ಬೆಂಗಳೂರು: ಆರ್‌ಸಿಬಿಯ ಜೊತೆ ಬೆಂಗಳೂರು ಪೊಲೀಸರು (Bengaluru Police) ಶಾಮೀಲಾಗಿರುವ ಕಾರಣ ಚಿನ್ನಸ್ವಾಮಿ ಸ್ಟೇಡಿಯಂ (Chinnaswamy Stadium) ಬಳಿ ಕಾಲ್ತುಳಿತ ಸಂಭವಿಸಿದೆ ಎಂದು ನಿವೃತ್ತ ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ (John Michael D’Cunha) ನೇತೃತ್ವದ ಏಕಸದಸ್ಯ ತನಿಖಾ ಆಯೋಗ ಸರ್ಕಾರಕ್ಕೆ ವರದಿ ಸಲ್ಲಿಸಿದೆ.
ನ್ಯಾಯಮೂರ್ತಿ ಮೈಕೆಲ್ ಡಿ ಕುನ್ಹಾ ನೇತೃತ್ವದ ಏಕಸದಸ್ಯ ತನಿಖಾ ಆಯೋಗವು ಐಪಿಎಲ್ ವಿಜಯೋತ್ಸವದ ಸಮಯದಲ್ಲಿ ಚಿನ್ನಸ್ವಾಮಿ ಕ್ರೀಡಾಂಗಣದ ಬಳಿ ಸಂಭವಿಸಿದ ಕಾಲ್ತುಳಿತದ ತನಿಖಾ ವರದಿಯನ್ನು ಮುಚ್ಚಿದ ಲಕೋಟೆಯಲ್ಲಿ ಜುಲೈ 12 ರಂದು ಸರ್ಕಾರಕ್ಕೆ ಸಲ್ಲಿಸಿತ್ತು. ಇದನ್ನೂ ಓದಿ: ಡಿವೈಎಸ್‌ಪಿ ವಿಜಯಕ್ರಾಂತಿ ವರ್ಗಾವಣೆಯಲ್ಲಿ ಬದಲಾವಣೆ – ಮಂಗಳೂರು ದಕ್ಷಿಣಕ್ಕೆ ಟ್ರಾನ್ಸ್‌ಫರ್
ವರದಿಯಲ್ಲಿ ಏನಿದೆ?
ಪೊಲೀಸರು ಸಂಪೂರ್ಣವಾಗಿ ಕರ್ತವ್ಯಲೋಪ ಎಸಗಿದ್ದಾರೆ. ಆರ್‌ಸಿಬಿ (RCB) ಕಾನೂನಿನ ದುರ್ಬಳಕೆ ಮಾಡಿಕೊಂಡಿದೆ. ಕಾರ್ಯಕ್ರಮದ ನಡೆಸಲು 7 ದಿನ ಮುಂಚಿತವಾಗಿ ಅನುಮತಿ ಕೋರಬೇಕಿತ್ತು. ಅನುಮತಿ ಕೊಡದೇ ಇದ್ದರೂ ಕೂಡ ಕಾರ್ಯಕ್ರಮ ನಡೆಸಿದೆ. ಕಾರ್ಯಕ್ರಮಕ್ಕೆ ಅನುಮತಿ ನೀಡದೇ ಪೊಲೀಸರು ಬಂದೋಬಸ್ತ್ ಮಾಡಿದ್ದಾರೆ. ದುರಂತ ನಡೆಯಬಹುದು ಎನ್ನುವ ವಿಚಾರ ತಿಳಿದಿದ್ದರೂ ತಡೆಯುವ ಪ್ರಯತ್ನ ಮಾಡಲಿಲ್ಲ. ಹೀಗಾಗಿ ಆರ್‌ಸಿಬಿಯ ಜೊತೆ ಪೊಲೀಸರು ಶಾಮೀಲಾಗಿದ್ದಾರೆ.
ಆರ್‌ಸಿಬಿ ತನ್ನ ಅಧಿಕೃತ ಹ್ಯಾಂಡಲ್‌ನಲ್ಲಿ ಬೆಳಗ್ಗೆ ಎರಡು ಪೋಸ್ಟ್ ಮಾಡಿದ ನಂತರ ಸ್ಥಳದಲ್ಲಿ ಭಾರೀ ಸಂಖ್ಯೆಯಲ್ಲಿ ಅಭಿಮಾನಿಗಳು ನೆರೆದಿದ್ದರು. ಹೆಚ್ಚಿನ ಸಂಖ್ಯೆಯಲ್ಲಿ ಜನರು ಸೇರಿದ್ದರೂ ಕ್ರೀಡಾಂಗಣಕ್ಕೆ ಪ್ರವೇಶದ ವಿಧಾನದ ವಿವರಗಳನ್ನು ನಿರ್ದಿಷ್ಟವಾಗಿ ತಿಳಿಸಿರಲಿಲ್ಲ.
ಗೇಟ್‌ಗಳ ಪ್ರವೇಶವನ್ನು ನಿಯಂತ್ರಿಸದಿರುವುದು ಮತ್ತು ಕ್ರೀಡಾಂಗಣದ ಪ್ರವೇಶಕ್ಕೆ ಸಂಬಂಧಿಸಿದಂತೆ ಸರಿಯಾದ ವಿವರಣೆ ನೀಡದ ಕಾರಣ ಆಯೋಜಕರೇ ಕಾಲ್ತುಳಿತಕ್ಕೆ ಕಾರಣರಾಗಿದ್ದಾರೆ. ಸರಿಯಾಗಿ ಪೊಲೀಸರಿಂದ ಅನುಮತಿ ಪಡೆಯದೇ ಆತುರದ ನಿರ್ಧಾರ ಕೈಗೊಂಡಿದ್ದರಿಂದ ಈ ದುರಂತ ಸಂಭವಿಸಿದೆ.