. ಕುಡಿಯುವ ಚಟ ಕೂಡ ಇರಲಿಲ್ಲ. ಮನೆಗೆ ಅವರೇ ಆಧಾರವಾಗಿದ್ದರು. ಈಗ 2 ತಿಂಗಳಿಂದ ಕಷ್ಟ ಆಗ್ತಿದೆ. ಎಲ್ಲಿ ಹೋಗಬೇಕು? ಏನು ಮಾಡಬೇಕು? ಏನೂ ಗೊತ್ತಾಗ್ತಿಲ್ಲ ಅಂತ ಕಣ್ಣೀರಿಟ್ಟರಲ್ಲದೇ ಅವರು ಬರೋತನಕ ಇಲ್ಲೇ ಇರ್ತೀನಿ ಅಂತ ಬಿಕ್ಕಿ ಬಿಕ್ಕಿ ಅತ್ತರು. ಇದನ್ನೂ ಓದಿ: AI ವೀಡಿಯೋಗೆ ಸಾಕ್ಷಿ ಕೊಡಲು ತಡಬಡಿಸಿದ ಬುರುಡೆ ಸಮೀರ್