– ಡಿಕೆಶಿ ವಿರುದ್ಧ ಆಕ್ರೋಶ ಹೊರ ಹಾಕಿದ ದಿವ್ಯಾಂಶಿ ತಾಯಿ ಅಶ್ವಿನಿ
ಬೆಂಗಳೂರು: ಚಿನ್ನಸ್ವಾಮಿ ಸ್ಟೇಡಿಯಂನಲ್ಲಿ ಕಾಲ್ತುಳಿತ ಪ್ರಕರಣದಲ್ಲಿ (Chinnaswamy Stadium Stampede) ಮೃತಪಟ್ಟಿದ್ದ ದಿವ್ಯಾಂಶಿ ತಾಯಿ ಅಶ್ವಿನಿ ಇಂದು ಕಮರ್ಶಿಯಲ್ ಸ್ಟ್ರೀಟ್ ಪೊಲೀಸ್ ಠಾಣೆಯಲ್ಲಿ ಮರಣೋತ್ತರ ಪರೀಕ್ಷೆ ವೇಳೆ ಮಗಳ ಮೃತದೇಹದಿಂದ ಕಿವಿಯೋಲೆ (Earrings) ಕಳುವಾಗಿದೆ ಎಂದು ದೂರು ನೀಡಿದ್ದಾರೆ.
ದೂರು ನೀಡಿದ ಬಳಿಕ ಪಬ್ಲಿಕ್ ಟಿವಿ ಜೊತೆಗೆ ಮಾತನಾಡಿದ ತಾಯಿ ಅಶ್ವಿನಿ, ಮರಣೋತ್ತರ ಪರೀಕ್ಷೆಯ ಬಳಿಕ ಮಗಳ ಕಿವಿಯೋಲೆ ನಾಪತ್ತೆಯಾಗಿದೆ. ಹಾಗಾಗಿ ಬೌರಿಂಗ್ ಆಸ್ಪತ್ರೆಯ (Bowring Hospital) ವಿರುದ್ಧ ದೂರು ಕೊಟ್ಟಿದ್ದೇನೆ ಎಂದು ತಿಳಿಸಿದರು.
ದಿವ್ಯಾಂಶಿಯ ಹುಟ್ಟುಹಬ್ಬದ ಸಂದರ್ಭದಲ್ಲಿ ಆಕೆಯ ಮಾವ ಓಲೆಯನ್ನು ಉಡುಗೊರೆಯಾಗಿ ನೀಡಿದ್ದರು. ಆ ಓಲೆಯ ಮೇಲೆ ಆಕೆಗೆ ತುಂಬಾ ಅಟ್ಯಾಚ್ಮೆಂಟ್ ಇತ್ತು. ಹಾಗಾಗಿ ಅದು ನನಗೆ ಬೇಕು ಅಂಥ ಕೇಳಿದ್ದೇನೆ ಎಂದರು. ಇದನ್ನೂ ಓದಿ: ಎಂಟ್ರಿ ಫ್ರೀ ಅಂತಾ ಹೇಳಿ ಸ್ಟೇಡಿಯಂ ಗೇಟ್ ಓಪನ್ ಮಾಡಿಲ್ಲ ಯಾಕೆ? – ದಿವ್ಯಾಂಶಿ ತಾಯಿ ಪ್ರಶ್ನೆ
ಮಗಳು ತುಂಬಾ ಆಸೆ ಪಟ್ಟು ಅದನ್ನು ಹಾಕಿಕೊಂಡಿದ್ದಳು. ಒಂದೂವರೆ ವರ್ಷದಿಂದ ಕಿವಿ ಓಲೆ ಬಿಚ್ಚಿರಲಿಲ್ಲ. ಹಾಗಾಗಿ ಅದು ನನಗೆ ಬೇಕು ಎಂದು ಕೇಳಿದ್ದೇನೆ. ಆಸ್ಪತ್ರೆಯಿಂದ ಯಾರು ಸರಿಯಾಗಿ ಪ್ರತಿಕ್ರಿಯೆ ನೀಡದ್ದಕ್ಕೆ ದೂರು ನೀಡಿದ್ದೇನೆ ಎಂದು ತಿಳಿಸಿದರು.
ಡಿಕೆಶಿ ವಿರುದ್ಧ ಆಕ್ರೋಶ
ದಿವ್ಯಾಂಶಿ ಕಿವಿಯೋಲೆ ಕಳವು ವಿಚಾರಕ್ಕೆ ದೂರು ನೀಡಿದ ನಂತರ ತಾಯಿ ಅಶ್ವಿನಿ ಡಿಸಿಎಂ ಡಿಕೆ ಶಿವಕುಮಾರ್ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು. ಘಟನೆ ಬಳಿಕ ಶವಾಗಾರದ ಬಳಿ ದಿವ್ಯಾಂಶಿ ಅಜ್ಜಿಗೆ ಒಳ್ಳೆಯ ಚಿಕಿತ್ಸೆಯನ್ನು ನೀಡುತ್ತೇವೆ ಎಂದು ಭರವಸೆ ನೀಡಿದರು. ಅಜ್ಜಿ ಜೊತೆ ಮಾತನಾಡುವ ಫೋಟೋ ಸಮೇತ ಸೋಶಿಯಲ್ ಮೀಡಿಯಾದಲ್ಲಿ ಡಿಸಿಎಂ ತಮ್ಮ ಅಧಿಕೃತ ಇನ್ಸ್ಟ್ರಾಗ್ರಾಮ್ ಖಾತೆಯಲ್ಲಿ ಪೋಸ್ಟ್ ಮಾಡಿದರು. ಶವಾಗಾರದ ಬಳಿ ಕುಳಿತುಕೊಂಡು ಟ್ರೀಟ್ಮೆಂಟ್ ಬಗ್ಗೆ ಮಾತಾಡ್ತಾರೆ. ಶವಾಗಾರದಲ್ಲಿ ಏನ್ ಟ್ರೀಟ್ಮೆಂಟ್ ಕೊಡುತ್ತಾರೆ ಎಂದು ಪ್ರಶ್ನಿಸಿದರು.