54 ವರ್ಷಗಳ ಬಳಿಕ ಭಾರತದಿಂದ ತಾಯ್ನಾಡಿಗೆ ಹಿಂದಿರುಗುತ್ತಿದ್ದಾರೆ ಈ ಚೀನೀ ಸೈನಿಕ!

Public TV
2 Min Read

ಭೋಪಾಲ್: 1962 ರ ಸಿನೋ-ಭಾರತ ನಡುವೆ ನಡೆದ ಯುದ್ಧದ ವೇಳೆ ಭಾರತದ ಗಡಿ ಪ್ರವೇಶಿಸಿ ಬಂಧನಕ್ಕೊಳಗಾಗಿದ್ದ ಚೀನಿ ಸೈನಿಕ ವಾಂಗ್ ಕ್ಯು 54 ವರ್ಷಗಳ ಬಳಿಕ ತನ್ನ ತಾಯ್ನಾಡು ಚೀನಾಕ್ಕೆ ಹಿಂದಿರುಗುತ್ತಿದ್ದಾರೆ.

ಯುದ್ಧದ ಸಂದರ್ಭದಲ್ಲಿ ವಾಂಗ್ ಕ್ಯು ಅಚಾನಕ್ ಆಗಿ ಭಾರತದ ಗಡಿ ಪ್ರವೇಶಿಸಿದ್ದರು. ಈ ವೇಳೆ ಅವರನ್ನು ಭಾರತದಲ್ಲಿ ಬಂಧಿಸಿ ಜೈಲು ಶಿಕ್ಷೆಗೆ ಗುರಿಪಡಿಸಲಾಗಿತ್ತು. ಬಳಿಕ ಅವರನ್ನು 1969ರಲ್ಲಿ ಜೈಲಿನಿಂದ ಬಿಡುಗಡೆಗೊಳಿಸಲಾಗಿತ್ತು. ನಂತರ ವಾಂಗ್ ಭಾರತೀಯ ಮಹಿಳೆಯನ್ನು ವಿವಾಹವಾಗಿ ಮಧ್ಯ ಪ್ರದೇಶದ ಬಾಲಾಘಾಟ್ ಜಿಲ್ಲೆಯಲ್ಲಿ ನೆಲೆಸಿದ್ದರು. 77 ವರ್ಷದ ವಾಂಗ್ ಪತ್ನಿ ಸುಶೀಲಾ, ಪುತ್ರ ವಿಷ್ಣು ಸೇರಿದಂತೆ ವಾಂಗ್ ಮತ್ತು ಅವರ ಕುಟುಂಬದ ನಾಲ್ವರು ಸದಸ್ಯರು ಶುಕ್ರವಾರ ವೀಸಾ ಪಡೆದುಕೊಂಡಿದ್ದು, ಇಂದು ಚೀನಾಕ್ಕೆ ತೆರಳಲಿದ್ದಾರೆ. ಭಾರತೀಯ ವಿದೇಶಾಂಗ ವ್ಯವಹಾರಗಳ ಸಚಿವಾಲಯದ ನೆರವಿನಿಂದ ಇದು ಸಾಧ್ಯವಾಗಿದೆ ಎಂದು ಬಾಲಘಟ್ ಜಿಲ್ಲಾಧಿಕಾರಿ ಭರತ್ ಯಾದವ್ ತಿಳಿಸಿದ್ದಾರೆ.

ಭಾರತಕ್ಕೆ ಆಗಮಿಸಿದ್ದ ಚೀನಾದ ರಾಯಭಾರಿಗಳು ವಾಂಗ್‍ರನ್ನು ಭೇಟಿ ಮಾಡಿದ ಒಂದು ವಾರದೊಳಗೆ ಈ ಬೆಳವಣಿಗೆಯಾಗಿದೆ ಎಂಬುದು ವಿಶೇಷ. 5 ದಶಕಗಳ ಬಳಿಕ ಚೀನಾಗೆ ಭೇಟಿ ನೀಡುತ್ತಿರುವ ವಾಂಗ್ ಶಾಂಗ್ಸಿ ಪ್ರಾಂತ್ಯದಲ್ಲಿರುವ ತನ್ನ ಮನೆಗೆ ತೆರಳಿ ಕುಟುಂಬ ಸದಸ್ಯರನ್ನು ಭೇಟಿ ಮಾಡಲಿದ್ದಾರೆ.

ನನ್ನ ತಂದೆ ಚೀನಾಗೆ ಹೋಗಲು ಈ ಹಿಂದೆ ಹಲವು ಬಾರಿ ಪ್ರಯತ್ನಿಸಿದ್ದರಾದ್ರೂ ಯಾವುದೇ ಪ್ರಯೋಜನವಾಗಿರಲಿಲ್ಲ. 2009ರಲ್ಲಿ ಮಧ್ಯಪ್ರದೇಶ ಹೈಕೋರ್ಟ್ ಮೊರೆಹೋದರೂ ಯಶಸ್ಸು ಸಿಕ್ಕಿರಲಿಲ್ಲ. ಚೀನಾ ಮೂಲದವರಾದ್ದರಿಂದ ಅವರಿಗೆ ಭಾರತದ ಪೌರತ್ವ ಕೂಡ ಸಿಗದಿದ್ದರಿಂದ ಅವರು ಭೂಮಿ ಕೊಳ್ಳಲು ಆಗಿರಲಿಲ್ಲ ಹಾಗೂ ಸಾಕಷ್ಟು ಸೌಲಭ್ಯಗಳಿಂದ ವಂಚಿತರಾಗಿದ್ದಾರೆ. ವಾಂಗ್ ಅವರ ತಾಯಿ 2006ರಲ್ಲಿ ಮರಣ ಹೊಂದಿದ್ರು. ಈ ದುಃಖದ ಸಂದರ್ಭದಲ್ಲೂ ಅವರು ಕುಟುಂಬಸ್ಥರ ಜೊತೆ ಇರಲು ಸಾಧ್ಯವಾಗಲಿಲ್ಲ ಎಂದು ವಾಂಗ್ ಅವರ ಮಗ ವಿಷ್ಣು ಪತ್ರಿಕೆಯೊಂದಕ್ಕೆ ತಿಳಿಸಿದ್ದಾರೆ.

ಇದಾದ ಮೂರು ವರ್ಷಗಳ ಬಳಿಕ ಭಾರತಕ್ಕೆ ಪ್ರವಾಸಕ್ಕೆಂದು ಬಂದಿದ್ದ ತನ್ನ ಅಣ್ಣನ ಮಗ ಯುನ್ ಚುನ್‍ರನ್ನು ವಾಂಗ್ ಭೇಟಿ ಮಾಡಿದ್ದರು. ಈ ವೇಳೆ ಚೀನಾಗೆ ಮರಳಬೇಕೆಂಬ ತನ್ನ ಬಯಕೆಯನ್ನು ಹೇಳಿಕೊಂಡಿದ್ದರು. ಮನೆಗೆ ಹಿಂದಿರುಗಿದ ಬಳಿಕ ಚುನ್ ಚೀನಾದ ಕೆಲ ರಾಜಕಾರಣಿಗಳು ಹಾಗೂ ಅಧಿಕಾರಿಗಳನ್ನ ಸಂಪರ್ಕಿಸಿ ತನ್ನ ಮಾವನನ್ನು ಮನೆಗೆ ಕರೆತರಲು ಸಹಾಯ ಕೇಳಿದ್ರು. ಕೊನೆಗೆ ಚೀನಾದ ವಿದೇಶಾಂಗ ಮಂತ್ರಿಗಳನ್ನು ಭೇಟಿ ಮಾಡಿದಾಗ ಮಾರ್ಚ್ 2013ರಲ್ಲಿ ವಾಂಗ್ ಅವರಿಗೆ ಚೀನಾದ ಪಾಸ್‍ಪೋರ್ಟ್ ಸಿಕ್ಕಿತ್ತು.

Share This Article
Leave a Comment

Leave a Reply

Your email address will not be published. Required fields are marked *