ಯುವತಿ ಆಸೆ ಪೂರೈಸಲು ಹೋಗಿ ಪೈಲಟ್ ಅಮಾನತು

Public TV
1 Min Read

ಬೀಜಿಂಗ್: ಯುವತಿಯೊಬ್ಬಳ ಆಸೆ ಪೂರೈಸಲು ಹೋಗಿ ಪೈಲಟ್ ಓರ್ವ ಅಮಾನತುಗೊಂಡ ಘಟನೆ ಚೀನಾದಲ್ಲಿ ನಡೆದಿದೆ. ಯುವತಿ ಆಸೆಯಿಂದ ಈಗ ಪೈಲಟ್ ಕೆಲಸ ಕಳೆದುಕೊಂಡಿದ್ದಾನೆ.

ಆಸೆ ಎಲ್ಲರಿಗೂ ಇದ್ದೇ ಇರುತ್ತೆ. ಆದರೆ ಬೇರೆಯವರ ಆಸೆ ಪೂರೈಸಲು ಹೋಗಿ ಸಾಕಷ್ಟು ಮಂದಿ ತಮ್ಮ ಬದುಕನ್ನು ಹಾಳು ಮಾಡಿಕೊಂಡ ಪ್ರಕರಣ ಕೂಡ ಇದೆ. ಹೀಗೆ ಚೈನಿಸ್ ಪೈಲಟ್ ಓರ್ವ ವಿಮಾನದಲ್ಲಿ ಪ್ರಯಾಣಿಸುತ್ತಿದ್ದ ಯುವತಿಯೊಬ್ಬಳ ಆಸೆ ತೀರಿಸಲು ಹೋಗಿ ತನ್ನ ಕೆಲಸ ಕಳೆದುಕೊಂಡಿದ್ದಾನೆ. ಯುವತಿಯೊಬ್ಬಳು ನನಗೆ ಪೈಲಟ್ ಸೀಟ್‌ನಲ್ಲಿ ಕುಳಿತುಕೊಳ್ಳಬೇಕೆಂಬ ಆಸೆ ಇದೆ. ದಯವಿಟ್ಟು ಒಮ್ಮೆ ಅವಕಾಶ ಮಾಡಿಕೊಡಿ ಎಂದು ಪೈಲಟ್ ಬಳಿ ಕೇಳಿಕೊಂಡಿದ್ದಳು. ಯುವತಿ ಮನವಿಗೆ ಪೈಲಟ್ ಮನಸೋತು ಆಕೆಗೆ ವಿಮಾನದ ಕಾಕ್‌ಪಿಟ್‌ನಲ್ಲಿ ಬರಲು ಅವಕಾಶ ಕೊಟ್ಟಿದ್ದಲ್ಲದೆ, ಅಲ್ಲಿ ಪೈಲಟ್ ಸೀಟ್‌ನಲ್ಲಿ ಆಕೆ ಕುಳಿತ ಫೋಟೋವನ್ನು ಕ್ಲಿಕ್ಕಿಸಿದ್ದ.

ಅಷ್ಟೇ ಅಲ್ಲದೆ ಪೈಲಟ್ ಸೀಟಿನಲ್ಲಿ ಕುಳಿತ ಫೋಟೋವನ್ನು ಯುವತಿ ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಳು. ನನಗೆ ಈ ಅದ್ಭುತ ಅವಕಾಶ ಒದಗಿಸಿಕೊಟ್ಟ ಕ್ಯಾಪ್ಟನ್‌ಗೆ ಧನ್ಯವಾದಗಳು ಎಂದು ಕ್ಯಾಪ್ಷನ್ ಕೂಡ ಬರೆದಿದ್ದಳು. ಈ ಪೋಸ್ಟ್ ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿತ್ತು.

ಫೋಟೋ ವೈರಲ್ ಆಗುತ್ತಿದ್ದಂತೆ ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿ ಗಮನಕ್ಕೆ ಈ ವಿಚಾರ ತಿಳಿದಿದೆ. ಕಾಕ್‌ಪಿಟ್‌ನಲ್ಲಿ ಪ್ರಯಾಣಿಕರಿಗೆ ಪ್ರವೇಶವಿಲ್ಲದಿದ್ದರೂ ಪೈಲಟ್ ಅವಕಾಶ ಕೊಟ್ಟಿದ್ದಾರೆ. ಇದರಿಂದ ವಿಮಾನದ ಪ್ರಯಾಣಿಕರ ಸುರಕ್ಷತೆ, ವಿಮಾನ ಸಂಸ್ಥೆಯ ಮೇಲಿನ ನಂಬಿಕೆ ಹಾಳಾಗುತ್ತದೆ ಎಂದು ಕೋಪಗೊಂಡ ಅಧಿಕಾರಿಗಳು ಆ ಪೈಲಟ್‌ನನ್ನೇ ಅನಿರ್ದಿಷ್ಟಾವಧಿಗೆ ಅಮಾನತುಗೊಳಿಸಿದ್ದಾರೆ.

ಚೀನಾದ ನಾಗರಿಕ ವಿಮಾನಯಾನ ಆಡಳಿತ ಮಂಡಳಿ ನಿಯಮದ ಪ್ರಕಾರ, ಪ್ರಯಾಣಿಕರು ಕಾಕ್‌ಪಿಟ್‌ನೊಳಗೆ ಪ್ರವೇಶ ಮಾಡುವಂತಿಲ್ಲ. ವಿಶೇಷ ಅನುಮತಿ ಇದ್ದರೆ ಅಥವಾ ತುರ್ತು ಪರಿಸ್ಥಿತಿಯಲ್ಲಿ ಮಾತ್ರ ಪ್ರಯಾಣಿಕರಿಗೆ ಒಳಗೆ ಪ್ರವೇಶಿಸಲು ಅವಕಾಶ ನೀಡಲಾಗುತ್ತದೆ. ಆದರೆ, ನಿಯಮ ಉಲ್ಲಂಘಿಸಿ ಯುವತಿಯನ್ನು ಒಳಗೆ ಬಿಟ್ಟಿದ್ದಲ್ಲದೆ, ಪೈಲಟ್ ಸೀಟಿನಲ್ಲಿ ಕುಳಿತು ಫೋಟೋ ತೆಗಿಸಿಕೊಳ್ಳಲು ಅವಕಾಶ ನೀಡಿದ್ದು ತಪ್ಪು. ಹೀಗಾಗಿ ತಪ್ಪು ಮಾಡಿದ ಪೈಲಟ್ ಜೊತೆಗೆ ಆತನಿಗೆ ಸಹಕರಿಸಿದ ಇತರೆ ಸಿಬ್ಬಂದಿಯನ್ನೂ ಅಧಿಕಾರಿಗಳು ಅಮಾನತು ಮಾಡಿದ್ದಾರೆ ಎನ್ನಲಾಗಿದೆ.

Share This Article
Leave a Comment

Leave a Reply

Your email address will not be published. Required fields are marked *